Home / ಕವನ / ಕವಿತೆ / ಕ್ರೀಟದೇವಿ

ಕ್ರೀಟದೇವಿ

ಮುನ್ನೀರ ಚೆಲುವನು ಮುಂಗಾಣಬಯಸಿದಲ್ಲಿ
ಭೂಮಧ್ಯ ಸಮುದ್ರವನು ನೋಡು ಕಿರುಹಗಲಿನಲ್ಲಿ,-
ಶರದೃತುವಿನಾರಂಭದಲ್ಲಿ!

ನೂರೊಂದು ಬುರುಗಿನ ಬಳ್ಳಿಯೊಡನೆ ತಿಳ್ಳಿಯಾಡುತಿದೆ ಗಾಳಿ,
ಕಳ್ಳಹೆಜ್ಜೆಯನಿಕ್ಕಿ ತೆರೆಗಳನು ತರಿದೊಡ್ಡುತಿದೆ
ಸಿಂಗರಿಸಿ ಮ೦ಜಿನಂತಹ ಸೀಕರವನೇಳು ಬಣ್ಣಗಳಿಂದ.
ದಿಕ್ಕಿಲ್ಲದೆ ಬಳ್ಳಿವಳ್ಳಿಯಾಗಿ ತೇಲುತಿದೆ ಬೆಳ್ಳಿಯ ಬುರುಗು!

ನೋಡುತೀ ಬೆಳ್ಳಿಯ ಕೆನೆಯನು-ಫೇನವನು-
ಹುಟ್ಟುಕಡೆಯಲೊಡೆದು ಬರುವ ವಿಮಲೋದಕವನು-
ನೋಡಿದಲ್ಲೆಲ್ಲ ಕೆನೆವಾಲಂತೆ ಥಳಥಳಿಸುವ ಸಮುದ್ರವನು,-
ನೆನೆಯುವೆನು ಹಿರಿಯರೊರೆದೊಂದು ಮಾತ:
ಕ್ಷೀರಸಾಗರವದು ಕನಸಲ್ಲ! ಕಣ್ಣಿನ ಬದುಕು!
ಸೂರ್ಯನಾರಾಯಣನ ಪದತಲದಿ ಪವಡಿಸಿಹ ಕ್ಷೀರಸಾಗರವ ಕಾಣು!

ಈ ಹಾಲ್ಗಡಲ ಹೃದಯ ಕಮಲವು ಬಿರಿಯೆ ಹಿಂದೊಮ್ಮೆ
ಮೆಲ್ಲನದರೊಳಗಿಂದ ಜನಿಸಿದೆ ಮಾಲಕುವಿುಯಂತೆ:
ವರಿಸಿದೆ ದೇವನ, ಹರಿಸಿದೆ ನಿನ್ನಣುಗರನು: ಓ ಕ್ರೀಟದೇವಿ!
ನಿನ್ನರಿಗಳಳಿದರೆಲೆ ಕ್ರಿಮಿಕೀಟಕಗಳಂತೆ!

ಹಬ್ಬಿತು ನಿನ್ನ ಕೀರ್ತಿ ಸಪ್ತಸಮುದ್ರಗಳ ದಾಟಿ;
ಉಳಿದ ನೆಲದಣುಗರು ನಿದ್ದೆ ತಿಳಿದೇಳುವ ಮುನ್ನ
ಕಟ್ಟಿದರು ನಿನ್ನ ಕುವರರು ಕೊತ್ತಳದ ಕೋಟೆಗಳನು,-
ಜನರ ಕಟ್ಟುಪಾಡನು, ಸುಖವನು, ಶಾಂತಿಯನು,-
ಆಳಿದರು ನೂರು ಪಟ್ಟಣಗಳನು, ಬಾಳಿದರು ವೈಭವದಿ,-
ಹೋಮರನು ಒಪ್ಪುವಂತೆ!

ಇ೦ದಿಗೋ! ಆವರಿಸಿಹುದು ಹಿಮವು ನಿನ್ನ ಪರ್ವತಾವಳಿಗಳನ್ನು:
ಮಣ್ಣುಗೂಡಿಹುದಿಂದು ಗಳಿಸಿದ ಘನೈಶ್ವರ್ಯವೆಲ್ಲ:
ನೆಟ್ಟಿಹರು ಬೆಳಕು-ನಿಲ್ಗಂಬವನೊಂದ ನಿನ್ನ ತಲೆಯ ಮೇಲೆ,
ಮರೆಯಾಗದಿರಲೆಂದು ಹಿಂದೆ ನೀನೂರಿದಾ ನೆನಹು.
ಸಾಮ್ರಾಜ್ಯ ಮದದಿ ನಿನ್ನ ಲೆಕ್ಕಿಸದೆ ಮುಂದೆ ಸಾಗಿರುವವರ
ಸೊಕ್ಕಿಳಿಯಬಹುದೆಂದು ಮಂಜುದುಟಿಯ ಮುಗುಳ್ನಗೆಯಿಂದ ಸೂಚಿಸಿ
ಕರಾಳ ಕಾಲದುಶ್ಶಾಸನನ ತೋಳ್‌ ತಕ್ಕೆಗೆ ಸಿಲುಕಿ ಬಣ್ಣಗುಂದಿ
ಬಿಳುಪೇರಿ ನಿಲ್ಲಲಾರದೆ ನಿಂತಿರುವೆ ಮರೆಮಾಚಿ ನಾಚಿ ಓ! ಕ್ರೀಟದೇವಿ!
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...