ಜೊತೆಯಿರದ ಈ ಬಾಳ ಹಾಳು ಗೋಳಿನ ಕಥೆಯ
ದಾರಿ ಕೊರಕಲುಗಳಲಿ ಸಾಗುತಿರಲು;
ಹಗಲಿರುಳು ಉರುಳಿದರು ಹೊಸತನವೆ ಬರದಿರಲು
ಏನೊ ಎಂತೋ ಜೀವ ನರಳುತಿರಲು.
ನೂರಾರು ಹರದಾರಿ ತಿರುತಿರುಗಿ ಅತಿಥಿಯೊಲು
ನಿನ್ನ ಮನೆ ಹೊಸತಿಲಲಿ ಬಂದು ನಿಲಲು;
ತಂಗಾಳಿ ಸೋಕಿದರೆ ಹಾರುತಿಹ ಮಳೆ ಮೋಡ
ಕರಗಿ ನೀರಾದಂತೆ ಎದೆಯ ಅಳಲು.
ಕರುಳ ತಂತಿಗೆ ಬೆರಳು ನಸುವೆ ತಾಕಿದರೂನು
ಮನಸಿನೊಳಮರೆಯಲ್ಲಿ ಏನೊ ತಾನ;
ನೂರು ನೋವನು ಮರೆಸಿ ಕೈಚಾಚಿ ನೀಡಿದೆಯ
ಕತ್ತಲಿಹ ಎನ್ನೆದೆಗೆ ದೀಪದಾನ.
*****

















