ಧರ್ಮಕ್ಷೇತ್ರದ ಭೂಮಿ
ಅಸಮ ಬಲ ಇಕ್ಕಡೆಯೊ-
ಳದಮಧ್ಯೆ ಗಂಭೀರ-ಶ್ರೀಕೃಷ್ಣನು.
ಕುರುಕ್ಷೇತ್ರ ಕುರುಸೇನೆ
ಕೌರವನ ರಣಘೋಷ-
ಸೇನಾನಿ ಫಲ್ಗುಣನು ಬಾಣಸಹಿತ.
ಕುರುಸೇನಾ ಕಡಲಲ್ಲಿ
ತೇಲುತಿಹ ಅರ್ಜುನನ
ರಥವೊಂದು-ಸಾರಥಿಯು ಶ್ರೀಕೃಷ್ಣನು;
ರೋಷ ಸಹನೆಯ ಮಧ್ಯೆ
ಬೇಕೊ ಬೇಡೆಂಬುದರ
ದ್ವಂದ್ವದಲಿ-ಜೀಕಲಾಡುತಯಿರ್ದುದು!
ಭಾರತದ ವಿಧಿನಿಯಮ-
ವನ್ನು ನಡೆಸುವ ಭರದಿ
ಸೇರಿರುವ ಪ್ರಶಾಂತ ಸೂರ್ಯೋದಯ
ಸೂರ್ಯಕಾಂತಿಯ ನಲ್ಮೆ
ಪಾರ್ಥಚಿತ್ರದ ಒಲ್ಮೆ
ಒಂದಾಗಿ ಸೇರಿದುವು ಕುರುಕ್ಷೇತ್ರದಿ.
ನೋಡಿದನು ಬಂಧುಗಳ,
ಗುರುಗಳನು ಹಿರಿಯರನು-
ಬೆಂದಮನ ಸಂತೈಸೆ ಚಕ್ರಧಾರಿ!
ಉಸುರಿದನು ಗೀತೆಯನು-
ವಿಶ್ವಯೋಗದ ಗುಟ್ಟು
ಬಿಚ್ಚಿದನು-ಅರ್ಜುನಗೆ ಅತಿಕಾಮಿಗೆ.
ಕೌರವನ ಹಠಯೋಗ
ಭಾರತದ ಬಲತ್ಯಾಗ-
ಕುರುಕ್ಷೇತ್ರ ಋಣಮುಕ್ತ ಧರ್ಮಕ್ಷೇತ್ರ!
ಗಂಭೀರ ಶಾಂತಿಯದು,
ಮೂಕವಾಗಿಹ ಸೇನೆ,
ರಥಗಾಲಿ ಸ್ತಬ್ಧತೆಯಿಂ ಗೀತಮಂತ್ರ!
ಕರ್ಮಯೋಗಿಯು ಕೃಷ್ಣ
ರಾಜಯೋಗಿಯು ಪಾರ್ಥ
‘ಕಿಂ ಕರ್ಮಾಕರ್ಮ’ಗಳ ವಾದಗಳಲಿ,
ಸತ್ವ ರಾಜಸ ತಮದ
ಹುಟ್ಟು ಸಾವಿನ ಬಲದ
ವಿಶ್ವರೂಪದ ಗೂಢ ರಹಸ್ಯಗಳನು.
ಚೊಕ್ಕ ಭಾಷೆಯ ಶ್ಲೋಕ,
ಪ್ರಶ್ನೆಗುತ್ತರ ಮಾತು-
ಏಸು ಸೊಗವೊ ಅವರ ಗುರುಶಿಷ್ಯತೆ!
ತುಂಬು ಕೂರ್ಮೆಯ ಮಾತು!
ಉಪನಿಷತ್ಕಲಶದ ಮಧುವು!
ವಿಶ್ವವ್ಯಾಪಿತ ವಾಣಿ-ಅಮರಗೀತೆ.
*****