ನೋಟವನು ರಂಜಿಸಳು. ಬಗೆಬಗೆಯ ಹೂವಿಲ್ಲ
ಬಣ್ಣದಾಟವ ಹೂಡಲೆನೆ. ಹಚ್ಚಹಸಿರಿರುವ
ಸೀರೆಕುಪ್ಪಸ ತೊಟ್ಟು ಮಂದಗತಿಯಿಂದಿರುವ
ಪಲ್ಲವಾಂಗಿಯು ಇವಳು. ಭೃಂಗ-ಕೇಲಿಯದಿಲ್ಲ
ಇವಳ ಬಳಿಯಲಿ ಇವಳ ಹುಬ್ಬು ತಿಳಿಯದು ಬಿಲ್ಲ
ಮಣಿತವನು, ಕಾಮಕಸ್ತೂರಿಯಾ ತೆನೆಗಿರುವ
ಕಂಪಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಬೆಳೆದಿರುವ
ಹುಡಿಗೆಯಾಗಿಹಳಿವಳು ನಾಗರಿಕತೆಯೆ ಇಲ್ಲ!
ಇರಲೇನು? ಮನವಂದು ತುಳಸಿಯನ್ನು ವರಿಸಿದನು
ವಿಷ್ಣು ಸಾಕ್ಷಾತ್ ತಾನು! ಧಾರ್‍ಮಿಕರು ನುಗ್ಗಿದರು
ತಾಯಡಿಗೆ ತಲೆಯಿಡಲು, ಸನ್ನಿಧಿಯ ಹರಸಿದನು,-
ಒಸಗೆಯಿವಳಿಂದೆಂದು ವಿಜ್ಞಾನಿ ಹಿಗ್ಗಿದನು.
ಸ್ತ್ರೀಗಣದ ದೇವಿಯನು ನುಡಿಯುವರೆ ಮೂದಲಿಸಿ?
ಅಹುದೆ ತುಳಸೀದೇವಿ ಬರಿಯ ಹಿತ್ತಲ ತುಳಸಿ?
*****