ರಾಗ ನವರಸಕನ್ನಡ ರೂಪಕತಾಳ
(‘ನಿನುವಿನಾ ನಾಮದೇಂದು’ ಎಂಬ ತ್ಯಾಗರಾಜ ಕೃತಿಯಂತೆ)
ಜಯಜಯಾ ನಮ್ಮೊಡೆಯಾ!
ಜಗದೊಡೆಯಾ ಜಯಜಯಾ! ||ಪಲ್ಲ||
ಜಯಜಯ ಭಾರತದಜೊಡೆಯಾ!
ಬಡವರೊಡೆಯ ಜಯಜಯಾ! ||ಅನು||
ಏನು ಚೆಲುವೊ ದೇವ ನಿನ್ನೀ
ಭಾರತಮೂರ್ತಿ!
ತೆರೆಯ ಗೆಜ್ಜೆ, ಹಸುರ ಸೀರೆ,
ನದಿ ಸರ, ಹಿಮ ಮುಡಿಯ ಸ್ಫೂರ್ತಿ! ||೧||
ತನುಮನದೀ ಸರ್ವಂಸಹೆ
ಯಶಾಂತಿ ನೋಡ!
ಪರತಂತ್ರರ ಗೋಳ ಕೇಳ-
ಸರ್ವತ್ರ ಸಿಡಿಲ್ವ ಮೋಡ! ||೨||
ಮೂಡುವನೆಂದೀ ಭಾರತ
ಭಾಗ್ಯ ಭಾಸ್ಕರಂ?
ಮರಳುವುದೆಂದೆಮಗಗಲಿದ
ಸ್ವತಂತ್ರಮತಿಯಶಸ್ಕರಂ? ||೩||
ಪೂರ್ವಾಪರ ಪುಣ್ಯಸಂಗ
ಮಮೀ ಭಾರತಂ
ಕೂಗುವುದಿದೊ ನಿನ್ನನು ನೀ
ನಿನ್ನೆಂದಿಗೆ ಜಾಗರಿತಂ? ||೪||
ನಮಗೀ ಪರತಂತ್ರತೆ ಹೊಲೆ
ಗಲಸಿರಲಿಂತು,
ನಿನ್ನಯ ಸಂತಾನರೆಂತು?
ಕಾದಪೆ ಮನುಜತೆಯನೆಂತು? ||೫||
ನಿನ್ನ ಭಾರತಕೆ ಸ್ವರಾಜ್ಯ
ತಾರದ ಮುನ್ನ,
ನಂಬಲೆಂತು ದೀನಜನಾ
ನನ್ಯಶರಣನೆಂದು ನಿನ್ನ? ||೬||
ಎಂತೀ ಭಾರತಮನಂತೆ
ನಮ್ಮನುರಕ್ತಿ
ಜಗವೆಲ್ಲವನಕ್ಕರಿಪಂ
ತೀಯೆಮಗಸ್ವಾರ್ಥಶಕ್ತಿ! ||೭||
ಧರೆಯೊಳೆಲ್ಲರನರವರ ಸ್ವ
ರಾಜ್ಯವ ನೀಡ-
ಸಮ ಸೌದರ್ಯದೊಳೆ ನೆಲಸಿ
ಮುಗಿಸಾಳೊಡೆಯೆಂಬ ಸೇಡ! ||೮||
ಭಾರತದಲಿ ಸರ್ವಧರ್ಮ
ಮೊಂದಲಿ ಸದನಂ,
ಮಾಣಿಸಲೀಕೆಯ ಸ್ವಸ್ತಿ
ಧ್ವಜಮಧರ್ಮದೊಳಕದನಂ! ||೯||
ನಿನ್ನೊಳಲ್ಲದೆರೆಯಲೆ ನ
ಮ್ಮಯ ಬಿಡುಗಡೆಯಾ?
ನೀನದನೆಮ್ಮಿಂದ ದುಡಿಸ
ದರ್ಹರೆ ನಾವದಕೊಡೆಯಾ ||೧೦||
*****