ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು
ಯೋಚನೆಯ ಯೋಜನೆಯ ಕುರಿತು ಬೆರೆತು.
ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು
ನೊಗ ಹೊತ್ತ ರೀತಿಯಿದು ಜಗಕೆ ಹೊರತು.
ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ?
ಕೂಡಿಹವು ಚಿಂತೆ ಚಿಂತನಗಳಿಲ್ಲಿ
ಎಡಗೈಯ ಭಾರವನು ಬಲಗೈಯು ತಾಳಿರಲು
ಅಚ್ಚು ಮೂರ್ತಿಯು ಧ್ಯಾನ ಮುದ್ರೆಯಲ್ಲಿ :-
“ಭೂಗರ್‍ಭದಲ್ಲಿ ಕಲ್ಕುದಿಯುತೆಸರಾಗಿ
ಜಗದ ಜ್ವಾಲಾಮುಖಿಯ ಕಿಚ್ಚಿನುಸಿರಾಗಿ
ಹೊಮ್ಮಲಿದೆ, ಚಿಮ್ಮುತಿದೆ. ತಣಿವುದೆಂತು ಎಲಾ?
ಜನದ ತಾಪತ್ರಯಕೆ ಅಂತವಿಲ್ಲವಲಾ!”
*****