ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ ||
ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ
ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ
ನಾನು ಮೇಲೆ ನೀನು ಕೆಳಗೆ | ನೀನು ಮೊದಲು ನಾನು ಕೊನೆಗೆ
ಆದ್ರು ಕೂಡ ನಾನು ನೀನು | ಬೇರೆ ಬೇರೆ ಅಲ್ಲ ಕೊನೆಗೆ
ದಿಕ್ಕೂ ಬ್ಯಾರೆ ಬ್ಯಾರೆ ಆದ್ರು| ಆಕಾಶೆಲ್ಲಾ ಒಂದೇ
ಧ್ರುವಗಳೆಳ್ಡು ಬ್ಯಾರೆ ಆದ್ರು| ಭೂಮಿ ಮಾತ್ರ ಒಂದೇ
ತುದಿಗಳೆಲ್ಡು ಕೊನೆಗೆ ಇದ್ರು | ಕೋಲು ಮಾತ್ರ ಒಂದೇ
ದಂಡೆ ಎಳ್ಡು ಬ್ಯಾರಿರಭೌದು | ಮಧ್ಯದ ಹೊಳೇ ಒಂದೇ
ನನ್ನ ನೀನು ನಿನ್ನ ನಾನು | ನೋಡಿ ಅಳೆಯುವಂತೆ
ಇನ್ನೂ ಯಾರು ಮಾಡಲಾರ್ರು| ಕೂಡಿ ಬಾಳುವಂತೆ
ನಿಂದು ನಂಗೆ ನಂದು ನಿಂಗೆ | ಬಿಂಬಾ ಪ್ರತಿ ಬಿಂಬಾ
ಇದರಾಬದರಾ ಇರೋದ್ರಿಂದ | ತೋರ್ಕೆ ಭೇದ ತುಂಬಾ
ಅಲ್ಲಿಂದಿಲ್ಲೀ ಇಲ್ಲಿಂದಲ್ಲೀ | ಹಾರ್ತೀ ಬಿಟ್ಟೀ ಹಂಗೆ
ಇದ್ದಲ್ಲೇ ಇದ್ದು ತೋರ್ತೀನ್ನಾನು | ಬೆಟ್ಟದ್ಹಂಗೆ
ಎಲ್ಲಾ ಕಡೆಗೆ ಮ್ಯಾಲೆ ಮ್ಯಾಲೆ | ಥಳಕು ಬಳಕು ಮಾಡ್ತಿ
ಒಳಗೇನಿಲ್ಲ ಎನ್ನುವಂಥ | ಸಂಶೇದಾಗೆ ದೂಡ್ತಿ
ಸುತ್ತೂ ಬಳ್ಸೂ ಯಾಕೆ ಕೇಳು | ನನ್ನ ಮನದುದ್ದೇಶ
ನಂದೂ ಒಳಗೇ ನಿಂದೂ ಹೊರಗೆ | ಹರೀತಾವೆ ಪಾಶ
ಅತಿಯಾಗ್ಬಾರ್ದು ಯಾವ್ದೇ ಆದ್ರು | ಹೌದೋ ಅಲ್ಲೋ ಹೇಳು
ಎರಡೂ ಕೂಡಿ ಸಾಗಿದ್ರೇನೆ | ಬಂಗಾರಾಗ್ತಾದ ಬಾಳು
ಭಾಳ ಓಡ್ತಿ ನಿಲ್ಲು ಸ್ವಲ್ಪ | ಕುಂತು ನಿಂತು ಹೋಗು
ಭಾಳಾ ಆಡ್ತಿ ಪುರಸತ್ತಿಲ್ದೆ | ದಮ್ಮು ಎಳಕೊಂಡ್ ಸಾಗು
ಉದ್ದಾ ಅಗಲ ಓಡಾಡಬ್ಯಾಡ | ಆಳಕ್ ಸ್ವಲ್ಪ ಇಳೀ
ಅತ್ತಾ ಇತ್ತಾ ಹರದಾಡಬ್ಯಾಡ | ಕದಡು ನೀರ ತಿಳೀ
ಮ್ಯಾಲೆಮಾಲೆ ಕೈಯಾಡ್ಸಿದ್ರೆ | ನೊರೆ ಬುರುಗು ಅಂದ
ಒಳಾಗಿಳ್ದು ಜಾಲಾಡಿದ್ರೆ | ಮುತ್ತು ರತ್ನ ಚೆಂದ
***