ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು “ಸತ್ಯದ ವಿಳಾಸ ನಿಮಗೆ ಗೊತ್ತೇ?” ಎಂದ. “ನನಗೆ ಹಲವು ವಿಳಾಸಗಳು ಗೊತ್ತು, ಅದನ್ನು ಬೇಕಾದರೆ ಹೇಳುತ್ತೇನೆ. ಅದನ್ನು ಹಿಡಿದು ನೀ ಸತ್ಯವನ್ನು ಹುಡುಕು” ಎಂದರು ಗುರುಗಳು.
“ಹೇಳಿ ಗುರುಗಳೇ’ ಎಂದ ಶಿಷ್ಯ.
“ಎಲ್ಲಾ ಪರ್‍ವತಗಳನ್ನು ಹತ್ತುತ್ತ ಹೋಗು ಕೊನೆಗೆ ಒಂದು ಪರ್ವತದ ಶಿಖರದಲ್ಲಿ ನಕ್ಷತ್ರದ ಬೆಳಕಿನಲ್ಲಿ ಸತ್ಯದ ವಿಳಾಸ ಸಿಗುತ್ತದೆ.” ಎಂದರು ಗುರುಗಳು.
“ಇದು ಬಹಳ ಕಷ್ಟ ಗುರುಗಳೆ” ಎಂದ ಶಿಷ್ಯ.
“ಹಾಗಾದರೆ ಒಂದು ಕೆಲಸ ಮಾಡು. ಸಪ್ತ ಸಮುದ್ರವನ್ನು ದಾಟುವಾಗ ಬಹಳ ಜಾಗರೂಕತೆ ಇಂದ ಕಣ್ತೆರದು ನೋಡುತ್ತಿರು. ಅಲೆ ಅಲೆಗಳ ಲಿಪಿ ಕೊರತದಲ್ಲಿ ಸತ್ಯದ ಸ್ಪಷ್ಟ ವಿಳಾಸ ಸಿಗುತ್ತದೆ” ಎಂದರು ಗುರುಗಳು. “ಗುರುಗಳೇ! ಇದು ಬಹಳ ಕಷ್ಟ ಸಾಧ್ಯ” ಎಂದ ಶಿಷ್ಯ.
“ಹೋಗಲಿ ಬಿಡಪ್ಪಾ. ಒಂದು ಕೆಲಸ ಮಾಡು, ಹೂವು ಬಿರಿದ ಎಡೆಯಲೆಲ್ಲ ಹೋಗುವ ದುಂಬಿಯ ಹಿಂದೆ ನೀನು ಓಡುತ್ತಿರು. ದುಂಬಿ ಝೇಂಕಾರದಲ್ಲಿ ಸತ್ಯದ ವಿಳಾಸ ಹೇಳುತ್ತಿರುತ್ತದೆ. ಅದನ್ನು ಅರ್‍ಥವಿಸಿ ತಿಳಿದುಕೊ.”
“ಗುರುಗಳೇ! ಹೂವಿನಿಂದ ಹೂವಿಗೆ ಹಾರುವ ದುಂಬಿಯ ಹಿಂದೆ ಹಾರಾಡಲು ಸಾಧ್ಯವಿಲ್ಲ. ಏನಾದರು ಬೇರೆ ಸುಲಭೋಪಾಯವಿಲ್ಲವೆ, ಗುರುಗಳೇ?”. “ಸತ್ಯದ ವಿಳಾಸ
ಯಾವುದಾದರೂ ಓಣೀಲಿ ಸಿಕ್ಕೊಲ್ಲವೇ?” ಎಂದ.
ಅದಕ್ಕೆ ಗುರುಗಳೆಂದರು ನನಗೆ ಗೊತ್ತಿರುವ ಓಣಿ ಆಕಾಶದಲ್ಲಿ ಇದೆ. ಅದಕ್ಕೆ ನೀನು ಏಣಿ ಹತ್ತಿ ಹೋಗಬೇಕು. ಆಗಸದ ನೀಲಿ ಓಣಿಯ ಗೋಡೆಯ ಮೇಲೆ ಸತ್ಯದ ವಿಳಾಸ ಇರುತ್ತದೆ. ಆದರೆ ಮೋಡ ಮುಚ್ಚಿರುತ್ತದೆ. ಅದು ಮಳೆ ಬರೋತನಕ ಕಾಯಬೇಕು. ಮಿಂಚು ಬಂದಾಗ ಓದಿಕೋಬೇಕು” ಎಂದರು ಗುರುಗಳು.
“ಗುರುಗಳೇ! ನನಗೆ ಸತ್ಯದ ವಿಳಾಸವು ಬೇಡ, ನಿತ್ಯದ ವಿಳಾಸವೇ ಸಾಕು” ಎಂದು ನಮಸ್ಕರಿಸಿ ಶಿಷ್ಯ ಕಾಲು ಕಿತ್ತಿದ.
*****