ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ
ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ
ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ
ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ||
ಧರ್ಮ ಶಾಸ್ರ ಗ್ರಂಥ ಸೂತ್ರ ನಿನಗೆ ಯಾತಕೆ
ಕರ್ಮಗೇಡಿ ಕೆಲಸಗೇಡಿ ನಡುವಿನವರಿಗೆ
ಪುಣ್ಯ ತೊಳೆಯ ಪುಣ್ಯ ಕ್ಷೇತ್ರ ನಿನಗೆ ಯಾತಕೆ
ಪಣ್ಯ ನಾರಿಯಂತೆ ಸುಲಿವ ನಡುವಿನವರಿಗೆ ||೧|
ತೊಳೆಯಲೆಂದು ನದಿಯ ನೀರು ನಿನಗೆ ಯಾತಕೆ
ಆಭರಣ ಅಲಂಕಾರ ನಿನಗೆ ಯಾತಕೆ
ಶೋಭೆಯಿಂದ ಸೋಗು ಮೆರೆವ ನಡುವಿನವರಿಗೆ ||೨||
ಪೂಜೆಯೋಜೆ ಯಜ್ಞಯಾಗ ನಿನಗೆ ಯಾತಕೆ
ಸಾಜವಾಗಿ ಕುಳಿತುಣ್ಣಲು ನಡುವಿನವರಿಗೆ
ಜಪವು ತಪವು ಕಿಙತ೯ನೆಗಳು ನಿನಗೆ ಯಾತಕೆ
ಕಪಟತನವ ಮಾಡುವಂಥ ನಡುವಿನವರಿಗೆ ||೩||
ಪುರಾಣ ಪುಣ್ಯ ಕಥೆಯು ನಿನಗೆ ಯಾತಕೆ
ಬರೀ ಕುರಿಗಳಾಗಲೆಂಬ ನಡುವಿನವರಿಗೆ
ಹಬ್ಬ ಪರಿಷೆ ಉತ್ಸವಗಳು ನಿನಗೆ ಯಾತಕೆ
ಕೊಬ್ಬು ಬಾಯಿ ತಿಂಡಿಗಾಗಿ ನಡುವಿನವರಿಗೆ ||೪|
ಹೂವು ಹಣ್ಣು ನೈವೇದ್ಯವು ನಿನಗೆ ಯಾತಕೆ
ನೋವಿಲ್ಲದೆ ಹೊಟ್ಟೆ ಹೊರೆವ ನಡುವಿನವರಿಗೆ
ಕಪ್ಪೆ ಮಂತ್ರ ಪಠಣ ಗಡಣ ನಿನಗೆ ಯಾತಕೆ
ಬೆಪ್ಪು ಮಾಡಲೆಲ್ಲರನ್ನು ನಡುವಿನವರಿಗೆ ||೫|
ಗಂಟೆ ಜಗಟೆ ತಾಳ ಬೇರಿ ನಿನಗೆ ಯಾತಕೆ
ಕಂಠ ಮಟ್ಟ ತಿಂಬ ವೇಳೆ ನಡುವಿನವರಿಗೆ
ಮಂಡೆ ಬೋಳು ಕಾವಿ ಬಟ್ಟೆ ನಿನಗೆ ಯಾತಕೆ
ಭಂಡ ಪಾಪ ಮುಚ್ಚಿ ಕೊಳಲು ನಡುವಿನವರಿಗೆ ||೬||
ಹೆಣ್ಣು ಸೇವೆ ದೇವದಾಸಿ ನಿನಗೆ ಯಾತಕೆ
ಹಣ್ಣು ಮಾಡಿ ಸವಿಯಲಿಕ್ಕೆ ನಡುವಿನವರಿಗೆ
ಅಡ್ಡ ಉದ್ದ ನಾಮಾವಳಿ ನಿನಗೆ ಯಾತಕೆ
ಗೊಡ್ಡಮ್ಮಯನೇರುವಂಥ ನಡುವಿನವರಿಗೆ ||೭||
ಗಂಧಾಕ್ಷತೆ ದೀಪ ಧೂಪ ನಿನಗೆ ಯಾತಕೆ
ಮಂದಮತಿಯ ಬೆಳೆಸಲಿಕ್ಕೆ ನಡುವಿನವರಿಗೆ
ಹುಂಡಿಯಲ್ಲಿ ಲಕ್ಷ ನೋಟು ನಿನಗೆ ಯಾತಕೆ
ದಂಡ ಕಪ್ಪ ಹಣವ ಪಡೆದ ನಡುವಿನವರಿಗೆ ||೮||
ಹೊಸಾ ಹೊಸಾ ಗುಡಿಗೋಪುರ ನಿನಗೆ ಯಾತಕೆ
ಹೊಸಾ ಸುಲಿಗೆಗಳಿಗೆ ಕಳಸ ನಡುವಿನವರಿಗೆ
ಅದ್ಭುತ ಪವಾಡ ಮೆರೆತ ನಿನಗೆ ಯಾತಕೆ
ಅಬ್ಬರದಲಿ ಮಟ್ಟು ಬೆಳೆಸೆ ನಡುವಿನವರಿಗೆ ||೯|
ಅವತಾರೋದ್ಧಾರ ಕಥನ ನಿನಗೆ ಯಾತಕೆ
ಸವಿಯಾಗಿಯೆ ಕುರಿಬೋಳಿಸೆ ನಡುವಿನವರಿಗೆ
ನಿನ್ನ ಹೆಸರಿನಲ್ಲಿ ಎಲ್ಲ ನಿನಗೆ ಯಾತಕೆ
ನಿನ್ನವರೆಗೆ ಅಲ್ಲ ಬರೀ ನಡುವಿನವರಿಗೆ ||೧೦||
ನನ್ನ ನಿನ್ನ ನಡುವೆ ನಡುವಿನವರು ಯಾತಕೆ
ನನಗೆ ನೀನು ನಿನಗೆ ನಾನು ಬೇರೆ ಯಾತಕೆ ||೧೧||