ನಿನ್ನ ನಾನು ಪ್ರಿತಿಸುವೆನು
ಶ್ಯಾಮ ಮಧುರ ಯಾಮಿನಿ
ನಿನಗಾಗಿಯೆ ಹಾತೊರೆವೆನು
ಸ್ವಪ್ನ ಲೋಕ ಸ್ವಾಮಿನಿ.
ನೀ ಬಂದರೆ ಇಳೆಗಿಳಿವುದು
ಅತುಲ ದಿವ್ಯ ಶಾಂತಿಯು
ನಿನ್ನಿರುಳಲಿ ಕರುಳಿಗೆಲ್ಲಿ
ಸಂಸಾರದ ಭ್ರಾಂತಿಯು
ಉಕ್ಕಿಸುತ್ತ ಕಾಳ್ಗಡಲನು
ಬ್ರಹ್ಮಾಂಡವ ಮುತ್ತಿದೆ
ಬಾನ್ಬಯಲಲಿ ಹಣ್ಣಿಸಿರುವ
ರವಿ ತೇಜವ ಮುಕ್ಕಿದೆ.
ಅಂಧಂತಮವೆಂದು ನಿನ್ನ
ಕರೆದರೇನು ರಜನಿಯೆ
ನಿನ್ನೊಡಲಿದೆ ದೀಪ್ತಿಮಂತ-
ತಾರಾಗೃಹ ರಾಶಿಯೆ.
ಪ್ರತಿ ಜೀವದ ಪ್ರತ್ಯಾಸೆಯು
ನಿನ್ನೆಡೆಯಲಿ ಬೆಳೆಯಿತು
ಈ ಲೋಕವು ಸ್ವರ್ಲೋಕದ
ಸುಖ ಸ್ವಪ್ನವ ಸವಿಯಿತು.
ಅಜ್ಞಾನದ ಕದಡೆಲ್ಲವು
ನೀ ಕರುಣಿಸೆ ತಿಳಿಯಿತು
ನಿನ್ನುಡಿಯಲಿ ಋಷಿವರರಿಗೆ
ಸದ್ದರ್ಶನ ದೊರೆಯಿತು.
ಅರ್ತರ ಮೊರೆ, ದೀನರ ದಯೆ,
ಸೋತವರಿಗೆ ಆಸರೆ
ಮಾದೇವನು ಮರೆತವರಿಗು
ನೀ ಮಮತೆಯ ಹೆದ್ದೊರೆ.
ಮಾದಾಯಿಯೆ ನಿನ್ನೊಲವಿನ
ಹಾಲ್ಬಲವನು ಪಡೆಯಲು.
ವಿಸ್ತಾರಿತ ಹೃತ್ಕುಮುದದ
ಹೂಸೊದೆಯನು ಸವಿಯಲು
ಈ ಮೌನದ ಹಿಮಶೃಂಗಕೆ
ಈ ಶಾಂತಿಯ ಗಂಗೆಗೆ
ಓಡೋಡುತ ನಾ ಬಂದೆನು
ತೃಷಿತಾತ್ಮದ ತುಷ್ಟಿಗೆ.
ನೀ ಬೀಸಿದ ನಿದ್ದೆಯ ಬಲೆ
ಸವಿಕನಸಿನ ಸಂಕಲೆ
ಹರಿದೊಗೆದೆನು ಜಾಗರಿಸುತ-
ಲೀನನಾದೆ ನಿನ್ನೊಳೆ.
ಇಲ್ಲಿ ನಾನು ಕಾಣಲಿಲ್ಲ
ನಿಜ ಮರೆಸುವ ಕಲೆಯನು
ಸುಳ್ಳು ಸುಖದ ಸವಿ ಮಬ್ಬಿನ
ಸೆರೆಹಿಡಿಯುವ ಬಲೆಯನು
ನಿಂತೆ ನಿನ್ನ ಈ ವಿಶಾಲ-
ಅಂತರಂಗ ಸಂಮುಖ
ಕಂಡೆ ನಾನು ಈ ಭುವನದ
ಭವ್ಯವಾದ ಶ್ರೀಮುಖ.
ಹೃದಯದಲ್ಲಿ ಹುದುಗಿರಿಸಿದ
ಭಾವಲತೆಯು ನೆಗೆದಿತು
ಹೂವಿಸುತ್ತ ತೇಲಿಸಿತೊ
ಗಂಧ ಕವನ ಮೆಲ್ಲಿತು.
ಜಗದ ಗಾಯದಿಂದ ಬಸಿವ
ಕರುಣಾಜಲ ಹೊಮ್ಮಿತು
ಎಂಟು ದಿಕ್ಕಿನಿಂದ ಹರಿವ
ಗಾಳಿಯಲ್ಲಿ ತುಂಬಿತು.
ಪತಿತ ಶಪ್ತ ಪಾಪಾತ್ಮರ
ನಿಟ್ಟುಸಿರೂ ಮೊರೆಯಿತು
ನಿನ್ನದೆ ಬಾಗಿಲವ ತಟ್ಟಿ
ಆಸರೆಯನು ಕೇಳಿತು.
ಮುರಿದೊಲವಿನ ಕನಿಕರವೂ
ನಿನ್ನ ಮುಖದಿ ಮೂಡಿತು
ನೊಂದವರಾ ಕಣ್ಣೀರೂ
ನಿನ್ನೆವೆಯಿಂದಿಳಿಯಿತು.
ಕರುಣೆಯಲ್ಲಿ ಕಂಡರಿಸಿದ
ಶ್ಯಾಮನ ಮಧುಮೂರ್ತಿಯು
ನಿನ್ನದೆಯಲಿ ಮಿಂಚಿತದೊ
ಅತಿ ಬಂಧುರ ಜ್ಯೋತಿಯು.
ಸುಳಿಗಾಳಿಯ ಕೊರಳಿನಲ್ಲಿ
ಮುರಲಿ ಗೀತ ಹೊಮ್ಮಿತು
ಜಗದಾತ್ಮದ ಮೂಕ ಮೌನ
ಪ್ರಾರ್ಥನೆಯಲ್ಲರಳಿತು
ಬಾನ್ನೆಲದಲಿ ಸೂಸಿತೊಂದು
ಭಾವಲಹರಿಯದ್ಭುತ
ಪಂಚಕರಣ ಹರಣಗಳನು
ಕಣ ಕಣದಲಿ ಮೀಟುತ
ನವಲೋಕದ ನವತೇಜದ
ಬೀಜಾಂಕುರವಾಯಿತು
ಆ ವಿಭವದ ಉನ್ಮಾದವು
ಎಲ್ಲೆಲ್ಲೂ ತೋರಿತು.
ನನ್ನೆದೆಯನು ಮುಟ್ಟಿ ತಾಯೆ
ಆ ಆಸೆಯ ಚಿಗುರಿಸು
ಹಗೆ ಕೊಳೆಗಳ ತೊಳೆದು ತಾಯೆ
ಹೊಸ ಕೆಳೆಗಳ ಬೆಳೆಯಿಸು!
*****

















