ಸುಗ್ಗಿ ಬರುತಿರೆ ನಲಿದು ಶುಕಪಿಕಗಳುಲಿಯುವವು
ತಮ್ಮರಸುವಾತಿನೊಳು – ತಂಗಾಳಿಯೂದುವವು.
ಇಳೆಯನೆಲ್ಲವ ತುಂಬ ಕೊನೆಗೊಮ್ಮೆ ಮೋದವದು
ಧ್ವನಿತವಾಗಿರೆ ಜೀವಕೋಟಿಗಳು ನಲಿಯುವವು
ಎಳೆವಾತಿನಲಿ ನುಡಿದು ಹಸುಮಗಗಳೊಲಿಯುವವು
ಅವರ ತೊದಲ್ನುಡಿಗಳಲಿ ವಳೆವಾತ ಕಾಣುವದು,
ಮತ್ತೆ ಪರಮಾರ್‍ಥವನು, ತಾಯಂದಿರ ಪ್ರಾಣವದು!
ಇಂತು ಹಿರಿಯೊಸಗೆಯಲಿ ಕರುಳೆಲ್ಲ ಬಲಿಯುವವು
ಕವಿಯ ನಾಲ್ವಾತಿನಲಿ ಸಹ ನಮಗೆ ಗೋಚರಿಪ
ಅರ್‍ಥವಿದೆಯೆಂದಲ್ಲ, ಅರ್‍ಥವಿಲ್ಲದೆಯಿಲ್ಲ!
ಪಿಕದಂತೆ ಹಸುಗೂಸಿನಂತೆ ನುಡಿವನು ಕವಿಯು.
ಅದರರ್‍ಥವೆಲ್ಲವನು ಬಲ್ಲವನೆ ತಾ ಬಲ್ಲ!
ತಿಳಿಯಲಿಕೆ, ಕವಿಯಂತೆ ತಾಯಿಯಂತಾಚರಿಪ
ಸರಲ ಹೃದಯವು ಬೇಕು, ಆಗ ಕಾವ್ಯದ ಸವಿಯು!
*****