Home / ಬಾಲ ಚಿಲುಮೆ / ಕಥೆ / ಎರಡೂ ಇಲ್ಲವಾದ ಕಥೆ

ಎರಡೂ ಇಲ್ಲವಾದ ಕಥೆ

ಒಂದು ಊರಿನಲ್ಲಿ ದಂಪತಿಗಳು ಇದ್ದರು. ಗಂಡನು ಮುದುಕನೆಂದು ಅವಳಿಗೆ ಅವನ ಮೇಲೆ ಮಮತೆಯಿರಲಿಲ್ಲ. ಯಾವಾಗಲೂ ಅದೇ ಚಿಂತೆಯಾಗಿ ಅವಳು ಮನೆಯಲ್ಲಿಯೇ ಇರುತ್ತಿರಲಿಲ್ಲ. ಹಾಗೆ ಸುತ್ತುತ್ತಿರುವ ಅವಳನ್ನು ನೋಡಿ ಒಬ್ಬ ತುಂಟನು, ಎಲೆ ಸುಂದರಿ, ನನ್ನ ಹೆಂಡತಿಯು ಸತ್ತುಹೋದಳು. ನಿನ್ನನ್ನು ನೋಡಿ ನನಗೆ ಆಸೆಯಾಗುವುದು. ನೀನು ನನ್ನ ಹೆಂಡತಿಯಾಗು” ಎಂದು ಕೇಳಿಕೊಂಡನು. ಅವಳು “ಹಾಗೆ ನೀನು ನನ್ನನ್ನು ಮಾಡಿಕೊಳ್ಳುವುದಾದರೆ ನನ್ನ ಗಂಡನ ಮನೆಯಲ್ಲಿರುವ ಹಣವೆಲ್ಲಾ ತರುವೆನು. ಅವನು ಮುದುಕ ಇವೊತ್ತೋ ನಾಳೆಯೋ ಸಾಯುವನು. ನಾವಿಬ್ಬರೂ ದೇಶಾಂತರ ಹೋಗೋಣ” ಎಂದಳು. ಅವನೂ “ಸರಿ ಹಾಗೇ ಆಗಲಿ.” ಎಂದನು. ಮರುದಿನ ಬೆಳಗಾಗುವುದರೊಳಗಾಗಿ ಅವಳು ಮನೆಯಲ್ಲಿನ ಹಣವನ್ನೆಲ್ಲಾ ಗಂಟು ಕಟ್ಟಿಕೊಂಡು ಬಂದುಬಿಟ್ಟಳು. ಆ ತುಂಟನೂ ಅವಳನ್ನು ಕರೆದುಕೊಂಡು ಆ ಊರು ಬಿಟ್ಟು ಹೋದನು.
ದಾರಿಯಲ್ಲಿ ಒ೦ದು ನದಿಯು ಸಿಕ್ಕಿತು. ಅದನ್ನು ಕಂಡು ಆ ಧೂರ್ತನು “ಇವಳಿಂದ ನನಗೆ ಆಗಬೇಕಾದುದೇನು? ಇವಳನ್ನು ಹುಡುಕಿಕೊಂಡು ಯಾರಾದರೂ ಬಂದರೆ ನನಗೆ ಕಷ್ಟವಾಗುವುದು. ಅದರಿಂದ ಇವಳ ಹಣವನ್ನು ಹಾರಿಸಿಕೊಂಡು ಓಡಬೇಕು.” ಎಂದು ಗೊತ್ತುಮಾಡಿಕೊಂಡು “ನೋಡು, ಈ ನದಿಯನ್ನು ದಾಟುವುದು ಕಷ್ಟ. ಅದರಿಂದ ನಿನ್ನ ಬಳಿಯಿರುವುದನ್ನೆಲ್ಲ ಮೂಟೆ ಕಟ್ಟಿಕೊಡು. ಅದನ್ನು ತೆಗೆದುಕೊಂಡು ಹೋಗಿ ಆ ಕಡೆಯಲ್ಲಿ ಇಟ್ಟು ಬಂದು ಕರೆದುಕೊಂಡು ಹೋಗುವೆನು.” ಎಂದನು. ಅವಳು ಎಲ್ಲವನ್ನೂ ಕಟ್ಟಿದಳು. “ನೀನು ಉಟ್ಟರುವ ಸೀರೆಯನ್ನೂ ಕೊಡು ಈ ತುಂಡನ್ನು ಉಟ್ಟುಕೊಂಡಿರು. ನದಿ ದಾಟುವಾಗ ನೆನೆದುಹೋದರೆ ಒಣಗುವವರೆಗೂ ಇಲ್ಲಿಯೇ ಕೂತಿರಬೇಕು” ಎನ್ನಲು, ಅವಳು ಹಾಗೂ ಮಾಡಿದಳು. ಒಂದು ತುಂಡು ಬಟ್ಟೆಯುಟ್ಟು ಕೊಂಡು ನದಿಯ ತೀರದಲ್ಲಿ ಒಣಕುತ್ತ ಕುಳಿತುಕೊಂಡಳು. ಆ ತುಂಟನು ನದಿಯನ್ನು ದಾಟಿ ಹೇಳದೆ ಕೇಳದೆ ಎಲ್ಲಿಯೋ ಹೊರಟುಹೋದನು.
ಅವಳು ಹೀಗೆ ಒಣಕುತ್ತೆ, ಅಳುತ್ತ ಕುಳಿತಿರುವಾಗ ಒಂದು ನರಿಯು ಅತ್ತ ಬಂತು. ಅದರ ಬಾಯಲ್ಲಿ ಒಂದು ತುಂಡು ಮಾಂಸವಿತ್ತು. ಅದು ಬರುವ ವೇಳೆಗೆ ನೀರಿನಲ್ಲಿ ಎರಡು ಮೀನುಗಳು ಜಗಳವಾಡಿ, ಒ೦ದು ಮೀನು ನೀರಿನಿಂದ ಹಾರಿ ದಡದಲ್ಲಿ ಬಿತ್ತು. ಅದನ್ನು ಕಂಡು ನರಿಯು ತನ್ನ ಬಾಯಲ್ಲಿ ಇದ್ದ ಮಾಂಸದ ತುಂಡನ್ನು ಅಲ್ಲಿ ಹಾಕಿ ಆ ಮೀನು ಹಿಡಿದುಕೊಳ್ಳಲು ಹೋಯಿತು. ಆ ಮೀನು ಮತ್ತೆ ನೀರಿಗೆ ಪುಣಕ್ಕನೆ ನೆಗೆಯಿತು. ಇತ್ತ ನರಿಯು ಹಾಕಿದ್ದ ಮಾಂಸದ ತುಂಡನ್ನು ಹದ್ದು ಕಚ್ಚಿಕೊಂಡು ಹೋಯಿತು. ನರಿಯು ಅದೂ ಹೋಗಿ ಇದೂ ಹೋಗಲು ಪೆಚ್ಚಾಗಿ ನಿಂತುಕೊಂಡಿತು. ಅದನ್ನು ಕಂಡು ಆ ಹೆಂಗಸು ನಕ್ಕು “ಅಯ್ಯೋ ಪಾಪ, ಮೀನು ನೀರಿನ ಪಾಲಾಯಿತು : ಮಾಂಸ ಹದ್ದಿನ ಪಾಲಾಯಿತು. ನಿನ್ನ ಮೊಖ ಪೆಚ್ಚಾಯಿತು”? ಎಂದು ಹಾಸ್ಯ” ಮಾಡಿದಳು. ನರಿಗೆ ರೇಗಿ ಹೋಗಿ ಹೇಳಿತು:-
ನನ್ನ ಜಾಣಿಗೆರಡು ಸಾಟಿ ನಿನ್ನ ಜಾಣು ॥ 
ಗಂಡನಿಲ್ಲ ಮಿಂಡನಿಲ್ಲ ಆದೆ ಬೆತ್ತಲೆ ॥ 
ಎಂದು ಮೂದಲಿಸಿ ಮುಂದೆ ಹೋಯಿತು.
ಎಂದು ಕಪಿಯು ಕಥೆಯನ್ನು ಮುಗಿಸುತ್ತಿದ್ದ ಹಾಗೆಯೇ ಮತ್ತೊಂದು ಜಲಚರವು ಬಂದು “ಎಲೋ, ನಿನ್ನ ಮನೆಯನ್ನು ಇನ್ನೊಂದು ಮೊಸಳೆಯು ಹಿಡಿದುಕೊಂಡಿತು.” ಎಂದು ಹೇಳಿತು. ಅದನ್ನು ಕೇಳಿ ಮೊಸಳೆಯು “ಇದೀಗ ಅದೃಷ್ಟ ಎನ್ನುವುದು. ಎಡಹಿದಕಾಲು ಎಡಹುವುದು. ಅನ್ನ ವಿಲ್ಲದಿದ್ದಾಗ ಹಸಿವು ಹೆಚ್ಚುವುದು. ಅಪತ್ತುಗಳೂ ವೈರಗಳೂ ಹೆಚ್ಚುವುದು. ಇವೆಲ್ಲ ದುರದೃಷ್ಟ ಕಾಲದಲ್ಲಿ ಆಗುವ ಕೆಲಸಗಳು; ಏನು ಮಾಡಲಿ? ಈಗ ಅವನೊಡನೆ ಯುದ್ಧ ಮಾಡಲೇ? ಒಳ್ಳೆಯ ಮಾತಿನಿಂದ ಕಾರ್ಯವನ್ನು ಸಾಧಿಸಲೇ? ಏನಾದರೂ ಕೊಟ್ಟು ಅವನನ್ನು ಮನೆ ಬಿಡಸಲೆ?” ಎಂದು ಬಹಳ ಯೋಚನೆ ಮಾಡಿ, ಏನು ಮಾಡಬೇಕೆಂದು ಕಪಿಯನ್ನೇ ಕೇಳಿತು.
ಅದು “ನೀನು ಕೃತಘ್ನ, ನಿನಗೆ ನಾನು ಎನೂ ಹೇಳುವುದಿಲ್ಲ.” ಎನ್ನಲು ಮೊಸಳೆಯು ಅಯ್ಯಾ, ಬಲ್ಲವರು, ಏಳು ಹೆಜ್ಜೆ ಒಟ್ಟಿಗೆ ನಡೆದರೆ ಒಬ್ಬರಿಗೊಬ್ಬರು ಮಿತ್ರರಾಗುವರು ಎನ್ನುವರು. ಅದರಿಂದಲಾದರೂ ನೀನು ನನಗೆ ಹಿತವಾಗುವುದು ಯಾವುದು ಅದನ್ನು
ಹೇಳು.
ಅಲ್ಲದೆ, ಉಪಕಾರಿ ಗುಪಕಾರ ಮಾಳ್ಪುದೇನದು ದೊಡ್ಡಿತು || 
ಅಪಕಾರಿ ಗುಪಕಾರಮಾಳ್ಪುದದು ನಿಜ ದೊಡ್ಡಿತು ॥ ೨೬ ॥ 
ಎಂದು ಕೇಳಿಕೊಂಡಿತು. ಅದಕ್ಕೆ ಕಪಿಯು ಹೇಳಿತು: ಹಾಗಾದರೆ ಕೇಳು. ಹೋಗಿ ಮೊದಲು ಅದರೊಡನೆ ಯುದ್ಧ ಮಾಡು. ಕೇಳಿಲ್ಲವೆ
ರಣದೆ ಸೋತರೆ ಸಗ್ಗ, ಮನೆಯ ಗೆಲ್ಲಲು ಕೀರ್ತಿ | 
ರಣಕೆ ಇಳಿದರೆ ಹೀಗೆ, ಹಿರಿಯ ಲಾಭಗಳೆರಡು ॥ ೨೭॥ 
ಮಹಾ ಚತುರಕನಂತೆ ಮಾಡಬೇಕು.
ಅಲ್ಲದೆ,
ನಮಿಸಿ ಸಾಮದಿಂದುತ್ತಮನನೊಲಿಸಿಕೊ॥ 
ಶೂರನಂ ಭೇದದಿಂದೊಡೆದು ಜಯಿಸಿಕೊ | 
ನೀಚಗಿತ್ತಿನಿತು ದಾನದಿಂ ಬಿಡಿಸಿಕೋ | 
ಸಮನೊಡನೆ ಮಲೆತು ಹೋರಾಡಿ ಗೆದ್ದುಕೋ ॥ ೨೮ ॥
ಮೊಸಳೆಯು ಹೇಳಿತು: “ಅದು ಹೇಗೆ?” ಎಂದು:
ಕಪಿಯು ಹೇಳಿತು.
*****
ಮಹಾ ಚತುರಕನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...