ಒಬ್ಬ ಸಂಸಾರಿಕನಲ್ಲಿ ಒಂದು ವಿಚಿತ್ರ ವರ್ತನೆ ಇತ್ತು. ದಿನವೂ, ಎದ್ದ ಕೂಡಲೆ, ಮನಸ್ಸಿನಲ್ಲಿ ಪಿಸು ಗುಟ್ಟಿಕೊಂಡು, ಗೋಡೆಯ ಮೇಲೆ ಒಂದು ಪ್ರಶ್ನಾರ್ಥ ಚಿನ್ಹೆ ಹಾಕುತಿದ್ದ. ಸಂಜೆಯ ವೇಳೆಗೆ ಗೋಡೆ ಎದುರಿನ ಕಿಟಕಿಯಲ್ಲಿ ದಿಟ್ಟಿಸಿ, ದೂರದ ದಾರಿ, ದೂರದ ಬೆಟ್ಟ, ಆಗಸ, ಹರಿಯುವ ನದಿ, ತೇಲುವ ಮೋಡ, ಬಿರಿಯುವ ಹೂವು, ಹಾಡುವ ದುಂಬಿ, ಆಡುವ ಮಕ್ಕಳು, ಮತ್ತೇ ಏಕೆ ಇಡೀ ಜಗತ್ತಿನ ಚಲನವಲನವನ್ನು ಗಮನಿಸಿ, ಕೊನೆಗೆ ಮಲುಗುವ ಮುನ್ನ, ಪ್ರಶಾಂತ ಚಿತ್ತನಾಗಿ, ಆ ಪ್ರಶ್ನಾರ್ಥಕವನ್ನು ಅಳಸಿ, ಅರಿವಿನ ಚಿನ್ಹೆ ಹಾಕಿ ಸುಖ ನಿದ್ರೆ ಗೈಯುತ್ತಿದ್ದ.
ಇದನ್ನು ದಿನವೂ ನೋಡಿದ ಅವನ ಹೆಂಡತಿ, ಒಂದು ದಿನ ಇದರ ಗುಟ್ಟೇನು ಎಂದು ಕೇಳಿದಳು. ರಾತ್ರಿಯ ಕತ್ತಲೆ ಕೊಡುವ ಮನದ ಪ್ರಶ್ನೆ ಗೋಡೆಯಂತೆ ಎದ್ದು ನಿಲ್ಲುತ್ತದೆ. ಅದಕ್ಕೆ ಪ್ರಶ್ನೆ ಚಿನ್ಹೆ ಗೋಡೆಯ ಮೇಲೆ ಬರಿಯುವೆ. ಮತ್ತೆ ಬೆಳಗಿನ ಕಿರಣ ಹೊತ್ತು ತರುವ ಕಿಡಿಕಿಯಲ್ಲಿ ಸಂಜೆಯ ವೇಳೆಗೆ ನನಗೆ ಉತ್ತರ ಸಿಗುತ್ತದೆ. ಅದಕ್ಕೆ ಪ್ರಶ್ನೆ ಅಳಿಸಿ ಅರಿವಿನ ಚಿನ್ಹೆ ಹಾಕುತ್ತೇನೆ.” ಎಂದ.
ಇದೆಂತಹ ಸುಲಭಸೂತ್ರ ಎಂದು ಪತ್ನಿ ಪತಿಗೆ ನಮಸ್ಕರಿಸಿ ಅಭಿನಂದಿಸಿದಳು.
*****