ಇರುವು-ಅರಿವಿನಾ ಹರವೆ ನಮ್ಮ ಕರುವಾಗಿ ತಾಯಿಯಾಗಿ
ಮೂರನೊಂದರಲಿ ಪಿಂಡಗೊಳಿಸುವಾ ಗುರುವೆ ಬಾಯಿಯಾಗಿ.
ಸೀಮವನ್ನು ನಿಸ್ಸೀಮದೊಡನೆ ಹುದುಗೊಳಿಸಿ ಮಾಯಿಯಾಗಿ
ಜೀವ-ಪುಷ್ಪದೊಳೆ ಫಲಿಸೆ ಪಕ್ವತೆಗೆ ಬರಲಿ ಕಾಯಿಯಾಗಿ ||
ಕಾಯ ಕಾಣುವದು ಜೀವ ನೋಡುವದು ಭಾವ ತೋರಲುಂಟು.
ಬೇರೆ ಬೇರೆ ಈ ಪಸರ ಬೆಳೆದರೂ ಐಕ್ಯ ಬೇರೊಳುಂಟು
ಸಮತೆ ಕಾಯುವಾ ಮಮತೆಯೊಂದು ಒಟ್ಬೊಟ್ಟು ಮೂರೊಳುಂಟು.
ಒಂದರಲ್ಲಿಯೆ ನೂರು ಸಾಸಿರದ ಲಕ್ಷ ಕೋಟಿ ಗಂಟು ||
ತನುವಿನಲ್ಲಿಯೇ ತನ್ನತನದ ನೆಲೆಯಾಗಲೆಂದೆ ತಾನು
ತೊಗಲು ಮೈಯ್ಯೊಳೇ ಅರಿವು ನುರಿಯುವದು ಆಗಿ ಹೋಗಿ ನಾನು.
ಬಾನೆ ಹೊಲವಾಗಿ ಬೆಳಕಿನೊಲವಾಗಿ ಬೀಜನಾದ ಭಾನು.
ಭಾವರಾಣಿಯೋ ಜೀವ ಜಲವನೇ ಮಾಡುತಿಹಳು ಜೇನು ||
*****

















