ಏನು ಮಾಡೆನು ನನ್ನ ದೊರೆಗಾಗಿ?
ಈ ಹೂವು ಅರಳಿದ್ದೆ ಮುಡಿಗಾಗಿ – ಅವನ
ಅಡಿಗಾಗಿ!
ಜೀವದ ಮಾತ ಆಡುತ ಸೋತು
ಹಾಡಾಗಿ ಹರಿದೇನು ಅವನಲ್ಲಿ
ಕಾಣದ ಲೋಕ ತೆರೆಸುವ ಧೀರ
ಆಳಾಗಿ ನಡೆದೇನು ಬೆನ್ನಲ್ಲಿ!
ಹೆಣ್ಣಿನ ಆಸೆ ತಳೆಯದು ಭಾಷೆ
ಹೊಳೆದೀತು ಮಿಂಚಾಗಿ ಕಣ್ಣಲ್ಲಿ
ಕಾತರ ಹೆಚ್ಚಿ ಕಾಯುವೆ ಹುಚ್ಚಿ
ಕೂಡುತ ಅವನನು ಕನಸಲ್ಲಿ
ಅವನಿಟ್ಟ ಹಾಸು ಅವನಿಟ್ಟ ಮೇಳ
ಅವನು ಹಾಕಿದಂತೆ ದಾಳ
ಹಾಸೊಳು ಹೂಡಿ ನಡೆಸಿದ ಮೋಡಿ
ಅವನ ಆಟಕೆ ಯಾರು ಜೋಡಿ?
*****
ಪುಸ್ತಕ: ನಿನಗಾಗೇ ಈ ಹಾಡುಗಳು