[Theodor Korner ಎ೦ಬ ಜರ್ಮನ್ ಕವಿಯ `Gebet wahrend der
Schlacht’ (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು]
ಕರೆವೆ ನಾ ನಿನ್ನನೊಡೆಯಾ!
ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು
ನೂರ್ಮೆ ಮಾರ್ಮೊರಸೆ ಕಾರ್ಮೊಳಗನುರ್ವರೆಯಿಂ,
ಕಿಸುಬಾಯನಾಕಳಿಸಿ ದೆಸೆಗಳಂ ಬಾಗುಳಿಸಿ,
ಮಿಂಚೆರಂಚಿ ಪಳಂಚಿ ಮುಂಚೆ ದಳ್ಳುರಿಯಿಂ-
ಪ್ರೋಚ್ಚಂಡ ತಾಂಡವಮೊ ನಿನ್ನದೊಡೆಯಾ?
ನಿನಗೆ ಮಣಿಮಣಿವೆನೊಡೆಯಾ| ೭
ನಿನಗೆ ಮುಣಿಮಣಿನೆನೊಡೆಯಾ!
ಕಾಳೆಗಳ ಭೋಂಕಾರ ಢೋಲ್ಗಳ ಧಳಂಕಾರ-
ಹೊಂಗುತಿದೆ ಮಂಗಲಾಮಂಗಲಮೊ ತೂರ್ಯಂ!
ಇದೊ ನಿಶಾಂತ ತುತೂರಿಯೂದಲಿಂತೆದೆ ತೂರಿ-
‘ಪರಧುರ್ಯರಿತಿಕಾರ್ಯಮನಿವಾರ್ಯ ಶೌರ್ಯಂ!’
ಜೀವಂತ ಕೋವಿಯಾನೇವೆನೊಡೆಯಾ!
ಕಾಣಿಸಾಣತಿಯನೊಡೆಯಾ! ೧೪
ಕಾಣಿಸಾಣತಿಯನೊಡೆಯಾ!
ನಮ್ಮ ಬಾಯಿಯ ತುತ್ತ ಕಸಿವ ಹಸಿವೆಯ ಕುತ್ತ
ಮೆಂತಂತು ಸಂಗ್ರಾಮ ಸಂಭ್ರಮಾಹ್ವಾನಂ,
ಗೃಹಲಕ್ಷ್ಮಿ ಕೊರಳಾಂತು ಸುರಿದ ನೀರವಮೆಂತು
ಅಂತೀ ರಣಾಂಗಣ ಘನಾಘನ ಧ್ವಾನಂ-
ನಿನ್ನ ನಿಶ್ಶಂಕ ಸಂಕಲ್ಪಮೊಡೆಯಾ!
ನೀಡ ರಣದೀಕ್ಷೆಯೊಡೆಯಾ! ೨೧
ನೀಡ ರಣದೀಕ್ಷೆಯೊಡೆಯಾ!
ವಶಗೆಯ್ಯಲಿಳೆಯೆಲ್ಲ ಮಸಗಿ ಕಾದುವೆನಲ್ಲ-
ಸ್ವಾರಾಜ್ಯವರ್ಜ್ಯಮನ್ಯರ ರಾಜ್ಯಮೇಕೆ?
ತಾಯ ಸೆರೆಯಂ ಸವರಲೆಂದೆ ವೆರಮೀ ಬವರ-
ದಬ್ಬಾಳಿಕೆಯ ಮೆಟ್ಟಡಿಯ ತಬ್ಬಬೇಕೆ?
ವಿಸ್ಫಾರಿಸೆನ್ನೆದೆಯ ಧಮನಿಯೊಡೆಯಾ!
ತಾರ ಸಮರಾಜ್ಞೆಯೊಡೆಯಾ! ೨೮
ತಾರ ಸಮರಾಜ್ಞೆಯೊಡೆಯಾ!
ಅನ್ಯದೇಶಾಕ್ರಾಂತಿ ಸ್ವಪರನಾಶಭ್ರಾಂತಿ
ಯಿಂ ದ್ವಿಪಕ್ಷದ ರಕ್ಷೆಗೀಕ್ಷಿಸದೆ ಬಗೆಯಂ,
ರಣಮೊಂದೆ ಶರಣೆಂದೆ ಬಂದೆ ಮುಂದೆದೆಯಿಂದೆ
ತೊಳೆದು ಕಂಬನಿಯೊಳೆದುರಾಳಿಗಳ ಪಗೆಯಂ-
ಸನ್ನದ್ಧನಾಂ ಧರ್ಮಯುದ್ಧಕೊಡೆಯಾ!
ಬೆಂಬಲಿಸು ನನ್ನನೊಡೆಯಾ! ೩೫
ಬೆಂಬಲಿಸು ನನ್ನನೊಡೆಯಾ!
ಎನ್ನೆವರೆಗೀ ಪ್ರಾಣಮೆನ್ನೆವರೆಗೆ ಕೃಪಾಣ
ಮನ್ನೆಗಂ ಕಾದೆಂದು ಬೀಳ್ಕೊಡಿಂದೆನ್ನ!
ನೀನೆ ವಿಜಯಧ್ವಜಂ! ನೀನೆ ಹೃದಯಸ್ರಜಂ!
ನೀನೆ ವಿಷ್ವಕ್ಸೇನ ಸೇನಾನಿಯೆನ್ನ!
ಸೋಲಗೆಲವೆನ್ನದೇಂ? ನಿನ್ನದೊಡೆಯಾ!
ಕಾದವುದೆ ನನ್ನದೊಡೆಯಾ! ೪೨
ಕಾದುವುದೆ ನನ್ನದೊಡೆಯಾ!
ಸರ್ವಭಾರಮನಿಂದು ನಿನಗಿರಿಸಿ ತರಿಸಂದು
ನಿನ್ನ ಹೆಸರೆತ್ತುತೆತ್ತುವೆ ಕತ್ತಿಯನ್ನ!
ನಿನ್ನಿಚ್ಛೆ ಎಂತೆಂತು ನಡೆಸೆನ್ನನಂತಂತು-
ಜಯಕೆ ಮುನ್ನಡೆಯಿಸಥವಾ ಮರಣಕೆನ್ನ!
ಮರಣಮೆ ವರಂ ಪರಾಶ್ರಯದಿನೊಡೆಯಾ!
ಮುನ್ನಡೆಯಿಸೆನ್ನನೊಡೆಯಾ! ೪೯
ಮುನ್ನಡೆಯಿಸೆನ್ನನೊಡೆಯಾ!
ಇಂದು ಜೀವಮನೆನ್ನ ತೆತ್ತೆ ಕೆಯ್ಗಿದೊ ನಿನ್ನ-
ನೀನಿದಂ ನನಗಿತ್ತೆ, ನೀನೆ ಕೊಳಬಲ್ಲೆ!
ಹರಸೆನ್ನನುಳಿಯೆಂದೊ, ಹರಸೆನ್ನನಳಿಯೆಂದೊ-
ಅಳುವ ತಾಯಿಳೆಯೊಳೆನ್ನಳಿವುಳಿವನೊಲ್ಲೆ!
ಇದೆ ಜಲಾಂಜಲಿ ಜೀವಿತಾಶೆಗೊಡೆಯಾ!
ನಿನಗೆನ್ನನಿತ್ತೆನೊಡೆಯಾ! ೫೬
ನಿನಗೆನ್ನನಿತ್ತೆನೊಡೆಯಾ!
ಸಿಡಿಲ ಸನ್ನೆಯಿನೆನ್ನನಂತಕಂ ಕರೆವನ್ನ,
ಕೆಯ್ಮುಗಿಯುವಲಿ ನಿನಗೆ ಕಣ್ಮುಗಿಯುವೆನ್ನ
ಜೀವನಂ ಬಸಿವನ್ನ ಭಾವನಂ ಕುಸಿವನ್ನ,
ಮೂರ್ಛೆಯಿಂ ನಿನ್ನ ಹೆಸರುಚ್ಚರಿಸದನ್ನ,
ಸ್ವಾಗತಮೆ ತವ ಪದಾಗತನಿಗೊಡೆಯಾ?
ಇದೆ ಕೊನೆಯ ಮನವಿಯೊಡೆಯಾ! ೬೩
ಇದೆ ಕೊನೆಯ ಮನವಿಯೊಡೆಯಾ!
ತಾಯ ಸಂಕಲೆೆ ಕಡಿಯೆ ಸಂಗಳಿಸದಾಂ ಮಡಿಯೆ,
ನೀನದಂ ತವಕದಿಂ ತರಿವೆಂದು ಬಲ್ಲೆ!
ಮಡಿಯೆ ಜನಿತ ವ್ಯಕ್ತಿ, ಮಡಿವುದೇನನುರಕ್ತಿ?—
ತಾಯೊಸಗೆ ತರ್ವಿನಂ ಸ್ವರ್ಗಸುಖಮೊಲ್ಲೆ!
ಭವಭವನಮನೆನಗಿಲ್ಲಿ ಸಲ್ಲಿಸೊಡೆಯಾ!
ಕರೆವೆ ನಾ ನಿನ್ನನೊಡೆಯಾ!
*****