ಎಷ್ಟು ಕ್ಷುಲ್ಲಕಮಾಗಿ ಕಂಗಳಿಗೆ ತೋರುತಿದೆ
ಕೆಳಗಿನ ಜಗತ್ತು ನಾನೊರಗಿದೀ ಬಂಡೆಗಳ
ಪೀಠದಿಂ! ಹಸುರು ಬಣ್ಣದ ಹತ್ತಿಯುಂಡೆಗಳ
ವೊಲು ತೋರಿ ತರುರಾಜಿಯಿದು ಮಂಕ ತೂರುತಿದೆ
ತಳವ ನೋಡುತಲಿರುವ ನನ್ನ ಕಣ್ಣುಗಳಂಜೆ!
ಅದೊ! ಸುದೂರದ ಗಿರಿಗೆ ಹಾವಿನೊಲು ರೂಹಾಂತು
ಕಾಳ್ಗಿಚ್ಚು ಅಗ್ನಿಸೋಪಾನವನು ತಾನೆಂತು
ರಚಿಸಿ ರಂಜಿಪುದಹಾ! ಅಗೊ ಅಗೋ! ಮುಚ್ಚಂಜೆ
ಹಡೆದಳೋ ದಿವ್ಯಶಿಶುವಂ, ಬೆಳಕ ಸುಧೆಯಿಂದ
ಹೆಪ್ಪುಗಟ್ಟಿದ ಕೆನೆಯೊ ಎಂಬವೊಲು ಪೆರೆಯುದಿಸಿ
ಕಮರಿಯಾಳದ ಬಸಿರ ಪುರುಳ ಪರಿಕಿಸಲೆಳಸಿ
ಶೀತಕಿರಣಗಳಟ್ಟುತೇರಿದನು ಜವದಿಂದ!
ಪ್ರಕೃತಿ ಕವಯಿತ್ರಿಯೊಮ್ಮೊಮ್ಮೆ ರಚಿಸುವ ಹಾಡು
ಮರೆಯಲಾಗದ ಮಧುರ ತಾನಗಳ ನೆಲೆವೀಡು!
*****

















