ಹೀಗೆ ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿಗೆ ಸೊಸೆಯೂ ಬಂದಿದ್ದಳು. ವಾಡಿಕೆಯಂತೆ ಅತ್ತೆ ಸೊಸೆಯರಲ್ಲಿ ವಿರಸಕ್ಕಾರಂಭವಾಗಿ ಕದನವಾಗತೊಡಗಿದವು. ಕದನದ ಪರಿಣಾಮದಿಂದ ಕುನಸುಹುಟ್ಟಿಕೊಂಡಿತು ಪರಸ್ಪರರಲ್ಲಿ. ಎಂಥದೋ ಒಂದು ಉಪಾಯದಿಂದ ಅತ್ತೆಯನ್ನು ಇಲ್ಲದಂತಾಗಿಸಬೇಕೆಂಬ ಹಂಚಿಕೆಯನ್ನು ಸೊಸೆ ಹುಡುಕ ತೊಡಗಿದಳು. ಅದಕ್ಕೆ ಗಂಡನ ಸಹಾಯವೂ ಸಕಾಲದಲ್ಲಿ ದೊರೆಯುವಂತೆ ಹೇಳಿದ್ದಳು.
ರಾತ್ರಿ ಮಲಗಿರುವಾಗ ಅತ್ತೆಯನ್ನು ಕಟ್ಟಿ ಒಯ್ದು ಹೊಳೆಯಲ್ಲಿ ಒಗೆಯಬೇಕೆಂದು ನಿರ್ಧರಿಸಿ ಗಂಡನಿಗೆ ಸಿದ್ಧನಾಗಿರಲು ತಿಳಿಸಿದಳು. ಗಂಡನು ಹೆಂಡತಿಯ ಕೆಲಸಕ್ಕೆ ಸಮ್ಮತಿಸಿ ಅದನ್ನು ನಿರ್ವಹಿಸಲು ಸಿದ್ದನಾದರೂ ಆ ವಿಷಯವನ್ನು ತಾಯಿಗೆ ಹೇಳಲು ಮರೆಯಲಿಲ್ಲ.
ಅದೇ ಸಂದರ್ಭದಲ್ಲಿ ಮಗಳನ್ನು ಕಂಡು ಹೋಗಬೇಕೆಂದು ಸೊಸೆಯ ತಾಯಿ ಆ ಊರಿಗೆ ಬಂದಳು. ಮನೆಗೆ ಬಂದ ಬೀಗತಿಯನ್ನು ತಾಯಿ ಆದರದಿಂದ ಬರಮಾಡಿಕೊಂಡಳು. ಎಲ್ಲರೂ ಕೂಡಿ ಉಂಡುನಕ್ಕರು, ಕೆಲೆದರು. ರಾತ್ರಿ ಬಹಳ ಆಯಿತೆಂದು ತಂತಮ್ಮ ಹಾಸಿಗೆ ಹಾಸಿಕೊಂಡರು.
ಬೀಗತಿಯರು ಒಂದೇ ಕಡೆಯಲ್ಲಿ ಹಾಸಿಗೆ ಹಾಕಿದರು. ತಂತಮ್ಮ ಹೊದಿಕೆ ಹೊತ್ತು ಕೆಲಹೊತ್ತು ಮಾತಾಡುತ್ತ ಮಲಗಿದರು- ಬಳಿಕ ಅದರಿಗೆ ನಿದ್ದೆ ಹತ್ತಿತು.
ಗಂಡ ಹೆಂಡಿರು ನಿತ್ಯದಂತೆ ತಮ್ಮ ಕೋಣೆಗೆ ತೆರಳಿದರು ಮಲಗಲಿಕ್ಕೆ. ಸೊಸೆ ಯಾವುದೊ ನೆವದಿಂದ ಹೊರಗೆ ಬಂದು, ತನ್ನ ತಾಯಿ-ಅತ್ತೆಯರಿಗೆ ನಿದ್ದೆ ಹತ್ತಿದೆಯೆಂದು ಬಗೆದು, ಅತ್ತೆಯ ಕಾಲಬೆರಳಿಗೆ ಕಂಬಳಿಯ ಕರೆಯನ್ನು ಕಟ್ಟಿದಳು. ಅಂದಿನ ರಾತ್ರಿಯಲ್ಲಿಯೇ ಆಕೆಯನ್ನು ಹೊಳೆ ಕಾಣಿಸಿ ಬರಬೇಕಾಗಿತ್ತು.
ಇಬ್ಬರು ಮುದುಕಿಯರು ಒತ್ತಟ್ಟಿಗೆ ಮಲಗಿದಾಗ, ಗಂಡನು ತನ್ನ ತಾಯನ್ನು ಸಹಜವಾಗಿ ಗುರುತಿಸಲೆಂದು ಹಾಗೆ ಮಾಡಿ ಗಂಡನಿಗೆ ತಿಳಿಸಿದಳು.
ತನ್ನನ್ನು ಎಂದಾದರೊಮ್ಮೆ ಹೊತ್ತೊಯ್ಯುವರೆಂಬ ಎದೆಗುದಿಯಲ್ಲಿ ಆತನ ತಾಯಿಗೆ ನಿದ್ದೆ ಹತ್ತಿರಲಿಲ್ಲ. ಕಾಲಕಿರಿಬೆರಳಿಗೆ ಸೊಸೆ ಕಂಬಳಿಯ ಕರೆ ಕಟ್ಟುವುದು
ಆಕೆಗೆ ಗೊತ್ತಾಗಿತ್ತು. ಆದರೂ ಬೇಕೆಂತಲೇ ಡುಕ್ಕು ಹೊಡೆದಿದ್ದಳು. ಸೊಸೆ ತನ್ನ ಕೋಣೆಗೆ ಹೊರಟುಹೋದ ಮೇಲೆ, ಆಕೆ ಎದ್ದು ಕುಳಿತು ತನ್ನ ಕಾಲಿನ ಕರೆಯನ್ನು
ಬಿಚ್ಚಿ, ಬೀಗತಿಯ ಕಾಲಬೆರಳಿಗೆ ಕಟ್ಟಿದಳು. ಅದು ಆಕೆಗೆ ಗೊತ್ತಾಗಲಿಲ್ಲ. ಗಡದಾಗಿ ನಿದ್ದೆಹತ್ತಿತ್ತು.
ದೊಡ್ಡ ನಸುಕಿನಲ್ಲೆದ್ದು ಆತನು ಕರೆಕಟ್ಟಿದ ಕಾಲುಳ್ಳ ಮುದುಕಿಯನ್ನು ಅದೇ ಹಾಸಿಗೆಯಲ್ಲಿ ಸುತ್ತಿ ಬಿಗಿದು, ಹೊತ್ತುಕೊಂಡು ಹೊಳೆಯಕಡೆಗೆ ನಡೆದನು.
ಜೊತೆಯಲ್ಲಿ ಹೆಂಡತಿಯೂ ಇದ್ದಳು. ಹೊಳೆಯಲ್ಲಿ ಒಂದು ಕಡೆಗೆ ನೀರು ಬಹಳವಿದ್ದವು. ಅಲ್ಲಿಗೆ ಹೋಗಿ ತಲೆಯಮೇಲಿನ ಗಂಟನ್ನು ಚೆಲ್ಲಿಕೊಟ್ಟ ಬಳಿಕ
“ಪೀಡೆ ತೊಲಗಿತು” ಎಂದು ಹೆಂಡತಿ ಸಮಾಧಾನದ ಉಸಿರು ಹಾಕಿದಳು.
ಅವರು ತಮ್ಮ ಕೆಲಸ ಮುಗಿಸುವ ಹೊತ್ತಿಗೆ ನಸುಕುಹರಿದು ಬೆಳಗಾಗತೊಡಗಿತು. ಗಂಡ ಹೆಂಡರು ಮನೆಯ ಹಾದಿ ಹಿಡಿದರು.
ಎಂಥದೋ ಮೌನದಲ್ಲಿ ಅರ್ಧದಾರಿ ಮರಳಿ ಬಂದ ಮೇಲೆ “ಮನಸಿನಂತೆ ಮಹಾದೇವ” ಎಂದಳು ಹೆಂಡತಿ.
“ಮನೆಗೆ ಹೋದ ಬಳಿಕ ತಿಳಿಯುವದು” ಗಂಡನ ಪಡಿನುಡಿ.
ಹೆಂಡತಿಗೆ ಅದೇನೋ ದಿಗಿಲು. ಮತ್ತೆ ಅದೇ ಮೌನದಲ್ಲಿ ಮನೆಗೆ ಬರುವಷ್ಟರಲ್ಲಿ ತನ್ನತ್ತೆಯೇ ಬಾಗಿನಿಂತು, ಬಾಗಿಲಮುಂದೆ ಕಸಗುಡಿಸುವದನ್ನು ಕಂಡು ತಬ್ಬಿಬ್ಬಾದಳು. ಆದರೆ ಯಾರಿಗೆ ಹೇಳುವುದು, ಏನೆಂದು ಹೇಳುವುದು. ಹೊಳೆಯ ಪಾಲಾದವಳು ಗಂಡನ ತಾಯಾಗಿರದೆ ತನ್ನ ತಾಯಿಯೇ ಆಗಿದ್ದಾಳೆಂದು
ಬಗೆದು ಒಳಗಿನದೊಳಗೇ ದುಃಖಿಸಿದಳು. ಆಡಿತೋರಿಸಲು ಸಾಧ್ಯವೇ ?
ಹೆಂಡತಿಯ ಅತ್ತೆಯನ್ನು ಹೊತ್ತೊಯ್ದು ಹೊಳೆಕಾಣಿಸುವುದನ್ನು ಬಿಟ್ಟು. ತನ್ನತ್ತೆಯನ್ನು ಹೊತ್ತೊಯ್ಯುವ ಪ್ರಸಂಗ ಬಂದುದು ಆಶ್ಚರ್ಯವೆಂದು ಬಗೆದ ಗಂಡನಿಗೂ ಅದರ ಕೀಲು ತಿಳಿದಿರಲಿಲ್ಲ.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು