ಕಣ್ಣ ಕಾಣ್ಕೆಯ ಮೀರಿ, ಕಣ್ಣ ಕಟ್ಟಿದ ರೂಹೆ!
ಬಣ್ಣನೆಯ ಬಣ್ಣಕೂ ಸಿಗದೆ ನೀನು;
ಹುಟ್ಟುಕಟ್ಟನು ಹರಿದು, ಹಾರುತಿರುವೀ ಊಹೆ,
ಬರೆಯಲಿಕೆ ನಿನ್ನನ್ನೆ ಹವಣಿಸುವದೇನು?
ಲಹರಿಗೂ ತರಲ, ನೀ ನೆರಳಿಗೂ ವಿರಲ, ಸುಳಿ-
ಯೆಲರಿಗೂ ಚಂಚಲನು ಇರುವೆಯಂತೆ-
ಬರುವಾಗ ಬರಲಿ ಫಲವೆಂದು ತಾಳ್ಮೆಯ ತಾಳಿ
ಕಾಡಹೂವಿನ ತೆರದಿ, ಕಾದು ನಿಂತೆ.
ನವಿರನವಿಲಿಲ್ಲಿ ನಿಮಿನಿಮಿರಿ ಕುಣಿಯುತಿದೆ
ಕಂಬನಿಯ ಜಡಿಮಳೆಯು ಜಿನುಗಿ ತಣಿಯುತಿದೆ
ಹೊಚ್ಚ ಹೊಸ ಆಸೆಗಳು ಚಿಗಿತು ನಗೆ ನನೆತು
ಫಲವೇನೆ ಬರಲಿ, ಅಣಿಯಾಗಿರುವದಿನಿತು.
*****