ಕಟ್ಟಿದ ಕಣ್ಣಿನ ಬಟ್ಟೆಯೊಳಗೆ
ಕರಟಿಹೋಯಿತೇ ಬದುಕು?
ಕಣ್ಣಿದ್ದೂ ಕಾಣಲಿಲ್ಲ ನೀನೇನನ್ನೂ
ಮುಚ್ಚಿದ ಕಣ್ಣಿನೊಳಗೆ ಗಂಡನ ಪ್ರೀತಿ ಮಾತ್ರ
ಮಕ್ಕಳ ಮೇಲಿನ ಪ್ರೀತಿಯೇ
ಮುಳುವಾಯಿತು ನಿನ್ನ ಪಾಲಿಗೆ
ಮಮತೆಯ ಬೇಲಿಗೆ ನಿನ್ನ ದೇಹದ್ದೇ ಹೊದಿಕೆ
ಸಮಾಜದ ಕಣ್ಣಿಗೆ ನೀನಿನ್ನೂ ತಪ್ಪಿತಸ್ಥಳು
ತಾಯ್ತನದ ಹೊಣೆ ನಿನ್ನೆಲ್ಲಾ
ಮಾನವೀಯತೆಗೆ ಮುಕ್ತಿ ಹಾಡಿತು
ನಿನ್ನ ಕಣ್ಣುಗಳಲ್ಲಿ ಮುತ್ತಿದ್ದ ಕತ್ತಲು
ನಿನ್ನವರ ಕೆಟ್ಟತನಕ್ಕಿಂತಲೂ ಗಾಢವಾಗಿತ್ತು
ಕವಿಗಳ ಲೇಖನಿಗಳು ಓಡಾಡಿವೆ
ನಿನ್ನ ಜೀವನದ ಮೇಲೆ
ಪುಟದಲ್ಲೆಲ್ಲಾ ಕಪ್ಪು ಚುಕ್ಕೆಗಳದ್ದೇ ಗುರುತು
ಯಾರೂ ಬರೆದಿಲ್ಲ ನಿನ್ನ ಒಳ್ಳೆತನದ ಕುರಿತು
ಗಂಡನಿಗಿಲ್ಲದ ಸಂಪತ್ತನ್ನು ತಿರಸ್ಕರಿಸಿದ
ನಿನ್ನ ತ್ಯಾಗವಿನ್ನೂ ಮರೆಯಲ್ಲೇ ಅಡಗಿದೆ
ನನಗೊಂದು ಅನುಮಾನ ನಿನ್ನದೇ ಸ್ಥಿತಿ
ನಿನ್ನವನದಾಗಿದ್ದರೆ ನಿನ್ನಂತೆ ಅವನಿರುತ್ತಿದ್ದನೇ?
*****

















