ಬಾಗಿಲು ಬಡೀತಾರೆ ಯಾರಿರಬಹುದು?
ಅದೂ ಇಂಥ ಹೊತ್ತು ಬಡ ಬಡ ಸದ್ದು
ಯಾರಿರಬಹುದು?
ಬಾಗಿಲ ತೆರೆಯೋ ಧೈರ್‍ಯವಿಲ್ಲ
ಯಾರಿರಬಹುದು-ಪೊಲೀಸರಿದ್ದಾರು
ಪಾರ್‍ಟಿಯವರಿದ್ದಾರು
ಎಡಪಕ್ಷ ಬಲಪಕ್ಷ ಜಾಸೂಸಿನವರು
ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ
ಬಂದವನೊಬ್ಬನ ನಾಲಿಗೆ ತುಂಡು
ಇನ್ನೊಬ್ಬನ ಕೈತುಂಡು ಮತ್ತೊಬ್ಬನ ಕಾಲ್ತುಂಡು
ಹಲವರಿಗೆ ಕಣ್ಣುಗಳೆ ಇಲ್ಲ
ಅಂಗಾಂಗ ಕತ್ತರಿಸಿ ಬಿಸಾಕುತಾರಂತೆ
ಇಲ್ಲ ತೆರೆಯೋಲ್ಲ ನಾ ಬಾಗ್ಲ ತೆರೆಯೋಲ್ಲ
ದೀಪ ಹಚ್ಚಲ್ಲ ಮಾತಾಡ್ದೆ ಇರ್‍ತೀನಿ
ಸತ್ತಂತೆ ಇರ್‍ತೀನಿ ಮೌನವಾಗಿ
ಹಗಲಾದ್ರೂ ಹೀಗೇನೆ ಇರುಳಾದ್ರೂ ಹೀಗೇನೆ
ಇಲಿಯಂತೆ ಇರಬೇಕು ಯಾರಿಗೂ ಕಾಣಿಸದೆ
ಹೊದ್ದು ಮಲಕೊಳ್ತೀನಿ ಸದ್ದು ಮಾಡದೆ ನಾನು
ಆದ್ರೂ ಬಿಡವಲ್ಲರು ಬಾಗಿಲ ಬಡಿತ
ಬಡೀತಾನೇ ಇದ್ದಾರೆ ಬಡ ಬಡ ಧಡ ಬಡ
ಕೈಲಿ ಬಡೀತಾರೆ ದೊಣ್ಣೆಯಲಿ ಬಡೀತಾರೆ
ಮೊನ್ನೆಯೂ ಹೀಗಿತ್ತು ನಿನ್ನೆಯೂ ಹೀಗಿತ್ತು
ಎಷ್ಟೊತ್ತಿಗೋ ಬಂದು ಬಡೀತಾನೆ ಇರ್‍ತಾರೆ
ನಾಳೇನೂ ಬಡೀತಾರೆ ನಾಡಿದ್ದು ಬಡೀತಾರೆ
ಒಂದಲ್ಲ ಒಂದಿನ ಕೊಂಡೋಗದು ಖಂಡಿತ
ನಾಳೆ ಬರೋದು ಇಂದೇ ಬರ್‍ಲಿ
ತೆರೆದೇ ಬಿಡ್ತೀನಿ ಆಗೋದು ಆಗ್ಲಿ
ನರಕಕ್ಕಿಂತ್ಲು ಅದರ ಭಯವೇ ನರಕಾಂತಾರೆ
ನಾ ಕಾಣದ ನರಕ ಇನ್ನೇನಿದೆ?
ಏನ್ ಬೇಕೋ ಅದು ಮಾಡ್ಳಿ ಏನಾದ್ರೂ ಕಿತ್ಕಳ್ಲಿ
ಕಾಯ ನನ್ದಲ್ಲ ಮನಸು ನನ್ದಲ್ಲ
ಇಂಥ ಭಯಗ್ರಸ್ತ ಊರ್‍ನಲ್ಲಿ
ನಿಲ್ಸಯ್ಯ ನಿನ್ನ ಬಾಗಿಲ ಬಡಿತ
ನಾನಿದೊ ಬಂದೆ ಬಾಗಿಲ ತೆರೆದೆ
ಖಂಡವಿದ ಕೋ ಮಾಂಸವಿದ ಕೊ
ಚಂಡ ವ್ಯಾಘ್ರನೆ ನೀನಿದೆಲ್ಲವನುಂಡು ಸುಖದಿಂದಿರು
ನಾಳೆ ಇನ್ನೊಂದ್ಮನೆ ಹೋಗಿ ನೋಡ್ಕೊ
*****