ಅಂತರಿಕ್ಷಕ ತನ್ನ ಗುರಿಯಿಟ್ಟು ಸಾಗಿಹುದು
ಗರುಡ ಪಕ್ಷಿಯು ಅದರ ಗಾನವಿಕಲಿತ ಹೃದಯ
ನಾಗಭೀಷಣವಿಹುದು, ತಾಳದೆಯೆ ಕೂಗಿಹುದು
ಸರ್‍ಪದಂಶವು ಹೆಚ್ಚಿ. ಗರುಡವಾಹನನಭಯ-
ವೆಲ್ಲಿ ಕೇಳಿಸದೀಗ ಇಂತು ಪೀಯೂಷಮಯ-
ವಾದ ನಿರ್‍ಭಯ ಪಯಣ ನಂಜೇರಿದಂತಿರಲು
ಮಂಜುಮುಸುಕಿದೆ ಮುಗಿಲ ಮೋರೆಯನು ವಿಷಸಮಯ-
ವೆನೆ ಅದರ ಮೈ ಅದಕೆ ಭಾರವಾಗಿದೆ ಹೊರಲು
ಇಂತು ವಿಷದುಣಿಸದಕೆ ಬಾಯ್ತನಕ ಬಂದಿರಲು
ಮುಗಿಲೆದೆಗೆ ಮನವಿಟ್ಟು ರೆಕ್ಕೆ ಬಡಿವುದು ಹಕ್ಕಿ !
ರಕ್ತಧಾರೆಗೆ ಮೈಯ ಬಣ್ಣ ಕಳೆ ಕುಂದಿರಲು
ಒಮ್ಮನದಿ ಸಾಗುತಿದೆ ಪವನ ವೀಧಿಯ ಮಿಕ್ಕಿ.
ಸಾವಿನುಣಿಸುಣಿಸಲೆಂದಿದೆಯೊ ಹಾವಿನ ಸೃಷ್ಟಿ?
ಏನೊ ತೋರಿಸಲೆಂದೊ, – ಗರುಡ ಪಕ್ಷಿಯ ದೃಷ್ಟಿ?
*****