ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು
ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ
ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು
ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು
ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು
ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು
ಮಲ್ಲಿಗೆಯಾಗೆಂದು ಕಲ್ಲ ಕೆಳಗಪ್ಪಚ್ಚಿಗಿಕ್ಕಿದರು
ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡೆಂದು
ಮೀಸೆ ಹೊತ್ತ ಮುಖಕ್ಕೆ ಮಸಿ ಹಚ್ಚಿದರು
ವಿಷವಿಕ್ಕಿದವಗೆ ಷಡ್ರಸವನಿಕ್ಕೆಂದು ಮನೆಹಾಳತನವ ಬೋಧಿಸಿದರು
ಒದೆಸಿಕೊಂಡರೂ ಅಳುನುಂಗಿ ನಗು ಎಂದು
ಅಳುಬುರುಕುತನವ ಕಲಿಸಿದರು
ಉಗುಳಿದರೆ ಒರೆಸಿಕೊಂಡು ಹೊಗಳೆಂದು
ಬೊಗಳುಸನ್ನಿತನವ ಕಲಿಸಿದರು
ಕೋಡಿದ್ದರೂ ತಿವಿಯದೆ ತಲೆಹಾಕುವುದ ಕಲಿಸಿದರು
ಗಂಡ ಬೇರನ್ನು ಕೊಟ್ಟು ಕಸಿ ಮಾಡಿ
ನರಹಿಚುಕಿ ಜೀವಧಾತು ಹರಿಯದೆ ಬರಲಾಗಿಸಿ
ಕೆಂಡ ಕೆರಳದಂತೆ ತಣ್ಣೀರು ಹಾಕಿ
ಷಂಡತನವ ಕಲಿಸಿದರು ನಮ್ಮವರು
ತಲೆ ಪಂಜರಪಕ್ಷಿಗೆ ಗಿಳಿಯೋದಿಸಿ
ಮೂಗುಹಿಡಿಸಿ ಜಪ ಮಾಡ ಕಲಿಸಿದರು
ತೀರ್ಥಕುಡಿಸಿ ಮಬ್ಬೇರಿಸಿ ಗೂಡಿನಲ್ಲಿಹಪರವೆಂದು ಕೂಡಿಹಾಕಿ
ಬಯಲಾಗಸದ ತಿಳಿಹೊಳೆಯ ಗಿರಿನೀರ ತನಿವಣ್ಣ ರಸಗಳಿಗೆಲ್ಲ
ಎರವಾಗಿಸಿ ಬಂದೋಬಸ್ತಾಗಿ ಬಂಧಿಸಿದರೋ ನಾಗರಿಕ ನೆರಳಲ್ಲಿ
ಕತ್ತಿಕೋಲು ಕುಣಿದಾಡುವ ಗೊಂಡಾರಣ್ಯದಲ್ಲಿ
ಮುಳ್ಳುಗಳೆದ್ದೆದ್ದು ಕಣ್ಣು ಚುಚ್ಚುವಲ್ಲಿ
ಕೋರೆ ಹಲ್ಲುಗಳು ಮಸೆಯುವಲ್ಲಿ ಕೆನ್ನಾಲಿಗೆ ಚಾಚಿದಲ್ಲಿ
ಕಲ್ಲು ಗುಂಡು ಸದಾ ಸುರಿಯುವಲ್ಲಿ
ಬೋಳಾಗಿಸಿ ಬಿಳಿಚು ಮಲ್ಲಿಗೆಯಾಗಿಸಿ
ಬಾಳಾ ಬಾಳೆಂದು ಕಲಿಸಿಬಿಟ್ಟರು ನಮ್ಮವರು
*****