Home / ಕವನ / ಅನುವಾದ / ಮುದಿಯ ರಾಮಗೌಡ

ಮುದಿಯ ರಾಮಗೌಡ

ಕುರಿಗಳೆಲ್ಲಾ ರೊಪ್ಪದಲ್ಲಿ, ದನಗಳೆಲ್ಲಾ ತೊಟ್ಟಿಯಲ್ಲಿ,
ಜನಗಳೆಲ್ಲಾ ಹಟ್ಟಿಯಲ್ಲಿ ಬಳಲಿ ಕೆಡೆದರು ತೆಪ್ಪಗೆ;
ಗಂಡ ಗೊರಕೆಹೊಯ್ಯುತಿಹನು ನಿದ್ದೆ ಕವಿದು ಮಗ್ಗುಲಲ್ಲಿ-
ನನಗೋ ಹೊಟ್ಟೆಯ ದುಃಖವೆಲ್ಲಾ ಕಣ್ಣ ಹನಿಯಲಿ ಸುರಿವುದು.

ಚಿಕ್ಕ ಹರೆಯದ ಚಾಮನೊಲಿದು ಮದುವೆಗೆನ್ನ ಬಯಸುತ್ತಿದ್ದ.
ಮಾತನೆತ್ತಲು ರೆಕ್ಕವಿಲ್ಲದೆ ನಾಚಿ ಸುಮ್ಮನೆ ಇರುವನು.
ದುಡ್ಡು ಕಾಸನು ಕೂಡಿಹಾಕಲು ಹೋಗಿ ಹಡಗ ಸೇರಿಕೊಂಡ-
ದುಡ್ಡು ಕಾಸನು ನನ್ನ ಸಲುವೇ ಕೂಡಿಹಾಕಲು ಹೋದನು.

ಅವನು ಹೋಗಿ ನೆಟ್ಟಗೆಲ್ಲಾ ಎರಡು ವಾರ ಕಳೆಯಲಿಲ್ಲ.
ಅಪ್ಪ ಕೈಯ ಮುರಿದುಕೊಂಡ; ಕಳ್ಳರೊಯ್ದರು ದನವನು.
ಅವ್ವ ನರಳುತ ಬಿದ್ದುಕೊಂಡಳು, ಚಾಮ ಎತ್ತಲೋ ಕಡಲಲಿದ್ದನು.
ಇತ್ತ ಮುದಿಯ ರಾಮಗೌಡ ನನ್ನ ಬಯಸಿ ಬಂದನು.

ಅಪ್ಪ ಹೊರಗೆ ಗೆಯ್ಯಲಾರ, ಅವ್ವ ಒಳಗೆ ನೆಯ್ಯಲಾರಳು;
ಹಗಲು ಇರುಳು ನಾನು ದುಡಿದೂ ನಮಗೆ ಹಿಟ್ಟು ಹುಟ್ಟದು.
ರಾಮಗೌಡ ಕಷ್ಟಕಾದ : ಕೈಯ ಹಿಡಿದು ಕಣ್ಣ ನೆನಸಿ,
ಅವರ ಸಲುವಾಗೆನ್ನ ಚೆನ್ನಿ, ಮದುವೆಯಾಗು ಎಂದನು.

ನನ್ನ ಮನಸೋ ಒಲ್ಲೆನೆನುವುದು; ಚಾಮ ಬರುವ ನಚ್ಚು ಹೋಗದು;
ಎಲ್ಲಿ ಬರುವನು? ಗಾಳಿ ಬಡಿದು ಹಡಗು ಪುಡಿಪುಡಿಯಾಯಿತು.
ಹಡಗು ಪುಡಿಪುಡಿಯಾಯಿತಯ್ಯೋ ಸಾಯದೇತಕೆ ಚಾಮ ಉಳಿದ!
ಕೊರಗಿ ನಾನೀ ಬೇಗೆಯಲ್ಲಿ ಏಕೆ ಬದುಕುತ್ತಿರುವೆನು!

ಅಪ್ಪ ಹೇಳಿದ, ಗದರಿಕೊಂಡ; ಅವ್ವ ಬಾಯಲಿ ಆಡಒಲ್ಲಳು;
ಅವಳು ನೋಡಿದ ನೋಟವೇ ನನ್ನೆದೆಯನಿರಿಯಿತು, ಮುರಿಯಿತು.
ಅವನ ಕೈಯಲಿ ಕೈಯನಿಟ್ಟರು; ಮನಸು ಕಡಲಲಿ ನಿಂತುಹೋಯಿತು.
ಅಂತು ಮುದಿಯ ರಾಮಗೌಡ ನನಗೆ ಗಂಡನಾದನು.

ಮದುವೆಯಾಗಿ ನೆಟ್ಟಗೆಲ್ಲಾ ನಾಲ್ಕುವಾರ ಕಳೆಯಲಿಲ್ಲ.
ಬಾಗಿಲಲ್ಲಿ ಕಲ್ಲಮೇಲೆ ಕುಳಿತು ಕೊರಗುತ – ಕಂಡೆನು!
ಗಾಳಿಯಾಗಿ ಬಂದ ಚಾಮ ಎಂದುಕೊಂಡೆನು – ಚಾಮು ನಕ್ಕು,
ತೆರವ ತಂದೆ, ಮದುವೆಯಾಗಲು ಬಂದೆ, ಚೆನ್ನಿ , ಎಂದನು .

ಬಿಕ್ಕಿ ಬಿಕ್ಕಿ ನುಡಿಸಿ ನುಡಿಸಿ, ದುಃಖವೆಲ್ಲಾ ಹೇಳಿಕೊಂಡೆವು,
ಒಂದು ಮುತ್ತ ಸೆಳೆದುಕೊಂಡೆವು-ಅಟ್ಟಿಬಿಟ್ಟೆ, ಆಗಲೆ!
ಸಾಯ ಒಲ್ಲೆನೆ ನಾನು ಪಾಪಿ! ಅಯ್ಯೊ! ಪಾಪಿಗೆ ಸಾವು ಬಹುದೆ?
ಹುಟ್ಟದೇ ಇರಬಾರದೇ! ಈ ಬೇಗೆಬಾಳನು ತಾಳೆನೇ!

ಗಾಳಿಯಾಗಿ ಸುಳಿಯುತಿರುವೆ-ಮನೆಯ ಕೆಲಸ ಅಕ್ಕರಿಲ್ಲ,
ಚಾಮನನು ನೆನೆಯುವುದು ಪಾಪ ; ಎಷ್ಟೋ ತಡೆಯುವೆ ಮನಸನು.
ಒಳ್ಳೆ ಗರತಿಯಾಗಿ ಬದುಕಲು ಎದೆಯನೆಷ್ಟೋ ಗಟ್ಟಿಮಾಡುವೆ,
ರಾಮಗೌಡನ ಪ್ರೀತಿ ನಂಬಿಕೆಗೆಂತು ದ್ರೋಹವ ಬಗೆವೆನು!
*****
LADY LINDSAY (1750-1825): Auld Robin Gray

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...