ಪರದೆಯ ಹಿಂದೆ

ದರ್‍ಗಾದ ಎರಡು ಘನ ಗಂಭೀರ
ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು
ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು
ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ
ಬದುಕನು ಸಾರಿ ಸಾರಿ ಹೇಳುತ್ತಿದ್ದವು.
ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ
ಅಮ್ಮಿ ಕಟ್ಟುತ್ತಿದ್ದಳು ಕಸೂತಿ ಹಾಕಿದ ಚಿತ್ತಾರದ
ರಂಗುರಂಗಿನ ಬಾಗಿಲ ಪರದೆಗಳು.
ಅದಕ್ಕೆ ಇಳಿಬಿಟ್ಟ ಬಣ್ಣ ಬಣ್ಣದ ಕುಚ್ಚುಗಳು
ನಾನೂ ಕ್ರೋಶಾದಲಿ ಹೆಣೆಯುವಾಸೆ
ಬಣ್ಣ ಬಣ್ಣದ ದಾರಗಳ ಚಿತ್ತಾಕರ್‍ಷಕ ಪರದೆ
ನನಗೇನು ಗೊತ್ತಿತ್ತು ಮುಂದೊಂದು ದಿನ
ಈ ಪರದೆಯೇ ನನ್ನ ಮುಖಕ್ಕೆ
ಮರೆ ಮಾಡುವ ನಖಾಬ್ ಆಗುತ್ತದೆ ಎಂದು?

ಮೊದಲ ಬಾರಿ ಈ ಹಿಜಾಬು ಧರಿಸಿದಾಗ
ಶಕೆಯಿಂದ ಸಿಡಿಮಿಡಿಗೊಂಡು ತಲೆ ಸುತ್ತು ಬಂದು
ನನಗರಿವಿಲ್ಲದಂತೆಯೇ ಕಿತ್ತು ಬಿಸಾಕಿದ್ದೆ.
ಬುದ್ಧಿ ಹೇಳಿದ ಬಂಧು ಬಾಂಧವರು
ಇದು ನಮ್ಮ ಧರ್‍ಮದ ಪವಿತ್ರ ಉಡುಪು
ಬಿಡುವುದು ಅಲ್ಲಾಹನಿಗೆ ಸುತಾರಾಂ ಇಷ್ಟವಿಲ್ಲ.
ಮತ್ತೆ ಪರದೆಯ ಹಿಂದೆ ದೂಡಿದರು.
ಬುರ್‍ಖಾದ ಜಾಳಿಗೆ ನನ್ನ ಕಣ್ಣನ್ನು ಮುಚ್ಚಿದಾಗ
ಇಡೀ ಲೋಕವೇ ಕಪ್ಪಾಗಿ ಕಂಡಿತ್ತು.
ಸಾಕಿದ ಬೆಕ್ಕು, ನಾಯಿಗಳಿಗೆ ನೆರೆಹೊರೆಯವರಿಗೆ,
ಶಾಲೆಯ ಸೀತೆಗೂ ನಾನು ಅಪರಿಚಿತಳಾಗಿದ್ದೆ.
ಆಗ ಸಹಚರರೆಲ್ಲ ದೂರವಾದಂತೆ ಭಾಸವಾಗಿತ್ತು.
ನನ್ನ ಜಗತ್ತಿನಲಿ ಕತ್ತಲಾವರಿಸಿದಂತಾಗಿತ್ತು.
ಪರದೆ ನನ್ನ ಸುತ್ತಲೂ ಬೇಲಿ ತನ್ನಷ್ಟಕ್ಕೇ ನಿರ್‍ಮಿಸಿತ್ತು.

ರಕ್ಷಣೆಯ ಕ್ರೂರ ಪಹರೆಯ ಗೋಡೆ
ಬೇಸಿಗೆ ಬಿಸಿಲಿಗೆ ಬೆವರಿನ ತೊಪ್ಪೆ,
ಯಮಯಾತನೆಗೆ ಉಸಿರುಗಟ್ಟುವ ಹಿಂಸೆ.
ಪಹರೆ ಗೋಡೆಗಳ ಮಧ್ಯೆ ಚಹರೆ ಮುಸುಕಿನಲಿ
ಪರದೆ ಹೊದ್ದು ಮಾಂಸದ ಮುದ್ದೆಯಾಗಿದ್ದೆ.
ಜೀವಪೋಷಕ ಧಾತುವಿನ ಸತುವು ನಾನು
ಪೋಷಿಸಬಲ್ಲೆ ಲೋಕವನ್ನು ಸಾಯಿಸಲಾರೆ.
ಜೀವನದಿಯಾಗಿ ಹರಿದು ತಪ್ತ ಆತ್ಮಗಳಿಗೆ
ತಂಪನ್ನೆರೆದು ಅಮೃತ ಸಿಂಚನಗೈದಳು
ಶತಮಾನಗಳಿಂದ ಕಾದು ಕೆಂಪಾದ ಧರೆಗೆ
ಮಳೆಯ ಸಿಂಚನವಾಗಿ ತಣ್ಣಗಾಗಿಸಿದವಳು.
ನನಗೆ ಗೊತ್ತಿದೆ ಬದುಕುವುದು ಹೇಗೆಂದು
ನಿರ್‍ಬಂಧಗಳ ಸರಹದ್ದು ಮೀರುವುದು ಹೇಗೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರ್‍ಷಾಲಿ ಮಲ್ಹೋತ್ರಾ
Next post ಬಡ ಸೂಳೆಗೆ ಅವಳ ಗೆಳತಿ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…