ಜನಾರಣ್ಯದಿಂದ ಮರುಭೂಮಿಗೆ

ಬೆಳಗಾಂ- ಧಾರವಾಡ- ಜಮಖಂಡಿ- ಮುಂಬಯಿ-

ಬೆಳಗಾಂ- ಅರೇಬಿಯಾ- ಯೂರೋಪ್- ಬೆಳಗಾಂ- ಬೆಂಗಳೂರು

ಅರೆ, ಇದು ಯಾವ ಸಂಚಾರೀ ಮಾರ್ಗ?
ವಿಚಿತ್ರವಾದರೂ  – ಇದು ನನ್ನ ಬಾಳಿನ ಸಂಚಾರದ ಮಾರ್ಗ.

1960-70ರ ಸುಮಾರಿಗೆ ಕೊಲ್ಲಿದೇಶಗಳ (ಗಲ್ಫ್ ಕಂಟ್ರೀಸ್) ಹಣದುಬ್ಬರದ ಗಾಳಿ ಆಗಲೇ ಸಾಕಷ್ಟು  ಇಂಡಿಯಾದೆಡೆಗೆ ಬೀಸುತ್ತಿತ್ತು. ಸ್ವಲ್ಪ ಪ್ರಯತ್ನಮಾಡಿದರೆ ಅಲ್ಲಿಗೆ ಹೋಗುವಂಥ ವರುಷಗಳವು. ಅದರೆ ಎಷ್ಟೋ ಸುಳ್ಳು – ಕಟ್ಟು ಕಥೆಗಳಿಗೆ ಹೆದರಿ ಜನ ಹೋಗಲು ಸ್ವಲ್ಪ ಹಿಂಜರಿಯುತ್ತಿದ್ದರು. “ಇಂತಹದರಲ್ಲಿ ಕೇರಳೀಯರು, ಸಿಂಧಿಗಳು ಧ್ಯೆರ್ಯಮಾಡಿ ಮುನ್ನುಗ್ಗತೊಡಗಿ ಒಂದೆರಡು ವರುಷಗಳ ನಂತರ ಮರಳಿ ರಜೆಗೆ ಭಾರತಕ್ಕೆ ಬಂದಾಗ ಅವರ ವೈಭವ ನೋಡಿ ಜನ ಬೆಪ್ಪಾಗತೊಡಗಿದರು. ನಂತರ ಎಷ್ಟೋ ಜನರು ತಮ್ಮ ಕಂಪನಿಗಳು-ಫ್ಯಾಕ್ಟರಿಗಳು-ಅಸ್ಪತ್ರೆಗಳಿಗೆ ರಾಜಿನಾಮೆ ಕೊಡುತ್ತ ಕೊಲ್ಲಿದೇಶಗಳಿಗೆ .ನುಗ್ಗತೊಡಗಿದರು. ನಮ್ಮ ಕರ್ನಾಟಕದ ಕಡೆಗೆ ಅದರ ಪರಿಚಯ ಆಗ ಹೆಚ್ಚಿರಲಿಲ್ಲ. ಏನೇನೊ? ಕಥೆ ಹೇಳಿ ಹೋಗುವವರನ್ನು ಬಿಡಿಸಿದ ಸಾಕಷ್ಟು ಉದಾಹರಣೆಗಳಿವೆ. ಕೇರಳ-ಬಾಂಬೆ-ದಿಲ್ಲಿ ಜನ ಹುಷಾರು. ಕಥೆಗಳಿಗೆ ಹೆದರಿ ಕುಳಿತು ಕೊಳ್ಳುವವರಲ್ಲ. ಬಂದ ಅವಕಾಶ ತಪ್ಪಿಸದೇ ಉಪಯೋಗಿಸಿಕೊಳ್ಳುವಂಥವರು. ಹೀಗಾಗಿ ವರ್ಷ ವರ್ಷಕ್ಕೆ ಕೊಲ್ಲಿದೇಶಗಳಿಗೆ ಹೋಗುವ ಅವರ ಪ್ರಮಾಣ ಹೆಚ್ಚಾಗುತ್ತಲೇ ಹೊರಟಿತು.

ನಾವು ಮದುವೆಯಾದ ನಂತರ ಬಾಂಬೆಯಲ್ಲಿ ಒಂದೂವರೆ ವರ್ಷ ಕಳೆದಿದ್ದೆವು. ನನ್ನವರು 4-5 ವರ್ಷ ಮೊದಲಿನಿಂದಲೂ ಅಲ್ಲಿಯ ಒಂದು ಒಳ್ಳೆಯ ಕಂಪನಿಯಲ್ಲಿ ಇಂಜಿನಿಯರಾಗಿದ್ದರು. ಅಲ್ಲಿಯ ಯಾಂತ್ರಿಕ ಜೀವನಕ್ಕೆ ಆಗಾಗ ಮನಸ್ಸು ಬೇಸರ ಗೊಳ್ಳುತ್ತಿತ್ತು. ‘ಹಾಗೆಂದರೆ ಆಗುವುದಾದರು ಏನು?’ ಎಂದು ಹೊಂದಿಕೊಳ್ಳುತ್ತಿದ್ದೆ. ಆದರೆ ಬರಬರುತ್ತ ನಮ್ಮವರು 6 ವರ್ಷದ ಅಫೀಸಿನ ಹೊಲಸುವಾತಾವರಣದಲ್ಲಿ ತುಂಬಾ ತಲೆ ಬಿಸಿಮಾಡಿ ಕೊಂಡಿದ್ದರು. ‘ಅಂದರೆ ಅಗುವುದಾದರೂ ಏನು? ನೀವೇ ಸಮಾಧಾನವಾಗಿ ಹೊಂದಿಕೊಳ್ಳಬೇಕು, ಎನ್ನುತ್ತಿದ್ದೆ.

ಈ ಮೊದಲೇ ಹೇಳಿದಂತೆ ಖಾರಿ (Gulf) ದೇಶಗಳ ಪ್ರಭಾವ ಹೆಚ್ಚಾಗುತ್ತಿರುವ ಸಮಯದಲ್ಲಿ ಆಫೀಸಿನ ಓಕರಿಕೆಯ ರಾಜಕೀಯಕ್ಕೆ ಬೇಸತ್ತು, 1978ರ ಕೊನೆಯೆ 2-3 ತಿಂಗಳಲ್ಲಿ ನಮ್ಮವರು, ಗೋವಿಂದ ಪೈಗಳು “ಪ್ರಾಸವನೀಗಲೆ ತೊರೆದು ಬಿಡುವುದೆ ನಿಶ್ಚಯಂ” ಎಂದು ಪ್ರತಿಜ್ಞೆ ಮಾಡಿದಂತೆ, ತಮ್ಮ ನಿರ್ಧಾರ ಗಟ್ಟಿ ಮಾಡಿಕೊಂಡು, “ಪರದೇಶ-ಕೀಗಲೆ ತೆರಳಿ ಬಿಡುವುದೆ ನಿಶ್ಚಯಂ” ಎಂದು  ಶುರುಮಾಡಿ ಉದ್ಯೋಗದ ಕರೆಗಳಿಗೆ ಅರ್ಜಿ ಗುಜರಾಯಿಸತೊಡಗಿದರು.

1978ರ ಡಿಸಂಬರ್ ಮೊದಲನೆಯ ವಾರದಲ್ಲಿ ಹೋಟೆಲ್ ತಾಜ್‌ನಲ್ಲಿ ಒಂದು ಸಂದರ್ಶನದ ಕರೆ ಬಂದೇ ಬಿಟ್ಟಿತು.  ಸಂಜೆ ತುಂಬಾ ಖುಷಿಯಿಂದ ಮನೆಗೆ ಬಂದಾಗಲೇ ನನಗೆ ಗೊತ್ತಾಯಿತು. ಈ ಹಿಂದಿನ ಎರಡು-ಮೂರು ಸಂದರ್ಶನಗಳಿಗೂ ಇಂದಿನದಕ್ಕೂ ತುಂಬಾ ವ್ಯತ್ಯಾಸವಿದೆ ಎಂದು. ಇವರೂ ತುಂಬಾ ಖುಷಿ ವ್ಯಕ್ತಪಡಿಸಿದರು. ಕೈತುಂಬ ಹಣ – ಇರಲು ಒಳ್ಳೆಯ ಸುಸಜ್ಜಿತ ಮನೆ, ಕಾರು, ವರ್ಷಕ್ಕೊಂದು ಸಲ ಸ್ವದೇಶಕ್ಕೆ ಹೋಗಿ ಹಿಂತಿರುಗಿಲು ಪ್ರಯಾಣ ಖರ್ಚು ವೈದ್ಯಕೀಯ ಹಾಗೂ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚುಗಳು-ಮುಂತಾದ ಸೌಲಭ್ಯಗಳನ್ನು ನೀಡುವ ಕಾಂಟ್ಟಾಕ್ಟ್ ನನ್ನವರಿಗೆ ಒಪ್ಪಿಗೆಯಾಗಿತ್ತು.

ಸೌದಿ ಅರೇಬಿಯಾ ದೇಶದ ಜೆಡ್ಡಾ (Jeddha) ಪಟ್ಟಣದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕೆಲಸ ಆಗಲೇ ಶುರುವಾಗಿ 4-5 ವರ್ಷಗಳೇ ಆಗಿದ್ದವು. ಜರ್ಮನ್ ಕಂಪನಿ ಕಾಂಟ್ರಾಕ್ಟ್ ತೆಗೆದುಕೊಂಡಿತ್ತು.ಆಗಲೇ ಜರ್ಮನಿಯಿಂದ ಸಾಕಷ್ಟು ಇಂಜಿನಿಯರರು, ಇನ್ನಿತರ ಸಿಬ್ಬಂದಿಗಳೆಲ್ಲ ಬಂದಿದ್ದರು. ಅವರಿಗೆ  ನಿರ್ದಿಷ್ಟ ಕ್ಷೇತ್ರದ ವಿಷಯತಜ್ಞ ಇಂಜಿನೀಯರುಗಳು ಬೇಕಾದ್ದುದರಿಂದ ಇಂಡಿಯಾದಲ್ಲಿ ಸಂದರ್ಶನಕ್ಕೆ ಕರೆದಿದ್ದರು. ಈ ಸಂದರ್ಶನಕ್ಕೆ ಬಹುಮಟ್ಟಿಗೆ ಭಾರತದ ಎಲ್ಲ ಭಾಗಗಳಿಂದ 250 ಜನರು ಬಂದಿದ್ದರಂತೆ. ಎಲ್ಲರ ಜೀವನ ವಿವರಗಳು (Bio-data), ಅನುಭವ ಮುಂತಾದವುಗಳನ್ನು ನೋಡಿ ಕೇವಲ 7 ಜನರನ್ನು ಅರಿಸಿಕೊಂಡರು. ಈ 7 ಜನರಲ್ಲಿ ನನ್ನ ಪತಿ ಗುತ್ತಿಯವರೊಬ್ಬರು, ಗುಪ್ತೆ-ಬಾಂಬೆದವರು, ಜೈನ್-  ಯು.ಪಿ.ಕಡೆಯವರು, ಚಂದಾನಿ- ಬರೋಡದವರು, ವೆಂಕಟೇಶ್ವರನ್- ಮದರಾಸಿನರು, ಅಬ್ರಹಾಂ- ಕೇರಳ ದವರು, ಇನ್ನೊಬ್ಬರು ದಿಲ್ಲಿಯವರಿದ್ದು, ಕೊನೆಯ ಸಮಯಕ್ಕೆ ಅವರ ಹೆಂಡತಿಗೆ ಏನೋ ತೊಂದರೆ ಎಂದು ಹೊರಡಲಿಕ್ಕಾಗಲಿಲ್ಲ. ಕೊನೆಗೆ 6 ಜನ ಜೆಡ್ಡಾ(ಸೌದಿ ಅರೇಬಿಯಾ)ಕ್ಕೆ ಹೊರಡಲನುವಾದರು. ಅಂತೂ ಸಪ್ತರ್ಷಿಮಂಡಲದಲ್ಲಿ ಒಂದು ಜಾಗ ತೆರವಾಯಿತು.

ಉಳಿದೆಲ್ಲ ಅನುಕೂಲತೆಗಳು ಬೇಗನೆ ಕೊಡುವದಾಗಿದ್ದರೂ ಕಂಟುಂಬ ಒಯ್ಯಲಿಕೆ ಮೊದಲ ಒಂದು ವರ್ಷದ ಮಟ್ಟಿಗೆ ಇಲ್ಲವೆಂದಾಗಿತ್ತು. ಒಟ್ಬಾರೆ ಈ ಎಲ್ಲ ವಿಷಯಗಳ ಬಗ್ಗೆ ಆಲೋಚಿಸಿ ಮುಂದಿನವಾರ ನಿಮ್ಮೆಲ್ಲರ ನಿರ್ಧಾರ ಹೇಳಿರಿ ಅಂದಿದ್ದರಂತೆ. ಬಹುಶಃ ಎಲ್ಲರೂ ತಮ್ಮ ತಮ್ಮ ಹೆಂಡತಿಯರಿಗೆ ಸಮಾಧಾನ ಹೇಳಿ (ನಮ್ಮವರು ನನಗೆ ಹೇಳಿದಂತೆ) ಒಟ್ಟಿನ ಮೇಲೆ ಒಪ್ಪಿಕೊಳ್ಳುವಂತೆ ಮಾಡಿಸಿ, ಕೊನೆಗೆ ತಮ್ಮ ಸಕಾರಾತ್ಮಕ ನಿರ್ಣಯ ತಿಳಿಸಿದರು.

1979 ಜನವರಿ ಎರಡನೆಯ ವಾರದಲ್ಲಿ ಜೆಡ್ಡಾದಿಂದ ವೀಸಾ ಮತ್ತು ಟಿಕೇಟ್‌ಗಳು ಬಂದವು. ನಿಜವಾಗಿ ಆವಾಗ ನನಗೆ ಒಂದೆಡೆ ಖುಷಿಯಾದರೆ, ಮತ್ತೊಂದಡೆ ಹೆದರಿಕೆ-ಬೇಸರ ಅನಿಸತೊಡಗಿತು. ನಮ್ಮ ಸಂಸಾರ ನೌಕೆ ತೇಲ ತೊಡಗಿ ಸುಮಾರು ಮೂರು ವರ್ಷಗಳಾಗಿದ್ದವು. ಮುದ್ದಾದ ಮೊಗ್ಗೊಂದು ಅರಳಿತ್ತು. ಮುಂಬಯಿಯ ಜನಸಾಗರದಲ್ಲೂ ನನಗೆ ನನ್ನವರ ಸ್ನೇಹಮಯತೆಯಿಂದಾಗಿ ಯಾಂತ್ರಿಕತೆ ಅನ್ನಿಸಿಯೇ ಇರಲಿಲ್ಲ. ಹಳೆಯ ಅನುಬಂಧಗಳಿಗಿಂತ ಇವರದ್ದೇ ಸಂಬಂಧ ಹೆಚ್ಚೆನಿಸಿತ್ತು- ಎಲ್ಲ ಭಾರತೀಯ ಹೆಣ್ಣು ಮಕ್ಕಳಿಗೆ ಅನ್ನಿಸುವ ಹಾಗೆ. ಈ ಒಂದು ವರ್ಷಕಾಲ ಬಿಟ್ಟಿರುವುದೆಂದರೆ… ಅಂತೂ ನಾನು ಮತ್ತು ನಮ್ಮ ಒಂದು ವರ್ಷದ ಮಗಳು ಅಮೃತಾ ನನ್ನ ತಂದೆ-ತಾಯಿಯವರ ಹತ್ತಿರ ಇರುವದೆಂದು ನಿಶ್ಚಯವಾಯಿತು. ಜನವರಿ 26ಕ್ಕೆ ಗುತ್ತಿ ಯವರು ತಮ್ಮ ಉಳಿದ ಸ್ನೇಹಿತರೊಂದಿಗೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೂಡಿದರು. ನಾನೂ ಹೋಗಿದ್ದೆ. ಗುತ್ತಿಯವರ ಮುಂಬಯಿ ಅಫೀಸಿನ ಒಂದಿಬ್ಬರು ಒಳ್ಳೆ ಸ್ನೇಹಿತರೂ ಬಂದಿದ್ದರು. ಎಲ್ಲ ಕಡೆಗೆ ದಟ್ಟಣಿ ಇತ್ತು. ವಿಮಾನ ನಿಲ್ದಾಣದಲ್ಲಿರುವ ಎಲ್ಲ ಔಪಚಾರಿಕತೆಗಳನ್ನು ಮುಗಿಸಿ ಕೊಂಡು ರಾತ್ರಿ 10.30ಕ್ಕೆ ಗುತ್ತಿಯವರು ಪ್ರಯಾಣ ಬೆಳೆಸಿದ ಸೌದಿಯಾ ವಿಮಾನ ಆಕಾಶಕ್ಕೇರಿದಾಗ ನನ್ನ ಗಂಟಲು ತುಂಬಿಬಂದಿತ್ತು.

ಮುಂದೆ ನಾನು ಸುಮಾರು 10 ತಿಂಗಳು ಕಾಲ ನನ್ನ ತಾಯಿ, ತಂದೆ, ತಮ್ಮ ತಂಗಿಯರ ಜೊತೆಗೆ ಜಮಖಂಡಿಯಲ್ಲಿದ್ದೆ. ಈ ನಡುವೆ ನಮ್ಮ ಪತ್ರಗಳು ಪ್ರತಿವಾರ ಕ್ಕೊಂದು ಸಲ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಬಂದು ಹೋಗುತ್ತಿದ್ದವು. ನಮ್ಮ ಕಡೆಯಿಂದ ಪತ್ರಬರೆಯಲು ಅಂತಹ ಹೊಸ ವಿಷಯಗಳೇನೂ ಇರುತ್ತಿರಲಿಲ್ಲ. ಪತ್ರ ಬರೆಯವುವೆಂದರೆ ಅತೀ ಆಲಸ್ಯ ನನಗೆ. ಒಂದೊಂದು ಸಲವಂತೂ 2-3-4 ದಿನಗಳ ತನಕ ಟೇಬಲ್ ಮೇಲೆ ಎರಡೇ ಎರಡು ಸಾಲು ಬರದು ಇಟ್ಟು ಹಾಕಬೇಕಾಗುತ್ತಿತ್ತು. ಈ ವಿಷಯವಾಗಿ ನಾನು ನಮ್ಮವರಿಂದ  ಅಣಕಿಸಿಕೊಳ್ಳುತ್ತಿದೆ. ಇಂಥ ಸಂಗಾತಿಯಿಂದಾಗಿ ನನ್ನವರಿಗೆ ಒಳ್ಳೆಯ ‘ಪತ್ರಗಳ ಮಧುಚಂದ್ರ’ ತಪ್ಪಿತು ಎಂದು ಒಪ್ಪಿಕೊಳ್ಳುತ್ತೇನೆ. ಜೆಡ್ಡಾದ ವಿಷಯವನ್ನೆಲ್ಲಾ ತುಂಬಾ ಸುಂದರವಾಗಿ ಬರೆಯುತ್ತಿದ್ದರು. ತಮ್ಮ ಅನೇಕ ಅನುಭವ ಅನಿಸಿಕೆಗಳನ್ನು ಹೇಳುತ್ತಿದ್ದರು.

ಸ್ಯಾಂಪಲ್‌ಗಾಗಿ ಮೂರು ತುಣುಕಶಿಗಳನ್ನು ಇಲ್ಲಿ ಇಷ್ಟು ವರ್ಷಗಳ ನಂತರ ಬಹಿರಂಗಪಡಿಸುತ್ತಿದ್ದೇನೆ.

ಜೆಡ್ಡಾ 10-2-79

(1)”…..2ನೇ ಫೆಭ್ರವರಿ, ನಮ್ಮ ಮದುವೆಯ 3ನೇ ವರ್ಷ:Long Live our happy married life; 13th Feb. Amritaಳ 2nd birthday. Let God give her good health and wisdom.. ನಾನು ಅಮ್ರಿಯನ್ನು ಇಷ್ಟು ದಿನ ಬಿಟ್ಟಿರುವುದು (ಅವಳಿಗೆ ತಿಳುವಳಿಕೆ ಹೆಚ್ಚಾದಾಗಿನಿಂದ) ಇದೇ ಮೊದಲ ಸಲ. ಆದ್ದರಿಂದ ಅವಳು ಮಾಡಿದ ರಂಪು ಕೇಳಲಿಕ್ಕೆ ಆತುರ.

ಈ ವಾರ ಹೋದದ್ದೇ ಗೊತ್ತಾಗಲಿಲ್ಲ. ಮುಂದಿನ ವಾರದ ನಂತರ ನಾನು ಬಂದು ಒಂದು ತಿಂಗಳಾಗುತ್ತೆದೆ. ಅಂದರೆ ಒಂದು ವರ್ಷದ 1/ 12 ಭಾಗ ಮುಗಿದಂತಾಯಿತು. ದಿನಗಳು ಬಹುಶಃ ಬೇಗ ಸರಿದು ಹೋಗಬಹುದು ಅನಿಸುತ್ತದೆ.
ಹೋಗಲಿ ಬೇಗ.

ನಮಗೆ ಪಾಸ್‌ಪೋರ್ಟ್ ಮತ್ತು ವೀಸಾ ಇದ್ದರೂ ಕೂಡಾ ಇಲ್ಲಿ ಇಳಿದ ತಕ್ಷಣ ಮೂರು ದಿನಗಳ ಒಳಗೇ ಫೋಟೋಗಳ ಜೊತೆ ಅಧಿಕಾರಿಗಳಿಗೆ ರಿಪೋರ್ಟ್ ಮಾಡಬೇಕಾಗುತ್ತದೆ. ನಂತರ ಅವರು ‘ಸೌದಿ ಪರ್ಮಿಟ್’ ಅಂತಾ ಇನ್ನೊಂದು ಪರ್ಮಿಟ್ ಕೊಡುತ್ತಾರೆ. ಇದಿತ್ತೆಂದರೆ ಸಿಟಿಗಳಲ್ಲಿ ಆರಾಮದಿಂದ ತಿರುಗಾಡಬಹುದು.

15-2-79

(2) “…..ಇಲ್ಲಿ ಹೋದ ವಾರದ ವಿಶೇಷವೆಂದರೆ ನನಗೆ ಹೊಚ್ಚ ಹೊಸ ‘ವೊಕ್ಸ್ ‌ವ್ಯಾಗನ್’ ಅಂತಾ ಜರ್ಮನ್ ಕಾರ್ ಸಿಕ್ಕಿರುವುದು. ಕೊಟ್ಟ ದಿನಾನೇ ಪ್ರಾಕ್ಟೀಸ್ ಪ್ರಾರಂಭವಾಗಿದೆ. ನಾನು ಬಹಳ ಕಾಳಜಿಯಿಂದ ನಡೆಸುತ್ತಿದ್ದೇನೆ. ರೋಡ್‌ಗಳು ಬಹಳ ಚೆನ್ನಾಗಿವೆ. ಆದರೂ ನನಗೆ ಮೈಛಳಿ ಬಿಟ್ಟು ಹೊಡೆಯಲಿಕ್ಕಾಗುತ್ತಿಲ್ಲ. ಇನ್ನೊಂದು ವಾರದಲ್ಲಿ ಸರಿಯಾಗಿ ಅಭ್ಯಾಸವಾಗುತ್ತದೆ ಅಂತಾ ಕಾಣಿಸುತ್ತದೆ. ಏಕೆಂದರೆ ಹೊಡೆಯುವವರಿಗ ಗೊತ್ತು ರೋಡಿನ ಡೇಂಜರ್. ನಾನಂತೂ ಎಲ್ಲರಿಗಿಂತ ಕಡಿಮೆ ಸ್ಪೀಡ್‌ನಲ್ಲಿ ಆರಾಮವಾಗಿ ಹೊಡೆಯುತ್ತೇನೆ. ಮೊದಲು ಕಾರು ಕಾರು ಎಂದು ಕನಸು
ಕಾಣುತ್ತಿದ್ದವನು ಈಗ ಅಯ್ಯೋ ಯಾಕಾದರೂ ಬಂತೋ ಅನಿಸುತ್ತಿದೆ. ಅದರೆ ಕೆಲಸದ ದೃಷ್ಟಿಯಿಂದ ಓಡಾಡಲಿಕ್ಕೆ ಕಾರಂತೂ ಬೇಕೇಬೇಕು. ಆದರೆ ಇಲ್ಲಿ ಕಾರಿಗೊಬ್ಬ ಡ್ರಾಯ್‌ವರ್ ಕೊಡಲಿಕ್ಕಾಗುವುದಿಲ್ಲ. ಇಲ್ಲಿಯ ಎಂಥಾ ದೊಡ್ಡ ಮ್ಯಾನೇಜರರಿಗೂ ಕೂಡ ಡ್ರಾಯ್‌ವರ ಇರುವುದಿಲ್ಲ”

“ಅಮೃತಾ, ನೀನು, ನೆನೆಸುವುದು ಸಹಜವೇ ಇದೆ. ಇಲ್ಲಿಂದ ನಿಮ್ಮನ್ನು ನಾನು ನನೆಸುವುದು, ಸಹಜವೇ ಇದೆ. ಮೊನ್ನೆ ಮೊನ್ನೆ ಕೂಡಿ ಇದ್ದವರು ಈಗ ಅದೆಷ್ಟು ದೂರ…”

“ಹವಾಮಾನ ಚೆನ್ನಾಗಿದೆ. ಇಲ್ಲಿ ಬಿರುಬೇಸಿಗೆಯ ದಿನಗಳು ಇನ್ನೂ ಅರಂಭವಾಗಿಲ್ಲ. ಮನೆಯಲ್ಲಿ ಏರ್ ಕಂಡೀಶನರ್ ಇರುವುದರಿಂದ ಎಲ್ಲಾ ತಂಪು. ಅದರೆ ಮನದಲ್ಲಿ ಯಾರು ಏರ್ ಕಂಡೀಶನದ್ ಹಾಕುವವರು? ಅದರ ಸ್ವಿಚ್ ನಿನ್ನ ಕಡೆಗೇ ಇದೆ”.

(3) 22-2-79

“ನನಗೆ ಮೊದಲಿದ್ದ ಕಾರಿನ ಮೋಹ ಈಗ ಕಡಿಮೆಯಾಗಿದೆ. ಅದು ದಿನ ನಿತ್ಯದ ಬಳಕೆಯ ವಸ್ತುವಾಗಿದೆ.

“ಇಲ್ಲಿ ನಮ್ಮ ಕ್ಯಾಂಪಿನ ಪಾಶ್ಚಾತ್ಯ ಬಿಳಿ ಜನ ತಿನ್ನುವುದನ್ನು ನೋಡಿ ಅದನ್ನು ನಮ್ಮ ದೇಶಕ್ಕೆ ಹೋಲಿಸಿದರೆ ವಿಷಾದವಾಗುತ್ತದೆ. ಅಂತೆಯೇ ಈ ಜನ ಅವರ ಹೆಂಡರು ಮಕ್ಕಳು ಟೊಣಪು ಟೊಣಪಾಗಿರುತ್ತಾರೆ. ಇಲ್ಲಿ ಒಬ್ಬರೂ ಕೂಡಾ ಬಡಕಲು, ಅಶಕ್ತರು ಅನ್ನಿಸುವುದಿಲ್ಡ, ಮುದುಕಿಯರೂ ಕೂಡ ಎಷ್ಟು ಧಿಮಾಕಿನಿಂದ ನೆಟ್ಟಗೆ ಮಿಲಿಟರಿಯವರ ಹಾಗೆ ವಾಕ್ ಮಾಡುತ್ತಾರೆ. ನಮ್ಮವರ ಪರಿಸ್ಥಿತಿ ಶೋಚನೀಯ”.

-ಇದನ್ನೆಲ್ಲಾ ಓದುವಾಗ ನನಗೂ ಹೋಗಬೇಕೆನಿಸುತ್ತಿತ್ತು. “ನಾನು ಬರಬೇಕು. ಬೇಗ ವೀಸಾ ಕಳಿಸಿಕೊಡಿರಿ” ವಿಂದು ಬರೆಯುತ್ತಿದ್ದೆ. ಅಗ ಜೆಡ್ಡಾದಲ್ಲಿರುವ ಬರೋಡಾ ದವರಾದ ಮಿ. ಬಾಗಿಯಾ ಎನ್ನುವವರು “ಈ ಜರ್ಮನ್ ಕಂಪನಿಯ ವಿಮಾನ ನಿಲ್ಹಾಣದ ಕೆಲಸದಲ್ಲಿ ಒಳ್ಳೆಯ ಉನ್ನತ ಹುದ್ದೆಯಲ್ಲಿದ್ದರು. ಅವರಿಗೆ ಸುಮಾರು 25 ವರ್ಷಗಳ ಜರ್ಮನ್ ಅನುಭವ ಇದೆ. ಅವರ ಸಹಾಯದ ಮೂಲಕ ವೀಸಾ ಸಿಕ್ಕಿದೆ ಎಂದು ಗುತ್ತಿಯವರು ಬರದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ವೀಸಾವನ್ನು ಬಾಂಬೆ ಯಲ್ಲಿರುವ ಸೌದಿ ರಾಯಭಾರಿ ಕಛೇರಿಗೆ ಕಳಿಸುವುದಾಗಿಯೂ ನಂತರ ಅಲ್ಲಿಂದ ಪಾಸ್‌ಪೋರ್ಟ್‌ನಲ್ಲಿ ಸ್ಟಾಂಪ್ ಮಾಡಿಸಿಕೊಳ್ಳಬೇಕಾಗಿ ವಿದೇಶಾಂಗ ಇಲಾಖೆಯವರು ತಿಳಿಸಿದ್ದರು. ಹೀಗಾಗಿ 10 ತಿಂಗಳ ನಂತರ ಗುತ್ತಿಯವರು ಇಂಡಿಯಾಕ್ಕೆ ಬಂದಿದ್ದರು. ಅಗೆಲ್ಲ ಬಾಂಬೆಯ ಸೌದಿ ಆಫೀಸಿನಲ್ಲಿ ವಿಚಾರಿಸಿದರೆ ಇನ್ನೂ ವೀಸಾ ಬಂದಿಲ್ಲ ಎಂದು ಹೇಳತೊಡಗಿರು. ರಜೆ ಹೆಚ್ಚಿಲ್ಲದ ಕಾರಣ 2 ವಾರ ಅಲ್ಲಲ್ಲಿ ಕಳೆದು ಕೊನೆಗೆ ನಮಗೆಹತ್ತಿರದ ಸ್ನೇಹಿತರಾದ ಬೆಂಗಳೂರಿನ ಶ್ರೀ ಶಿವನಂಜಪ್ಪನವರಿಗೆ (ಈಗ ಇವರು ಸೌದಿ ಅರೇಬಿಯಾದ ಅಲ್‌ಕೋಬರ್‌ ದಲ್ಲಿದ್ದು, ಇತ್ತೀಚೆಗೆ ಜೆಡ್ಡಾಕ್ಕೆ ಹೋಗಿದ್ದಾರೆ). ಮುಂದಿನ ಕಾರ್ಯಭಾರವನ್ನೆಲ್ಲ ಹೊರಿಸಿ ಜೆಡ್ಡಾಕ್ಕೆ ಹೋದರು. ಪಾಸ್‌-ಪೋರ್ಟ್‌, ಇತರ ಕಾಗದ ಪತ್ರಗಳನ್ನೆಲ್ಡ ಕೊಟ್ಟು ನಾನೂ ಬೆಳಗಾಂವಿಗೆ ಮರಳಿದೆ. ಮುಂದೆಲ್ಲ ಅವರು ಸಾಕಷ್ಟು ಸಲ ಸೌದಿರಾಯಭಾರಿ ಕಚೇರಿಗೆ ಓಡಾಡಿ ಎಲ್ಲ ಕೆಲಸ ಮಾಡಿದರು. ಕೊನೆಗೆ ನಾನು ಮಗಳು ಹೊರಡುವುದು 1980 ಜನವರಿ 1 ಎಂದು ಟಿಕೇಟ್‌ಗಳು ಸಿದ್ಧವಾಗಿ ಬಂದವು.

1979 ಡಿಸೆಂಬರ್‌ದಲ್ಲಿ ನಮ್ಮ ತಂದೆಗೆ ಬೆಳಗಾಂವಿಗೆ ವರ್ಗ ಆದುದರಿಂದ ಮನೆ ಸಾಮಾನುಗಳನ್ನು ವರ್ಗಾಯಿಸು- ವುದು, ತಮ್ಮ ತಂಗಿಯರು ತಮ್ಮ ಕಾಲೇಜಿನ ಕಾಗದ ಪತ್ರಗಳನ್ನೆಲ್ಲ ತೆಗೆಸಿಕೊಳ್ಳುವದು, ಈ ನಡುವೆ ಅರೇಬಿಯಾದಲ್ಲಿ ನಮ್ಮ ಕಡೆಯ ಕೆಲವು ವಿಶೇಷ ತಿಂಡಿ ತಿನಿಸುಗಳು ಸಿಗುವದಿಲ್ಲವೆಂದು ಮಸಾಲೆ, ಖಾರಪುಡಿ, ಚಟ್ನಿಗಳು, ಉಪ್ಪಿನ-ಕಾಯಿಗಳು, ಜೊತೆಗೆ ಕೆಲವು ಸಿಹಿ ತಿಂಡಿಗಳನ್ನು ಮಾಡಿಕೊಳ್ಳುವದು ಇತ್ಯಾದಿಗಳಲ್ಲಿ ಸಮಯ ಓಡುತ್ತಿತ್ತು. ಈ ಎಲ್ಲ ವಾತಾವರಣದಿಂದಲೋ, ಇನ್ನೇನು ಹೊರಡುವ ದಿನಗಳು ಬಂದೇ ಬಿಡುತ್ತಿವೆ, ಎಂದೋ ಮನಸ್ಸಿಗೆ ಒಂದು ಥರಾ ತಳಮಳ, ಹೆದರಿಕೆಯಿಂದಾಗಿ ನಿಶ್ಶಕ್ತಳಾದಂತೆ ಅನಿಸುತ್ತಿತ್ತು.

ಬೆಳಗಾಂವಿಯಿಂದ 20 ಕಿ.ಮೀ ದೂರದ ಸಾಂಬ್ರಾ ವಿಮಾನ ನಿಲ್ಹಾಣದಿಂದ ಬಾಂಬೆಗೆ ಹೊರಡುವ Propeller ವಿಮಾನ ಅತೀ ಸಣ್ಣದು. ಸುಮಾರು 50 ಜನರು ಪ್ರವಾಸಿಸುವಂತಹುದು. (ಪ್ರತಿ ಸಾರಿಯೂ ಅದರ ಅತಿಯಾದ ಸಪ್ಪಳದಿಂದ ಅದರ ಅಸಮತೋಲನದಿಂದ ಯಾವಾಗ ಹೊರಗೆ ಹೋದೇನೋ ಅನ್ನುವ ಅನುಭವವಾಗಿದೆ). ಡಿಸೆಂಬದ್ 30ಕ್ಕೆ ಸಂಜೆ ನಮ್ಮ ತಂದೆಯೊಂದಿಗೆ ಬಾಂಬೆಗೆ ಬಂದಿಳಿದೆವು. 2 ದಿನಗಳ ಮೊದಲೇ ಅಲ್ಲಿದ್ದರೆ ಒಳ್ಳೆಯ- ದೆಂದು ನಮ್ಮ ಅಭಿಪ್ರಾಯವಾಗಿತ್ತು. ಮರುದಿನ ಶ್ರೀ ಶಿವನಂಜಪ್ಪನವರಿಗೆ ಆಫೀಸಿಗೆ ಫೋನಿಸಿದಾಗ ಎಲ್ಲಾ ರೆಡಿ ಆಗಿದೆ ವಿಮಾನ ಹತ್ತುವದೊಂದೆ ಉಳಿದಿದೆ ಎಂದರು. ಹೀಗಾಗಿ ಯಾವುದಕ್ಕೂ ಗಡಿಬಿಡಿ ಆಗಲಿಲ್ಲ. ಸಂಜೆ ಮನೆಗೆ ಕರೆದರು.

ಸಂಜೆಯವರೆಗೆ ಸಮಯ ಕಳೆಯವುದಾದರೊ ಹೇಗೆಂದು ಮಧ್ಯಾಹ್ನ ಹಾಗೇ ಬಾಂಬೆ  ಹೊರಟೆವು. ಗೇಟ್‌ವೇ ಆಫ್ ಇಂಡಿಯ, ಮರೀನ್‌ಡ್ರಾಯ್ವ್ ಎರಡು ವರ್ಷಗಳಿಂದ  ಸಲ ನೋಡಿ ಸಾಕಾಗಿದ್ದರೂ ಸುಮ್ಮನೆ ಸುತ್ತಾಡಿದರಾಯಿತೆಂದು ಹೊರಟೆವು. 31 ಡಿಸೆಂಬರ 79ರ ಕೊನೆಯೆ ದಿನ. ನಡುರಾತ್ತಿಯ ಹೊಸ ವರ್ಷದ ಅಗಮನಕ್ಕಾಗಿ ಗೇಟ್‌ವೇ ಆಫ್ ಇಂಡಿಯದ  ನೂರಾರು ದೀಪಗಳಿಂದ ಸಿಂಗರಿ ಸಿದ್ದರು. ಜನ ಎಲ್ಲ ಉಲ್ಲಾಹದಿಂದ  ಇವುಗಳ ನಡುವೆ ಭಿಕ್ಷುಕರ, ಹುಡುಗರ ಹಾವಳಿಯಂತೂ ಹೇಳತೀರದು. ವಿದೇಶಿ ಪ್ರವಾಸಿಗರನ್ನಂತೂ ಕಾಡಿಸಿ ಕಾಡಿಸಿ ಮಾನಸಿಕ ಹಿಂಸೆಕೊಟ್ಟು ಅವರಿಂದ ಹಣ ಇಸಿದುಕೊಳ್ಳುತ್ತಿದ್ದರು. ಅವರೇನು ಕುರುಡ ಕುಂಟರಂತಲ್ಲ. ಹೆಚ್ಚುಕಡಿಮೆ ಗಟ್ಟಿಯಾಗಿಯೇ ಕಾಣುವ ಅವರುಗಳಲ್ಲಿ ಆಲಸ್ಯ ಮೋಸ ಮನೆಮಾಡಿವೆ. ಬಾಂಬೆಯ ರೈಲ್ವೆಹಳಿಗಳ ಪಕ್ಕದ ಕೊಳಚೆ ಪ್ರದೇಶಗಳಲ್ಲಿ ಒಂದಕ್ಕೆ ಎರಡು ಎರಡಕ್ಕೆ ನಾಲ್ಕು, ನಾಲ್ಕಕ್ಕೆ ಎಂಟು ಎನ್ನುವ ಜ್ಯಾಮಿಟ್ರಿಯ ಅನುಪಾತದಂತೆ ದಿನೇ ದಿನೇ ಬೆಳೆಯುತ್ತಲೇ ಇದ್ದಾರೆ, ಬಾಂಬೆಯಲ್ಲಿ ಇವರ ಸಂಖ್ಯೆ ಮಿತಿಮೀರಿದೆ. ವಿದೇಶಿಗರಿಗಂತೂ ಇದು ಓಕರಿಕೆಯ ವಾತಾವರಣವನ್ನುಂಟುಮಾಡಿದೆ. ಹೀಗೆ ಅಷ್ಟಿಷ್ಟು ನೋಡುತ್ತಿದ್ದಂತೆಯೇ ಸಂಜೆಯಾಯ್ತು. ಶಿವನಂಜಪ್ಪನವರ ಆಮಂತ್ರಣದ ಮೇರೆಗೆ ಅವರ ಮನೆಗೆ ಹೋದೆವು. ಅವರ ಶ್ರೀಮತಿ ನಳಿನಿ ರುಚಿಯಾದ ಅಡಿಗೆ ಮಾಡಿದ್ದರು. ಎರಡು ತಾಸು ಅವರ ಮನೆಯಲ್ಲಿ ಸಂತೋಷವಾಗಿ ಕಳೆದದ್ದೇ ಗೊತ್ತಾಗಲಿಲ್ಲ. ನಂತರ ಅವರ ಮನೆಯಿಂದ ಬೀಳ್ಕೊಂಡು ಎರಡಂತಸ್ತು ಇಳಿದು ಬರುತ್ತಿದ್ದಂತೆಯೇ ಒಂದು ಮನೆಯ ಬಾಗಿಲಿನ ಮುಂದ ಜನ ತುಂಬಿ ಕೊಂಡಿದ್ದರು. ಬಾಂಬೆಯಲ್ಲಿ ಇದು ಅಪರೂಪದ  ಯಾರಿಗೇ ಏನೇ ಆದರೂ (ಸತ್ತರೂ) ನೋಡದ ಜನ; ‘ಇದೇನಿರಬೇಕು?’ ಎಂದು ಆಶ್ಚರ್ಯವಾಗಿಯೇ ಮುಂದೆ
ಬರುತ್ತಿದ್ಧಂತೆ ಒಳಗಿನಿಂದ ಅಳು ಬರುವ ಧ್ವನಿ ಕೇಳಿ ಒಮ್ಮೆಲೆ ಗಲಿಬಿಲಿಗೊಂಡೆ, ನಂತರ ಶಿವನಂಜಪ್ಪನವರು ಸ್ವಲ್ಪದರಲ್ಲಿ ಅವರ ವಿಷಯ ಹೇಳಿದರು. ತೀರಿಕೊಂಡವಳು ವೃದ್ಧತಾಯಿ, ಮಗ ವಿದೇಶದಿಂದ ಬರಬೇಕಾಗಿದೆ. ಅದಕ್ಕೆ ಕಾಯ್ದುಕೊಂಡು ಕುಳಿತಿದ್ದಾರೆ-ಎಂದು. ಅವರಿಗೆ ಈ ಮೊದಲೇ ಗೊತ್ತಿದ್ದರೂ ನಮಗೆ ಮನೆಯಲ್ಲಿ ಹೇಳಿ ಎರಡು ತಾಸಿನ ಪ್ರಶಾಂತ ವಾತಾವರಣಕ್ಕೆ ಧಕ್ಕೆ ಮಾಡಲಿಲ್ಲವಲ್ಲ ಎಂದು ಮನಸ್ಸಿನಲ್ಲಿಯೇ ಅವರಿಬ್ಬರ ಒಳ್ಳೇ ಗುಣಕ್ಕೆ ಮೆಚ್ಹಿಕೊಂಡೆ.

ಬೋರಿವಿಲಯ ಟ್ರೇನಿನಿಂದ ವಿಲೇಪಾರ್ಲೆಯ ನಮ್ಮ ಹೋಟೆಲ್ ತಲುಪುವಾಗ ರಾತ್ರಿ ೧೧ ಗಂಟೆ. ಯಾಕೋ ಮನಸ್ಸಿಗೆ ನೆಮ್ಮದಿಯೇ ಇರಲಿಲ್ಲ. ಕಿಟಕಿಯ ಹೊರಗಡೆ ಒಂದೇ ಸಮನೇ ಬಸ್ಸುಕಾರುಗಳ ಸಪ್ಪಳ, ಇದೇನೂ ಗಮನಕ್ಕೆ ತೆಗೆದುಕೊಳ್ಳದೇ ನನ್ನ ಮಗಳು ಅಜ್ಜನೊಂದಿಗೆ ಎನೇನೋ ಹೇಳುತ್ತ ಗಲಾಟೆ ನಡಸಿದ್ದಳು. ಅವಳಿಗೆ ಏನೇನೊ? ಮಾತು ಹೇಳಿ ನಿದ್ದೆ ಮಾಡಿಸಿ ತಾವೂ ಮಲಗಿದರು. ಸರಿ, ಮಧ್ಯರಾತ್ರಿ ಪಟಾಕಿಯ ಸದ್ದುಗಳು,  ಜೋರಾಗಿ ಕೂಗಾಡುವುದು. ಹಾಡುವದು ಕೇಳಿಸ ತೊಡಗಿತು. ಇದೆಲ್ಲ ಹೊಸ ವರ್ಷ ಆಚರಣೆ ಎಂದು ತಂದೆಯವರಿಗೆ ಹೇಳಿ ಮಲಗಲು ಪ್ರಯತ್ನಿಸಿದೆ.

1980 ಜನವರಿ ಒಂದನೆಯ ತಾರೀಖು ನಮ್ಮ ಪ್ರಯಾಣ ಸಂಜೆ 8 ಗಂಟೆಗೆ ಸೌದಿಯ ವಿಮಾದಿಂದ ಹೊರಡುವುದಿತ್ತು. ಸಾಯಂಕಾಲ 4 ಗಂಟೆಗೆ ಶ್ರೀಮತಿ ಹಾಗೂ ಶ್ರೀ ಶಿವನಂಜಪ್ಪನವರು ನಾನಿರುವ ಹೊಟೆಲ್ಲಿಗೇ ಬಂದರು. ಅಲ್ಲಿಂದ ನಾವೆಲ್ಲರೂ ಕೂಡಿಕೊಂಡು ವಿಮಾನ ನಿಲ್ದಾಣಕ್ಕೆ ಹೊರಟೆವು. 5 ಗಂಟೆಗೆ ರಿಪೋರ್ಟಿಂಗ್ ಟೈಮ್ ಇದ್ದರೂ ನಾವು ತಲುಪುವಾಗ 5-30ದಾಟಿ ಹೋಗಿತ್ತು.

ಬಾಂಬೆ ಅಂತರಾಷ್ಟ್ರೀಯ ನಿಲ್ದಾಣ ದೊಡ್ಡದಿದೆ. (ಆದರೆ ನಾನು ನಂತರ ನೋಡಿದ ಇತರ ನಿಲ್ದಾಣಗಳಾದ ರಿಯಾದ್, ಜೆಡ್ಡಾ, ಕುವೈತ್, ಹಿತ್ರೋ ಲಿಯೋನಾರ್ಡ್‌ಡಾವಿಂಚಿ ಮುಂತಾದವುಗಳ ಮುಂದೆ ಇದು, ಇದರ ಅಡಳಿತ ವರ್ಗ ಅತೀ ಕುಬ್ಜ. ಇರಲಿ ಭಾರತೀಯರಿಗೆ ಹೊಂದುವಂತಹ ನಿಲ್ದಾಣವೆಂದು ಸಮಾಧಾನ ಪಟ್ಟುಕೊಂಡರಾಯ್ತು). ವಿದೇಶ ಪ್ರವಾಸ ಮಾಡುವವರೆಲ್ಲ ಜೋರಾಗಿಯೇ ಬಂದವರು. ಒಬ್ಬರನ್ನು ಕಳಿಸಲು ಹತ್ತು ಹದಿನೈದು ಜನಗಳು.ಪ್ರವಾಸ ಮಾಡುವವರಿಗಿಂತ ಅವರದೇ ಸಂಖ್ಯೆ ಹೆಚ್ಚನಿಸುತ್ತವೆ. ನಾನು ನಮ್ಮ ಬ್ಯಾಗ್‌ಗಳೊಂದಿಗೆ ಹೋಗಿ ಸೌದಿ ಕೌಂಟಲ್ ಕಡೆಗೆ ಕ್ಯೂ ಹಚ್ಹಿದೆ. ನಮ್ಮ ಪಕ್ಕದ ಕೌಂಟರುಗಳಲ್ಲಿ ಕುವೈತ್, ಪ್ಟಾರಿಸ್‌ಗೆ ಹೊರಡುವ ಪ್ರವಾಸಿಗರೂ ಸಾಲಿನಲ್ಲಿ ನಿಂತಿದ್ದರು. ಕೌಂಟರಿನಲ್ಲಿ ಕುಳಿತು ಸಿಬ್ಬಂದಿವರ್ಗ ಈ ಕಡೆಗೆ ಸಾಕಷ್ಟು ಸಾಲು ಬೆಳೆಯುತ್ತ ಹೋದರೂ ಉದಾಸೀನ- ವಾಗಿಯೇ ಕೆಲಸ ಮಾಡುತ್ತಿದ್ದರು. ಪ್ರತಿಯೊಬ್ಬ ಪ್ರವಾಸಿಗೆ ನಿಲ್ದಾಣಶುಲ್ಕ ಎಂದು ಆಗ 100 ರೂ ತೆಗೆದುಕೊಳ್ಳು-ತ್ತಿದ್ದರು. ಈಗ 400 ರೂ ಆಗಿದೆ. ಅದನ್ನು ತುಂಬಲು ಬೇರೆ ಕಡೆಗೆ ಹೋಗಬೇಕು. ಸಾಮಾನುಗಳು ಹೆಚ್ಚಿದ್ದರೆ ಅದರ ಹಣ ತುಂಬಲು ಬೇರ ಕಡೆಗೆ ಹೋಗಬೇಕು. ಆರೋಗ್ಯ ದಾಖಲೇಪತ್ರ ನೆಪಕ್ಕೆ ನೋಡಿದಂತೆ ಮಾಡುತ್ತಾರೆ. ಒಟ್ಟಾರೆಕಸ್ಟಮ್ಸ್‌ ಇಮಿಗ್ರೇಶನ ಮುಗಿಸಿ ಕೊನೆಗೆ ಸೆಕ್ಕೂರಿಟಿ ಚೆಕ್ ಮಾಡುವೆಡೆಗೆ ಬಂದೆವು. ಅಲ್ಲಿಯಾರಾದರೂ ಅಯುಧ- ಗಳನ್ನಿಟ್ಟುಕೊಂಡು ಯಾವುದಾದರೂ ದುರುದ್ದೇಶದಿಂದ  ಅಪಹರಣಕಾರರಿದ್ದಾರೇನೆಂದಾಗಲೀ ಅಥವಾ ಬಾಂಬ್ ಗಳನ್ನಿಟ್ಟುಕೊಂಡು ವಿಮಾನ ಧ್ವಂಸ ಮಾಡುವವರೇನಾದರೂ ಇದ್ದಾರೆಂದಾಗಲೀ ಅವರನ್ನೆಲ್ಲ ಶೋಧಿಸಿ ನಂತರ  ಲಾಂಜ್‌ಗೆ ಬಿಡುತ್ತಾರೆ. 360 ಜನ ಪ್ರವಾಸಿಗರ ಈ ಎಲ್ಲನ ಕೆಲಸಗಳು ಮುಗಿಯಲಿಕ್ಕೆ ಮೂರು ತಾಸುಗಳು ಬೇಕೇ ಬೇಕೆನಿಸಿತು.

2-3 ತಾಸುಗಳ ಕಾಲ ಒಂದೇ ಸಮನೇ ನಿಂತು ನಿಂತು ಅಯಾಸವಾಗುತ್ತದೆ. ಸೌದಿ ವಿಮಾನದಲ್ಲಿ ನಾವು ಹೋಗುತ್ತಿ-ದ್ದುದರಿಂದ ನಮ್ಮ ಸುತ್ತಮುತ್ತೆಲ್ಲ ಹೆಚ್ಚಾಗಿ ಅವರೇ ಇದ್ದರು. ಪೂರ್ತಿ ತಲೆಯಿಂದ ಕಾಲುಗಳವರೆಗೆ ಕರಿಯ ಬುರ್ಕಾ ಹಾಕಿಕೊಂಡ ಸ್ತ್ರೀಯರ ಗುಂಪು ತಿರುಗಾಡುತ್ತಿತ್ತು. ಗಂಡಸರು ಶುಭ್ರವಾದ ಬಿಳಿಯ ಉದ್ದನೆಯ ಅಂಗಿ, ತಲೆಗೆ ಉದ್ದಾದ ವಸ್ತ್ರ. ಅದನ್ನು ಭದ್ರಪಡಿಸಲೋ ಎಂಬಂತೆ ತಲೆಕಟ್ಟುಕೊಂಡು ಸಾಲು ಹೆಚ್ಚುತ್ತಿದ್ದರು. ಸ್ವಲ್ಪ ದೂರ ಹಿಂದುಗಡೆ ಪ್ರಯಾಣಿಕರ, ಅವರ ಸಂಬಂಧಿಕರ ಕೊನೆಯ ಮಾತುಕತೆಗಳು, ಅಳುವ ದೃಶ್ಯ ನೋಡುವಾಗ ಬಹಳ ವಿಷಾದ-ವೆನಿಸುತ್ತದೆ. ನಮ್ಮ ಎಲ್ಲ ಕೆಲಸಗಳೂ ಪೂರ್ತಿಯಾದ ನಂತರ ಎಲ್ಲರ ಶುಭಹಾರೈಕೆಗಳೊಂದಿಗೆ ಬೀಳ್ಕೊಂಡೆವು. ಕೊನೆಗೆ ನಮ್ಮ ತಂದೆ ನನ್ನ ಮಗಳಿಗೆ, ಪ್ರವಾಸದಲ್ಲಿ ನಿಮ್ಮ ಅಮ್ಮನಿಗೆ ತೊಂದರೆಕೊಡಬೇಡ, ಊರಿಗೆ ಹೋದ ಮೇಲೆ ಸಮಾಧಾನವಾಗಿರಬೇಕು. ಹಟ, ನ್ಯಾಯ, ಮಾಡಬಾರದು. ಸರಿಯಾಗಿ ಊಟ ಮಾಡಬೇಕು ಈ ತರಹ ಏನೇನೋ ಹೇಳುತ್ತಿದ್ದರು. ಎಲ್ಲ ತಿಳಿದವರ ತರಹ ತಲೆಹಾಕಿದಾಗ ನಾವು ನಕ್ಕೆವು. ಮರುಕ್ಷಣ ಬೀಳ್ಕೊಡುವ ವೇದನೆಯೊಂದಿಗೆ ಬಿಳ್ಕೊಂಡೆವು. ಆದರೆ ಆಗ ನನಗೆ ನನ್ನ ತಂದೆಯದು ಅದೇ ಕೊನೆಯ ದರ್ಶನವೆಂದು ನನಗನಿಸಿರಲಿಲ್ಲ. ಮುಂದೆ ಕೇವಲ ಆರೇ ತಿಂಗಳಲ್ಲಿ ಹೃದಯಾಘಾತದಿಂದ ನಿಧನವಾದರು. ಅಂತ್ಯ ಸಂಸ್ಕಾರಕ್ಕೆ ಬರಲಾಗಲಿಲ್ಡ. ಏನೋ ಪರದೇಶ ಪರದೇಶಿ ಅನುಭವಾಗಿ ಸಾಕಷ್ಟು ಅತ್ತುಬಿಟ್ಟಿದ್ದೆ.

ನಾವು ಪ್ರಯಾಣಿಸುವ ವಿಮಾನ ಸೌದಿಯ ಜಂಬೋಜೆಟ್ 747 ಇದು ನನ್ನ ಮೊದಲ ಜಂಬೋ ಪ್ರಯಾಣ ಆದ್ದರಿಂದಲೇ ಎಲ್ಲಾ ಸಣ್ಣ ಸಣ್ಣ ಸಂಗತಿಗಳು ನೆನಪಿವೆ. ಎಲ್ಲರ Customs, Imigrations ಮುಗಿದ ನಂತರ ವಿಮಾನ ಬಾಗಿಲಿಗೆ ಹೊಂದಿಸಿದ ಕಾಲು ಹಾದಿಯಲ್ಲೇ ನಡೆದುಕೊಂಡು ವಿಮಾನ ಪ್ರವೇಶಿಸಬೇಕು. ಬಾಗಿಲಿನಲ್ಲಿ ವಿಮಾನ ಪರಿಚಾರಕೆಯರು ಮುಗುಳ್ನಗೆಯಿಂದ ಸ್ವಾಗತಿಸುವರು. ನಮ್ಮ ಸ್ಥಳ ಕಿಟಕಿಯ ಹತ್ತಿರವೇ ಸಿಕ್ಕಿತು. ಹಾಗೇ ಬೇಕೆಂದು ಮೊದಲೇ ಹೇಳಿದರೆ ಕೊಡುವರು. ಅಷ್ಟೇ ಅಲ್ಲದೇ ನೋ ಸ್ಮೋಕಿಂಗ್, (ಸಿಗರೇಟ್ ಸೇದದೆ ಇರುವ) ವಿಭಾಗದ ಕಡೆಗೆ ಬೇಕೆಂದರೂ ಕೊಡುತ್ತಾರೆ. ಹೆಚ್ಚಾಗಿ ಎಲ್ಲ ವಿಮಾನಗಳಲ್ಲಿ ಹೆಂಗಸರು-ಮಕ್ಕಳು ಪ್ರಯಾಣ ಮಾಡುವಾಗ ಅವರು ಕೇಳಿದ್ದಕ್ಕೆ ಆದ್ಯತೆ ಕೊಳುಡುತ್ತಾರೆ. ನಮ್ಮ ಸ್ಥಳ ಹಿಡಿದು ಕುಳಿತೆವು. ಸುತ್ತೆಲ್ಲ ನೋಡಿದರೆ ಭ್ರಾಂತಿ ಉಂಟುಮಾಡುವಂತಹ ವಾತಾವರಣ. 360 ಜನರು ಅರಾಮವಾಗಿ ಕುಳಿತುಕೊಳ್ಳಬಹುದು. ಕಾಲುಚಾಚಿ ಹಿಂದೆಒರಗಿ ಮಲಗಿಕೊಳ್ಳಲೂ ಬಹುದು. ಸುತ್ತೆಲ್ಲ ಝಗ ಝಗಿಸುವ ಲೈಟುಗಳು, ವಿಮಾನ ಮೇಲೇರುವಾಗ ಈ ಲೈಟುಗಳನ್ನೆಲ್ಲ ಕಳೆದು ಸಣ್ಣ ಬೆಳಕು ಇಡುತ್ತಾರೆ. ಅಷ್ಟೇ ಅಲ್ಲದೆ ನಮ್ಮ ಕೈ ಅಸನಗಳಲ್ಲಿ ಬೇರೆ ಬೇರೆಯಾದ ಬಟನ್‌ಗಳಿರುತ್ತವೆ. ಒಂದು ಬಟನ್ ಒತ್ತಿದರೆ ನಮ್ಮ ಸೀಟಿಗೆ ಬೇಕಾಗುವಷ್ಟೇ ಬೆಳಕು ಬರಲು ಮೇಲೆ ಇರುತ್ತದೆ. ಇನ್ನೊಂದು ಒತ್ತಿದರೆ (ನಮಗೇನಾದರೂ ಚೇಕಾದಲ್ಲಿ) ಹಸಿರು ಬಣ್ಣದ ಚಿಕ್ಕ ದೀಪ ಹತ್ತಿಕೊಳ್ಳುತ್ತದೆ. ಅದನ್ನು ನೋಡಿ ಗಗನಸಖಿ ಧಾವಿಸಿಬಂದು ಸಹಾಯ ಮಾಡುತ್ತಾಳೆ. ಕೊನೆಯದಾಗಿ ಧ್ವನಿವಾಹಕ (Ear Phone) ಇರುವುದು. ಕಿವಿಗೆ ಧ್ವನಿವಾಹಕ ಜೋಡಿಸಿಕೊಂಡರೆ ಮಾತ್ರ ಕೇಳಿಸುವುದು. ಇದರಲ್ಲಿ ಹತ್ತು ಚಾನಲ್‌ಗಳಿದ್ದು ಬೇರ ಬೇರೆ ಸಂಗೀತ ಕೇಳಬಹುದು. ವಿಮಾನದಲ್ಲಿ 18-20 ಟಾಯ್‌ಲೆಟ್‌ಗಳಾದರೂ ಇರುತ್ತವೆ, 360 ಜನ ಪ್ರಯಾಣಿಕರು, ಅವರ ಲಗೇಚ್ (ಪ್ರತಿಯೊಬ್ಬರಿಗೂ 20 ಕೆ.ಜಿ. ಒಯ್ಯಬೇಕಿದ್ದರೂ ಹೇಗೋ 25 ಕೆಜಿ. ಮಾಡಿಯೇ ಇರುತ್ತಾರೆ) ಈ ಜಡವಾದ ಸೀಟುಗಳು ಸಲಕರಣೆಗಳು ಎಲ್ಲ ಹೊತ್ತುಕೊಂಡು ವಿಮಾನ ಆಕಾಶಕ್ಕೆ ಹೇಗೆ ಹಾರುತ್ತದೋ, ಎಂದು ಊಹಿಸಿ-ಕೊಂಡಾಗ ನಿಜವಾಗಿಯೂ ಹೆದರಿಕೆಯಾಗುತ್ತದೆ. ನನಗನಿಸುವ ಈ ಎಲ್ಲ ವಿಚೆತ್ರ ಅನುಭವ ಹಂಚಿಕೊಳ್ಳಲು ನಮ್ಮವರ್ಯಾರೂ ಇರಲಿಲ್ಲ. ನನ್ನ ಪಕ್ಕದಲ್ಲಿ ಒಬ್ಬ ಅರಬ್ಬಿ ಹೆಂಗಸು ಧಡೂತಿಯಾದವಳು ಪೂರ್ತಿ ಬುರ್ಕಾದಿಂದ ಪ್ಯಾಕ್ ಆಗಿ ಕುಳಿತಿದ್ದಳು. ಅವಳ ಸಂಬಂಧಿಕರು ಪೂರ್ತಿ ಅಚೆ ದಂಡೆ ಕಿಟಕಿಯವರೆಗೆ ಕುಳಿತಿದ್ದರು. ಒಂದು ಸಾಲಿನಲ್ಲಿ 10 ಸೀಟುಗಳಿರುತ್ತವೆ. ಈ ಕಡೆಯ ಕಿಟಕಿಗೆ ಹೊಂದಿಕೊಂಡು ಮೂರು, ನಡುವೆ ನಾಲ್ಕು. ಆ ಕಡೆಯ ಕಿಟಕಿಗೆ ಹೊಂದಿಕೊಂಡು ಮತ್ತೆ ಮೂರು, ಅದೇನು ಮಾತೋ ಜಗಳವೊ ಅನ್ನೋ ತರಹ ಒಂದೇ ಸಮನೇ ವಟ ವಟ ಮಾತು.

ಸರಿಯಾದ ಸಮಯದ ಪ್ರಕಾರ 8-30ಕ್ಕೆ ನಮ್ಮ ವಿಮಾನ ಅಕಾಶಕ್ಕೇರಿತು. ಮೇಲಿನಿಂದ ರಾತ್ರಿಯ ವಿದ್ಯುದ್ದೀಪದಲ್ಲಿ ಕಾಣುವ ಬಾಂಬೆ ದೃಶ್ಯ ಸುರಸುಂದರ. ಅಮರಾವತಿಯನ್ನು ಧರೆಗಿಳಿಸಿದಂಥ ಮುಂಬಯಿಯ ಮಾಯಾಜಾಲ ಅದು. ಈ ಹಿಂದೆ ಒಂದೆರಡು ಸಲ ಇಂಡಿಯನ್ ಏರಲೈನ್ಸ್‌ನಲ್ಲಿ ಅಗೀಗ ಪ್ರಯಾಣಿಸಿದ್ದರೂ ಅದು ಹಗಲಿನಲ್ಲಿಯೇ ಅಗಿತ್ತು. ಅದರದೊಂದು ಸೌಂದರ್ಯವೇ ಬೇರೆ. ಮೇಲಿಂದ ಕಾಣುವ ಗುಡ್ಡಗಳು, ಹರಿಯುವ ಹೊಳೆ, ರೇಖಾ ಚಿತ್ರಗಳಂತೆ ಕಾಣುವ ಹೊಲ ಗದ್ದೆ ಗಳು, ಮನೆಗಳು, ಎಲ್ಲವೂ ಸ್ವಚ್ಛ ಸುಂದರ. ಇಂದಿನ ಈ ದೃಶ್ಯದಲ್ಲಿ ಅದೆಲ್ಲ ಏನಿಲ್ಲ. ಕೇವಲ ಸುಂದರವಾದ ಬಣ್ಣದ ದೀಪಗಳಲ್ಲಿ ಕಾಣುವ ದೊಡ್ಡ ದೊಡ್ಡ ಕಟ್ಟಡಗಳು. ಇರುವೆಯಂತೆ ಓಡಾಡುವ ವಾಹನಗಳು ಮಾತ್ರ. ನನ್ನ ಮಗಳಿಗೆ ತೋರಿಸುವ ನೆಪದಲ್ಲಿ ನಾನೂ ಬಾಂಬೆ ಕಣ್ಮರೆಯಾಗುವ ತನಕ ಹಣಕಿ ಹಾಕಿ ನೋಡಿದೆ. ನನ್ನ ದಾಂಪತ್ಯ ಆರಂಭಗೊಂಡದ್ದು ಪಲ್ಲವಿಸಿದ್ದು ,ಈ ಜನಾರಣ್ಯದಲ್ಲೇ ಅಲ್ಲವೆ ಎನ್ನಿಸಿತು. ನಂತರ ಪೂರ್ತಿ ಕತ್ತಲು. ಅಲ್ಲೊಂದು ಇಲ್ಲೊಂದು ಮಿಣುಕುವ ದೀಪನೋಡಿ ನಾವು ಅರೇಬಿಯನ್ ಸಮುದ್ರದ ಮೇಲೆ ಹೋಗುತ್ತಿದ್ದೇವೆಂದು ತಿಳಿಯಿತು. ‘ಮತ್ತೆಂದೋ ತಾಯ್ನೆಲದ ದರ್ಶನ’ – ಎಂದು ನಿಟ್ಟುಸಿರು ಬಿಟ್ಟೆ.

ಸುಮಾರು ಒಂದು ತಾಸಿನ ಒಳಗಾಗಿಯೇ ಎಲ್ಲ ಪ್ರಯಾಣಿಕರಿಗೆ ಊಟದ ಸರಬರಾಜು ಮಾಡಿದರು. ನನ್ನ ಮಗಳಿಗಾಗಲೇ ಸುಸ್ತು ಹೊಡೆದಿತ್ತು. ಎಲ್ಲಾದರು ಹೊರಗೆ ಹೋಗಲಿಕ್ಕೆ ಹಾದಿ ಇದೆಯೋ ಏನೊ? ಎನ್ನುವ ಬೆಕ್ಕಿನ ತರಹ ಕಿಟಕಿ ಗುದ್ದುವದು, ಸೀಟಿನ ಹಿಂದೆ ಮುಂದೆ ಇಣಿಕಿ ಹಾಕುವುದು, ಸೀಟಿನ ಕೆಳಗೆ ಇಣಿಕಿ ನೋಡುವುದು ನಡದೇ ಇತ್ತು. ನಾನು ಮತ್ತೆ ಎತ್ತಿ ಕೂಡ್ರಿಸಿ ಏನೇನೋ ಹೇಳಲು ಪ್ರಯತ್ನಿಸುತ್ತಿದ್ದೆ. ಆದರೆ ಮತ್ತೆ ಅದೇ ಅಸಮಾಧಾನದಿಂದ ಅತ್ತಿಂದಿತ್ತ ಸೀಟಿನ ಮೇಲೆ ಹತ್ತಿಳಿಯುತ್ತಿದ್ದಳು. ಊಟ ಬೇಡವಾಗಿ ಪ್ರಯಾಣಕ್ಕೆ ಮೊದಲೇ ಕೊಟ್ಟ ಕ್ಯಾಂಡಿ ಬಾಯಲ್ಲಿಟ್ಟುಕೊಂಡು ನಿದ್ರೆ ಮಾಡಿದಾಗ ನನಗೆ ಸ್ವಲ್ಪ ಅರಾಮವಾಯಿತು. ನನಗೂ ಹಸಿವೆ ಇರಲಿಲ್ಲ. ಇನ್ನೂ ಐದಾರು ತಾಸಿನ ಪ್ರಯಾಣ ಎಂದು ನೆನಪಿಸಿಕೊಂಡು ಸ್ವಲ್ಪ ಕೇಕ್, ಫ್ರೂಟ್ ಸಾಲಡ್ ಅಪ್ಯಲ್‌ಜ್ಯೂಸ್ ತೆಗೆದುಕೊಂಡು ಊಟ ಮುಗಿಸಿದೆ. ಹಿಂದೊರಗಿ ನಿದ್ರೆ ಮಾಡಲು ಪ್ರಯತ್ನಿಸಿದೆ. ನಿದ್ದೆ ಬರಲೇ ಇಲ್ಲ. ಅಗಲೇ ಮೂವತ್ತು ಸಾವಿರ ಅಡಿಗಳಿಗೂ ಮೇಲೆ ತೇಲುತ್ತಿದ್ದೇವೆಂದು ನೆನಪಿಸಿಕೊಂಡಾಗ ಹೆದರಿಕೆ ಆಗುತ್ತದೆ. ಆದರೆ ನಿಜವಾಗಿಯೂ ನಾವು ಪ್ರಯಾಣಿಸು-ತ್ತಿದ್ದೇವೆಂದು ಯಾವ ಅನಿಸಿಕೆಯೂ ಅಗುವುದಿಲ್ಲ. ಇದು ವಿಜ್ಞಾನದ ಚಮತ್ಮಾರ.

ಸುಮಾರು ನಾಲ್ಕು ಗಂಟೆಯ ಪ್ರವಾಸದ ನಂತರ ರಿಯಾದ್ ತಲುಪಿದೆವು. ರಿಯಾದ್‌ ಸೌದಿ ಅರೇಬಿಯಾದ ರಾಜಧಾನಿ. ರಿಯಾದ್ ಮೂಲಕ ಜೆಡ್ಡಾಕ್ಕೆ ಇನ್ನೊಂದು ತಾಸು ಪ್ರಯಾಣ ಬೆಳೆಸಬೇಕು. ಅಲ್ಲಿಯ ವೇಳೆ ರಾತ್ರಿ 10 ಗಂಟೆ. ಭಾರತೀಯ ವೇಳೆ ರಾತ್ರಿ 12-30. ಇದೇ ವಿಮಾನದಲ್ಲಿ ನಾವು ಮತ್ತೆ ಪ್ರಯಾಣಿಸಬೇಕಾದರೂ ಅಲ್ಲಿ ಇಳಿದು ಇಮಿಗ್ರೇಶನ್ ಮುಗಿಸಿಕೊಂಡು ಮತ್ತೆ ಹತ್ತಬೇಕಿತ್ತು. ಎಲ್ಲರೂ ನಿದ್ದೆಯೊಳಗೇ ಎದ್ದು ನಡೆದರು. ನನ್ನ ಮಗಳನ್ನು ಎತ್ತಿಕೊಂಡು ನಾನೂ ನಡೆದೆ. ಹೊರಗಡೆ ವಿಪರೀತ ಚಳಿ. ನಂಬಲಸಾಧ್ಯ (14 ಡಿಗ್ರಿ) ಮೊದಲೇ ಗುತ್ತಿಯವರು ಹೇಳಿದ ಪ್ರಕಾರ ನಾನು ಸ್ವೆಟರ್ ಗಳನ್ನು ಹ್ಯಾಂಡ್ ಬ್ಯಾಗ್‌ದಲ್ಲಿಯೇ ಇಟ್ಟುಕೊಂಡಿದ್ದೆ. ತೆಗೆದು ಹಾಕಿಕೊಳ್ಳಲೇ ಬೇಕಾಯ್ತು. ರಿಯಾದ್ ಏರ್‌ಪೋರ್ಟದಲ್ಲಿ ನಮಗೆ ಸಂಬಂಧಪಟ್ಟ ಕಾಗದ ಪತ್ರ, ಪಾಸ್‌ಪೋರ್ಟ್‌ ಗಳನ್ನೆಲ್ಲ ಪರಿಶೀಲಿಸಿದರು. ಅರೇಬಿಯಾ ಭಾಷೆಯಲ್ಲಿ ಒಂದೆರಡು ಸಲ ಏನೋ ಕೇಳಿದರು. ನನಗೆ ಏನೂ ತಿಳಿಯಲಿಲ್ಲ. ಅವರಿಗೆ ಇಂಗ್ಲೀಷ್ ಬಾರದು. ವಿಚಿತ್ರ ಪ್ರಸಂಗ, ಜೆಡ್ಡಾಕ್ಕೆ ಹೋಗುವ ಪ್ರಯಾಣಿಕರು ಸ್ವಲ್ಪವೇ ಇದ್ದುದರಿಂದ ಬೇಗನೇ ಎಲ್ಲ ಔಪಚಾರಿ-ಕತೆಗಳನ್ನೂ ಮುಗಿಸಿದರು. ಸುಮಾರು ಒಂದೂವರೆ ತಾಸು  ಕುಳಿತುಕೊಳ್ಳಬೇಕಾಯ್ತು. ಅಲ್ಲಿ 3-4 ಭಾರತೀಯ ಕುಟುಂಬದವರು ಹಾಯಾಗಿ ಅ ಕಡೆ ಈ ಕಡೆ ಓಡಾಡಿಕೊಂಡು ಇದ್ದರು. ಈ ಮೊದಲು ಸಾಕಷ್ಟು ಸಲ ಅವರಿಗೆ ಅಡ್ಡಾಡಿ ಅನುಭವ ಇರಬೇಕೆಂದು ಕೊಂಡೆ . ಒಂದೂವರೆ ತಾಸಿನ ನಂತರ ಅದೇ ವಿಮಾನವನ್ನೇರಿದಾಗ ಜನ ತಮಗೆಲ್ಲಿ ಬೇಕೋ ಅಲ್ಲಿ ಕುಳಿತುಕೊಳ್ಳತೊಡಗಿದರು. ಹೊಸ ಬೋರ್ಡಿಂಗ್ ಕಾರ್ಡ್ ಇದ್ದರೂ ಅದರ ಮೇಲೆ ಸೀಟ್ ನಂಬರ್ ಇರಲಿಲ್ಲ. ಏರ್‌ಹಾಸ್ಟೆಸ್‌ಗೆ ಕೇಳಿದೆ. ಬೇಕಾದಲ್ಲಿ ಕುಳಿತುಕೊಳ್ಳಬಹುದು, ಏನೂ ತೊಂದರೆ ಇಲ್ಲ. ಹೇಗೂ ಪ್ರಯಾಣಿಕರು ಕಡಿಮೆ ಇದ್ದಾರೆ ಎಂದು ಹೇಳಿದಳು. ಇರಲಿ ಎಂದು ಕಿಟಕಿಯ ಹತ್ತಿರವೇ ಕುಳಿತೆವು. ಮುಂದಿನ ಹದಿನೈದು ನಿಮಿಷಗಳಲ್ಲಿ ವಿಮಾನ ಗಗನಕ್ಕೇರಿದ ನಂತರ ಪ್ರಯಾಣಿಕರು ತಮ್ಮ ಸೀಟು ಬೆಲ್ಟು ತೆಗೆದು ಅಲ್ಲಲ್ಲಿ ಜಾಗಮಾಡಿಕೊಂಡು ಮಲಗತೊಡಗಿದರು. ಆ ಕಡೆ ಈ ಕಡೆ ಅಡ್ಡಾಡುತ್ತಿರುವ ಏರ್ ಹೋಸ್ಟ್ಸ್ ನಮ್ಮ ಹತ್ತಿರ ಬಂದು ನಡುವಿನ ಸಾಲಿನಲ್ಲಿರುವ ನಾಲ್ಕು ಸೀಟನ ಕೈ ಅಸರೆಗಳನ್ನು ಹಿಂದಕ್ಕೆ ತಳ್ಳಿ ತಲೆದಿಂಬು ರಗ್ಗು ಕೊಟ್ಟು ಬೇಕಿದ್ದರೆ ಮಲಗಿಕೊಳ್ಳಬಹುದೆಂದು ಹೇಳಿದಳು. ಅಷ್ಟರೊಳಗಾಗಿ ಮತ್ತೊಂದು ಸಲ ಎಲ್ಲರಿಗೂ ಟೀ, ಕಾಫಿ,  ಬೇಕಾದವರಿಗೆ ತಿಂಡಿಕೊಟ್ಟು ಮುಗಿಸಿದರು. ಮಗಳನ್ನು ಆರಾಮವಾಗಿ ಮಲಗಿಸಿದೆ. ನನಗೆ ನಿದ್ದೆ ಬರಲೇ ಇಲ್ಲ. ‘ಕಾವ್ಯಜೀವಿ’ಯವರ ಕವಿತೆಯ ಸಾಲುಗಳು ನೆನಪಾದವು. ಇಷ್ಟಮಿಲನದ ತಾಪ ಶಮನದ ಕ್ಷಣವು ಹತ್ತಿರ ಬರುತಿದೆ ಹೇಗೋ ಏನೊ? ಎನ್ನುವ ತವಕದಿ ಮನವು ನಿಮಿರುತ ನಿಂತಿದೆ!

ಮುಂದೆ ಒಂದೂವರೆ ತಾಸಿನ ಪ್ರಯಾಣದ ನಂತರ ಜೆಡ್ಡಾ ಸಮೀಪಿಸು ತ್ತಿದ್ದೇವೆ ಎರಡು ಪೈಲಟ್ ಹೇಳತೊಡಗಿದಂತೆ ಪ್ರಯಾಣಿಕರು ಎಚ್ಚೆತ್ತು ತಮ್ಮ ಸೀಟ್‌ಬೆಲ್ಟ್‌ ಹಾಕಿಕೊಳ್ಳತೊಡಗಿದರು. ವಿಮಾನ ಜೆಡ್ಡಾನಗರದ ಕಿಂಗ್ ಅಬ್ದುಲ್ ಅಜೀಜ್ ಓಲ್ಡ್ ಏರ್‌ಪೋರ್ಟ್ (ಆಗಿನ್ನೂ 80ರಲ್ಲಿ . ಹಳೆಯ ಇಕ್ಕಟ್ಬಾದ ನಿಲ್ಹಾಣವೇ ಇತ್ತು) ದಲ್ಲಿಳಿಯಿತು. ಆಗ ರಾತ್ರಿ 1 ಗಂಟೆ.  ಬ್ಯಾಗ್‌ಗಳೆಲ್ಲ ಟ್ರಾಲಿಯಿಂದ ಬರುತ್ತಿದ್ದವು. ನಾವು ವಿಮಾನದಿಂದಿಳಿದು ಹಾಲ್‌ಗೆ ಬರುವಷ್ಟರಲ್ಲಿಯೇ ಟ್ರಾಲಿಯಿಂದ ಜನರು ತಮ್ಮ ಸಾಮಾನುಗಳನ್ನು ಎಳೆದುಕೊಳ್ಳುತ್ತಿದ್ದರು. ಕೂಲಿ ಸಿಗುವದೇ ಇಲ್ಲವೇನೋ ನಿಂದು ಅತ್ತಿತ್ತ ನೋಡುತ್ತಿರುವಾಗ ಒಬ್ಬ ಕೂಲಿ ಬಂದು ಸಹಾಯ ಮಾಡಿದ. ಮುಂದೆ ಪಾಸ್ ಪೊರ್ಟ್‌, ವೀಸಾಗಳ ತನಿಖೆ ಮುಗಿದ ನಂತರ ಬ್ಯಾಗುಗಳನ್ನೆಲ್ಲ ಶೋಧಿಸುವರು. ಅದನ್ನೆಲ್ಲ ದಾಟಿಕೊಂಡು ಬರುತ್ತಿದ್ದಂತೆಯೇ ಗುತ್ತಿಯವರು ಹೊರಗಡೆ ನಿಂತಿರುವುದು ಗ್ಲಾಸಿನ ಮೂಲಕ ಕಾಣಿಸಿದಾಗ ಹೇಗೋ ಎನೋ ಅನ್ನುವ ಕಾಣದ ದೇಶದ ಹೆದರಿಕೆ ಝರ್ರನೆ ಇಳಿದುಹೋಯಿತು. ‘ಕಂಡೆ ನಾ ಗೋವಿಂದನ’ ಎನ್ನುವಂತಾಗಿತ್ತು ನನ್ನ ಸ್ಥಿತಿ. ಹಾಯಾಗಿ ಹೊರಗೆ ಬಂದು ಮಾನಸಿಕ ಭಾರ ಜೊತೆಗೆ ಬ್ಯಾಗಿನ ಭಾರವೆಲ್ಲ ಪತಿರಾಯನಿಗೆ ವಹಿಸಿಬಿಟ್ಟೆ.

ಇಲ್ಲಿಂದ 25 ಕಿಮೀ. ದೂರದಲ್ಲಿ ಹೊಸ ಏರ್‌ಪೋರ್ಟ್ ಕಟ್ಟುತ್ತಿದ್ದಾರೆ. ನಾವಿರುವ ಕ್ಯಾಂಪು ಅಲ್ಲಿ ಕಾರಿನಿಂದ ಮನೆ ಕಡೆಗೆ ಹೊರಟಾಗ ಒಂದು ವಿಚಿತ್ರ ಅನುಭವ. ಮಧ್ಯ ರಾತ್ರಿ ಮೀರಿಹೋದುದರಿಂದ ರಸ್ತೆಯಲ್ಲಿ ಕಾರುಗಳ  ಇರಲಿಲ್ಲ. ವೇಗವಾಗಿ ಕಾರು  ‘ಹೆದರಿಕೊಂಡೇ ಡ್ರೈವಿಂಗ್ ಅರಂಭಿಸಿದವರು ಎಂಥ ಎಕ್ಸಪರ್ಟ್ ಆಗಿದ್ದಾರಲ್ಲ’ ಎನ್ನಿಸಿತು. ಯಾವ ಕೆಲಸವಾದರೂ ಅಷ್ಟೆ ತಾನೆ?  ಮನಸ್ಸು ಮಾಡಿ ಕಲಿಯುವವರಗೆ ಮಾತ್ರ ಕಷ್ಟ.  ವಿಶಾಲವಾದ ರಸ್ತೆಗಳು, ನೂರಾರು ದೀಪಗಳು, ಹಗಲಿನಲ್ಲಿ ಹೋದಂತಹ ಅನುಭವ. ನಮ್ಮಲ್ಲಿ ರಸ್ತೆ ಲೈಟುಗಳು, ನೀಲಿ ಇದ್ದಂತೆ ಇಲ್ಲಿ ಬಿಳಿಯ ಬಲ್ಬ್‌ಗಳಷ್ಟೇ… ಕಣ್ಣಿಗೆ ಅಷ್ಟೊಂದು ನೆಮ್ಮದಿ ಅನಿಸುವುದಿಲ್ಲ. ಆದರೂ ಅದರದೊಂದು ಶೋಭೆ ಬೇರೆ. ಅರೇಬಿಯಾ ದೇಶವೆಂದರೆ ಮರುಭೂಮಿ ನಾಡು ಎನ್ನುವ ಮನೋಭಾವನೆಗಳೆಲ್ಲ ಆ ರಾತ್ರಿಯ ಝಗಝಗಿಸುವ ಲೈಟುಗಳನ್ನು ಎತ್ತರೆತ್ತರ ಕಟ್ಟಡಗಳನ್ನು ನೋಡುವಾಗ ಮರೆಯಾಗಿಹೋಯಿತು. ಸುಮಾರು ಅರ್ಧ ತಾಸಿನ ಪ್ರಯಾಣದ ನಂತರ ನಾವಿರಬೇಕಾದ “ಜರ್ಮನ್ ಕ್ಯಾಂಪಸ್‌ಗೆ” ಬಂದೆವು. Airport ಕಟ್ಟಡದ ಮುಖ್ಯ Contractor Hochtief  ಎಂದು German company  ಇದ್ದುದರಿಂದ ಸಾಮಾನ್ಯವಾಗಿ  ಎಲ್ಲಾ ಜನ ಜರ್ಮನ್ ಕ್ಯಾಂಪ್ ಎಂದೇ ಕರೆಯುವರು.

ಕ್ಯಾಂಪಸ್ಸಿನ ಹೊರಗಡೆ ಸೆಕ್ಯೂರಿಟಿ ಗಾರ್ಡ್‌ದವರು ಯಾವತ್ತೂ ಬಂದೂಕು ಧಾರಿಗಳಾಗಿ ಕಾಯುತ್ತಾರೆ. ಒಳಗಿರುವ ಯುರೋಪಿಯನ್‌-ಅಮೇರಿಕನ್ ಕುಟುಂಬಗಳಿಗೆ ಯಾವುದೇ ದೃಷ್ಟಿಯಿಂದ ತೊಂದರೆಯಾಗದಂತೆ ಕಾಯುವದು ಅವರ ಕೆಲಸ. ಕಾರಿನ ಮೇಲಿರುವ ಕ್ಯಾಂಪಿನ ಪ್ರವೇಶ ಪತ್ರ ನೋಡಿಯೇ ಒಳಗಡೆ ಬಿಡುವರು. ಹೊಸಬರಿಗಾದರೆ ಅವರಿಗೊಂದು ಪ್ರವೇಶಪತ್ರಕೊಟ್ಟು ಕೆಲವೊಂದು ಸಲ ಸಂಶಯ ಅನಿಸಿದರೆ ಅವರ (ಡೈವರ್) ರೆಸಿಡೆದನ್ಷಿಯಲ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌  ಇಸಿದುಕೊಂಡು ನೋಡುವರು. ಒಂದೊಂದು ಸಲ ಫೋನ್ ಮುಖಾಂತರ ಎರಡೂ ಕಡೆಯಿಂದ ವಿಚಾರಿಸಿಕೊಂಡು ಕಳಿಸುವರು. ಈ ತರಹ ಸ್ಟ್ರಿಕ್ಟ್ ಆಗಿ ಇರುತ್ತಾರೆ. ದಿನದ 24 ತಾಸು ಬಂದೂಕು ದಾರಿಗಳು ಕಾಯುತ್ತಾರೆ. ಗಂಡಸರು ದಿನದ 8-10 ತಾಸು ಹೊಸ ವಿಮಾನ ನಿಲ್ದಾಣದ ಕಟ್ಟಡ ಇನ್ನಿತರ ವಿಭಾಗದಲ್ಲಿ ಕೆಲಸದಲ್ಲಿರುವುದರಿಂದ ಹಗಲು-ರಾತ್ರಿ ಸಮಯದ ಪ್ರಕಾರ ಹೋಗಲೇಬೇಕು. ಹೀಗಾಗಿ ಕ್ಯಾಂಪಿನಲ್ಲಿರುವ ಹೆಂಗಸರು-ಮಕ್ಕಳಿಗೆ ರಕ್ಷಣೆಬೇಕು. ಯಾವುದೇ ಪರಿಸ್ಥಿತಿಯಲ್ಲೂ ಸರಳವಾಗಿ ಹೊರಗಿನ ಜನ ಕ್ಯಾಂಪ್ ಒಳಗಡೆ ಬರಲು ಸಾಧ್ಯವಿಲ್ಲ. ನಾವು ಕ್ಯಾಂಪಸ್ ಪ್ರವೇಶಿಸಿದಾಗ ರಾತ್ರಿಯ ಪ್ರಶಾಂತ ವಾತಾವರಣವಿತ್ತು. ಕ್ಯಾಂಪಿನ ಕೊನೆಯ ರಸ್ತೆಯ ಮೂಲಕ ನಮ್ಮ ಮನೆಗೆ ತಲುಪಿದೆವು.

ಕ್ಯಾಂಪಿನಲ್ಲಿ ಎಲ್ಲವೂ ಜರ್ಮನ್ ಸ್ಟ್ಯಾಂಡರ್ಡ್ ಪ್ರಕಾರದ ಮನೆಗಳು. ಸಂಪೂರ್ಣ ಸುಸಜ್ಜಿತವಾದವುಗಳು. ಪೂರ್ತಿ ಮನೆಗೆ ಕಾರ್ಪೆಟ್, ಒಳ್ಳೆಯ ಕುಕ್ಕಿಂಗ್ ರೇಂಜ್ ಶೀತಕ, ನೀಟಾಗಿ ಗ್ಲಾಸು ಪ್ಲೇಟುಗಳು ಹೊಂದಿಸಿಡಲು ಒಳ್ಳೆಯ ಷೆಲ್ಫ್‌ಗಳು, ಅಡುಗೆ ಪಾತ್ರೆಗಳಿಂದ ಚಮಚದವರೆಗೆ ಅನುಕೂಲತೆಗಳು. ಅಡುಗೆ ಮನೆಯಿಂದ ಬೆಡ್ ರೂಂವರೆಗೆ ಯಾವ ಒಂದೂ ಸಾಮಾನು ಕೊಳ್ಳಬೇಕಿಲ್ಲ. ಈ ಎಲ್ಲ ತರದ ಹೊಸ ವಾತಾವರಣದಲ್ಲಿ ನನಗೆ ಅನಂದಕ್ಕೆ ಮಿತಿಯೇ ಉಳಿಯಲಿಲ್ಲ.

ನಾವು ಬಂದು ಹದಿನೈದು ದಿನಗಳಾದವು. ಮನೆಯಲ್ಲಿಯ ತಂಪು ಏರ ಕಂಡೀಶನ್ ಹವೆ, ಟಬ್‌ಸ್ನಾನ, ಶೀತಕದಲ್ಲಿ ನಾವು ಬರುತ್ತೇವೆಂದು ತುಂಬಿಟ್ಟ ವಿವಿಧ ಕೇಕ್‌ಗಳು, ಕೋಲ್ಡ್‌ ಡ್ರಿಂಕ್ಸ್‌ಗಳು ಹಣ್ಣಿನ ರಸಗಳು, ಅಷ್ಟೇ ಅಲ್ಲದೆ ಈ ಮೊದಲು ಕೇಳಿಯೂ-ನೋಡಿಯೂ ಇಲ್ಲದ ಕೆಲವು ಹಣ್ಣುಗಳು ಜೊತೆಗೆ ಒಣಗಿದ ಹಣ್ಣುಗಳು (ಬದಾಮ್, ಪಿಸ್ತಾ, ಗೋಡಂಬಿ, ದ್ರಾಕ್ಷಿ ಇನ್ನೂ ನೂರಾರು ತರಹದವು) ತಿನ್ನುತ್ತ ನಾನು ಮಗಳು ಖುಷಿಪಟ್ಟಿದೇ ಪಟ್ಟದ್ದು. ಹೊರಗಡೆ ಬಿಸಿಲಿದ್ದು ಅತೀ ಬಿಸಿ ಇದ್ದರೂ ಒಳಗಡೆ ಎಲ್ಲ ದೃಷ್ಟಿಯಿಂದಲೂ ಸೂಪರ್‌ಟಚ್! ನಾವು ಇಲ್ಲಿಯದೆಲ್ಲ ಖುಷಿಪಡುತ್ತಿದ್ದರೆನಮ್ಮವರು ಚಟ್ನಿಪುಡಿಗಳು, ಉಪ್ಪಿನಕಾಯಿಗಳು, ಚೂಡ, ಉಂಡೆ ಬೆಳೆಗಾಂವಿ ಕುಂದಾ, ಬಾಂಬೆ ಹಲ್ವಾಗಳನ್ನು ಚಪ್ಪರಿಸುತ್ತಾ ಲೊಟ್ಟೆ ಹೊಡೆಯುತ್ತಿದ್ದರು.

ಈ ನಡುವೆ ಸಾಕಷ್ಟು ಸಲ ಜೆಡ್ಡಾ ನಗರಕ್ಕೆಲ್ಲ (ಕ್ಯಾಂಪಸ್ಸಿನಿಂದ 25 ಕಿಮೀ. ಅಂತರದಲ್ಲಿದೆ) ಹೋಗಿ ಅಡ್ಡಾಡಿ ಬಂದಿದ್ದೆವು.  ನೋಡಿದತ್ತೆಲ್ಲ ಹಳೆ ಹೊಸತುಗಳ ಸಂಗಮವೇ ಕಾಣುತ್ತದೆ. ಹಳೇ ಬೇರು ಹೊಸ ಚಿಗುರುಗಳ ಸಂಗಮ
ಅಂದರೆ ನಡೆದೀತು.

ಆರನೆಯ ಶತಮಾನದಿಂದೀಚೆಗೆ ಮುಸ್ಲಿಂ ಬಾಂಧವರನ್ನೆಲ್ಲ ಧಾರ್ಮಿಕ ಶ್ರದ್ಧೆ ಯಿಂದ ಆಕರ್ಷಿಸಿರುವ, ಜೊತೆಗೆ ಇತ್ತೀಚಿನ 20-30 ವರ್ಷಗಳಲ್ಲಿ ಭೂ ತೈಲ ಎಲ್ಲ ದೇಶೀಯರನ್ನೂ ಕೈ ಬೀಸಿ ಕರೆದಿರುವ ಈ ಸೌದಿ ಅರೇಬಿಯದ ಪ್ರಾಚೀನ ಸಂಸ್ಕೃತಿ ನಾಗರೀಕತೆ, ಅದರಂತೆ ನವ್ಯತೆ ಹೊಂದಿದ ಇತ್ತೀಚಿನ ಪರಿಸದ ಪರಿಚಯವಾದಷ್ಟು ಮಾಡಿಕೊಳ್ಳಬೇಕೆಂದು ಕುತೂಹಲ ಶುರುವಾಯಿತು. ಲಭ್ಯವಾದ ಸಾಹಿತ್ಯ ಒಂದಷ್ಟನ್ನು ತಿರುವಿಹಾಕಿದೆ.

****************************************************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಕ್ರವರ್ತಿಗಳು ದೇವರಗುಂಡಿಗೆ
Next post ನಡುವಿನವರಿಗೆ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…