ಬೋಳಗುಮ್ಮಟವಿದುವೆ ಮುಗಿಲು, ಬುದ್ಧಿಗೆ ದಿಗಿಲು.
ಕೆಳಗೆ ಬಿದ್ದರೆ ಮಣ್ಣಿನಲಿ ಮಣ್ಣು, ಬೇರಿಲ್ಲ.
ಧ್ವನಿಗಳಲೆಗಳು ದಿಗಂತಕೆ ಹಬ್ಬಿದಾ ಮಿಗಿಲು
ಇಲ್ಲಿದೆ ಅಸಂಖ್ಯಾತ ನಕ್ಷತ್ರವಿಲ್ಲಿಲ್ಲ-
ವೇನು? ನಾದದನಂತ ಗಡಚಿಕ್ಕಿಸದೆ ನಿಂತು
ಕಿವಿಯ,- ಎಣಿಕೆಯ ಮೀರಿ ದನಿಯಲ್ಲಿ ತಿಂತಿಣಿಸೆ?
ಸಪ್ತಗ್ರಹಗಳ ತೆರದಿ ಮಾರ್‍ನುಡಿಯದೋ ಬಂತು!
ತಿರುವಿಟ್ಟು ಮುಗಿಲ ಕೊಪ್ಪರಿಗೆ,- ಗುಮ್ಮಟವೆಣಿಸೆ!
ಬೋಳಗುಮ್ಮಟವಿದನು ಬಿಟ್ಟು ಬಾ ಬಯಲಲ್ಲಿ
ಹೊರಗಿಲ್ಲಿ ಗಾಳಿ ಕೊರಲನ್ನೆ ಕದ್ದೊಯ್ಯುವುದು
ಗೊಮ್ಮಟೇಶ್ವರನಂತೆ ಹಿಗ್ಗಿ ಜೀವವದಿಲ್ಲಿ
ಬೆಳೆದು ನಕ್ಷತ್ರ ಮಂಡಲವನಾರಯ್ಯುವುದು
ಸತ್ತವರ ಮೇಲಿಟ್ಟ ಗುಮ್ಮಟವು ಬರಿಮಣ್ಣು.
ಜೀವನಿಗೆ ಮುಡುಪಿಟ್ಟ ನಭಕೆ ತೆರೆವುದು ಕಣ್ಣು.
*****