ಸಂತೆಮಾಳದ ಕಚ್ಚಾರಸ್ತೆಗಳಲಿ
ಹೈಹಿಲ್ಡು ಚಪ್ಪಲಿಗಳು ಸರಿಮಾಡಿಕೊಳ್ಳುತ
ಒಂದಿಷ್ಟು ಹಣ ಉಳಿಸಬಹುದೆಂದು
ಚಿಲ್ಲರೆಗಳ ಭಾರಹೊತ್ತು ಬೆವರೊರೆಸಿಕೊಂಡು
ಸಾಮಾನುಗಳ ಚೌಕಾಶಿ ಮಾಡುವುದೇನು….
ಕಡಿಮೆ ಬೆಲೆ ಎಂದಲ್ಲಿ
ಆ ಕಡೆ ಈ ಕಡೆ ಓಡಾಡಿ
ಹಸಿಬಿಸಿಕೊಳೆತ ಏನೆಲ್ಲ ಚೀಲದಲಿ ತುಂಬಿದ್ದೇನು –
ಒಂದಿಷ್ಟು ಕಡಿಮೆ ಬೆಲೆಗೆ ಸಿಕ್ಕಿತು
ಬೆನ್ನು ಚಪ್ಪರಿಸಿಕೊಳ್ಳುವಾಗ ಮಾನಿನಿ
ರಾತ್ರಿ ಹನ್ನೆರಡರ ಲೈಟಿನ ಬಿಲ್‌ಪಟ್ಟಿಗೆ
ಯಜಮಾನ ನಗುತ್ತಾನೊ, ಗುರ್ ಎನ್ನುತ್ತಾನೊ !
ಸೂಪರ್ ಮಾರ್ಕೆಟ್ಟಿನ ಏರ್‌ಕಂಡೀಶನ್
ಪೇಟೆಯೊಳಗೆ ಹಣ ಉಳಿತಾಯಕ್ಕೆ
ಉದ್ದುದ್ದ ಭಾಷಣ ಇವರಿವರಲ್ಲಿ
ಕೊಳ್ಳುವಿಕೆ ಏನೂ ಇಲ್ಲ
ಸುಮ್ಮನೆ ಸುತ್ತಾಡಿ ಮಜ ತೆಗೆದುಕೊಳ್ಳುವ ಹುಚ್ಚು.
ಪಕ್ಕದ ಕಂಫರ್ಟ್‌ರೂಂಗೆ ಹೊಕ್ಕು
ಬಿಟ್ಟಿಯಾಗಿ ಸಿಕ್ಕ ಏನೆಲ್ಲ ಉಪಯೋಗಿಸಿ
ಹೊರಬಂದು ’ನೀವೂ ಹೋಗಿ ಬನ್ನಿ’
ಕಣ್ಣು ಸನ್ನೆ……
ಯಜಮಾನ ಮಕ್ಕಳು ಮರಿಗಳೆಲ್ಲ
ಒಳಹೊಕ್ಕು ಹೊರಬಂದು ಒಳಹೊಕ್ಕು
ಹೊರಬಂದು
ಆಹಾ ! ಮತ್ತೆ ಮತ್ತೆ ಬರುವ ಮಾತುಗಳು
ಸೂಪರ್ ಮಾರ್ಕೆಟ್ ಸಿಆಯ್‌ಡಿ ಓನರ್
ಒಳಗೊಳಗೇ ಗುರ್ ಗುಡುತ್ತ
ಸುಮ್ಮ ಸುಮ್ಮನೆ ನಗೆಬೀರುತ್ತಾನೊ,
ತಲೆಹಾಕದಿರಲಿ ಈ ಜನ ಮತ್ತೊಮ್ಮೆ
ಈ ಕಡೆ ಎನ್ನುತ್ತಾನೊ…. !!
*****
ಪುಸ್ತಕ: ಇರುವಿಕೆ