ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಶ್ರೀ ಕರ್ಣಾಟಕರಾಜ್ಯ ವಾಸ್ತುಪತಿಯಂ, ನಾಸ್ತಿಕ್ಯ ರುಗ್ವೈದ್ಯನಂ,
ವೇದಾಂತಾದಿ ಗತಾಧ್ವನಂ, ನಿಗಮಧರ್ಮೋದ್ಧಾರಣಾಚಾರ್ಯನಂ,
ಮ್ಲೇಚ್ಛಾಚ್ಛಾನ್ನ ಪವಿತ್ರ ಭಾರತ ವಿಯನ್ಮಾಧ್ಯಂದಿನಾದಿತ್ಯನಂ,
ವಿದ್ಯಾರಣ್ಯ ವರೇಣ್ಯನಂ ಚತುರ ಚಾತುರ್ವೈದ್ಯನಂ ವಂದಿಪೆ ||೧||

ಯಾಜುಷ ಶಾಖೆಯ ಪ್ರಚುರ ವಿಪ್ರರ ವಂಶದಿ ಜನ್ಮಮಂತೆ, ಬೌ
ಧಾಯನ ಸೂತ್ರಮಂತೆ, ಸಿರಿ ಮಾಯಣನಾತ್ಮಜನಂತೆ, ಮೇಣ್‌ ಭರ
ದ್ವಾಜನ ಗೋತ್ರಮಂತೆ, ನಿಜಸೋದರ ಸಾಯಣನಂತೆ, ಕನ್ನಡಂ
ತಾಯ್ನುಡಿಯಂತೆ, ನೀನಖಿಲ ಕಲ್ಪಿಯ ಕಾನನಮಂತೆ, ಮಾಧವಾ ||೨||

ಶಕಸಮ ದಿಕ್ಶರದ್ವಿವಿಧು ಧಾತುವ ಮಾಧವ ಶುಕ್ಲಪಕ್ಷ ಸ
ಪ್ತಮಿ ರವಿವಾಸರಂ ಕದರಿ ಕನ್ನಡ ರಾಜ್ಯದ ಲಕ್ಷ್ಮಿ ತುಂಗಭ
ದ್ರಾತಟಕಾಚಿ ಬಂದಳೆ? ಗಡಾಕೆಯನಂದಿಗೆ ಹಿಂದುರಾಟ್‌ ಸುರ
ತ್ರಾಣನ ಗಂಡುಕೆಯ್ವಿಡಿಸುತಾದೆಯ ಕನ್ನಡ ನುಳ್ಪುರೋಹಿತಂ? ||೩||

ಕಿರುತಮ್ಮಂ ಬೆರಸೀ ಚತುಃಶ್ರುತಿಗೆ ವೇದಾರ್ಥಪ್ರಕಾಶಂ ನೆರ
ಳ್ಮರೆಯಿಂ ನೇಸರ ನೋಡುವಂತೆ ಮೆರಸಲ್‌ ಮೇಣೇಂ ಪ್ರಸಾದಂ ಚಿರಂ?
ಚತುರಾಸ್ಯಂ ಚತುರಾಸ್ಯದಿಂದೊರೆದುದನ್ನಾಸ್ಯದ್ವಯಂ ಸಾಧಿಸಲ್‌
ವಿಧಿಯೋ ವೇದವೊ ನಿಮ್ಮೂಳಂತು ನೆರೆವಂದೇಂ ಧನ್ಯಮೀ ಭಾರತಂ! ||೪||

ನಿಲಿಸಿ ಪರಾಶರಸ್ಮೃತಿಗೆ ನೀಂ ಕಲಿಕಾಲದಿ ಕೆತ್ತ ಕತ್ತಲಂ
ತೊಲಗಿಪ ಕೆಯ್ವೆಳಂಕ ಮಿರುಟೀಕೆಯ, ಮಾಣಿಸಿದೆಮ್ಮ ಮುಗ್ಗುರಂ
ಅಭಿನವ ಕಾಲಿದಾಸನೆನೆ ಶಂಕರದಿಗ್ವಿಜಯಂ ನೆಗಳ್ಚಿ, ಮೇಣ್‌
ನಿರವಿಸಿ ಧಾತುಜಾತದರಿವಂ ನುಡಿಯಾಗರವಂ ಬಿದಿರ್ಚಿದೈ! ||೫||

ಸರ್ವಧರ್ಮಸಮಾನದೃಷ್ಟಿಯೆ ಸರ್ವದರ್ಶನಸಂಗ್ರಹಂ
ಕಾಣಿಸಿತೆ? ವ್ಯವಹಾರ ಕಾಲಾಚಾರವಿವು ತರಿಸಂದುವೆ?
ಐತರೇಯಕೆ ತೈತ್ತಿರೀಯಕೆ ಬಾಸಣಿಸಿ ಜತೆ ಭಾಷ್ಯಮಂ,
ಜೈಮಿನೀಯಕೆ ಬಾದರಾಯಣಕಿತ್ತೆ ತಿಳಿಗನ್ನಡಿಗಳಂ ||೬||

ಕೊಂಕಣದಂಕೆಯಲ್ಲಿ ತುಡುವೊಕ್ಕ ತುರುಂಕರ ನೂಂಕಿ, ಸಪ್ತಕೋ
ಟೀಶನ ದೇಗುಲಂ ನಿಲೆ ನಿಮಿರ್ಚಿಸಿ, ಗೋವೆಯ ಗೋವನಾಗಿ, ಮಾ
ರಾಯನ ಸಮ್ಮತಂ ಬೆರಸು ಪೋಗಿ ಜಯಂತಿಯನಾಳಿ, ಮುಂತೆ ಶೃಂ
ಗೇರಿಯ ಸೇರಿ, ನೀನಪರ ಶಂಕರನಂತೆಡೆಗೊಂಡೆ ಮಾಧವಾ ||೭||

ತುರುಕರ ದಿಂಡು ಗುಂಡಿಗೆಯ ಹಿಂಡಿದ ನಿನ್ನಯ ಬಾಹು ದಂಡಮಂ
ಪೊಗಳ್ವೆನೆ ? ಹಿಂದುಮುಂದರಿವ ಹೈಂದವ ಧರ್ಮಕೆ ಶಬ್ದ ಶಿಲ್ಪದಿಂ
ನಿಗಮದ ಗಂಗೆಗಾಗಮದ ಕಟ್ಟೆಯ ಕಟ್ಟಿದ ಬುದ್ದಿ ಶಕ್ತಿಯಂ
ಪೊಗಳ್ವೆನೆ ? ಚೋದ್ಯಮೇಂ — ಬಿಗುರ ಬೀರಿದ ಬೀರಮೊ? ಬಲ್ಲ ಬಿಜ್ಜೆಯೊ? ||೮||

ಬ್ರಹ್ಮಕ್ಷತ್ರಮೆ ಸಲ್ವುದೀ ಕಲಿಯುಗಕ್ಕೆಂದೇನದಂ ತಾಳ್ದಿದೈ?-
ಬ್ರಹ್ಮಜ್ಞಾನದೆ ಕಾಯೆ ತಾಯೆಳೆಯ ಧರ್ಮಗ್ಲಾನಿಯಿಂ ಹಾನಿಯಿಂ,
ಕ್ಷತ್ರತ್ರಾಣದೆ ಕಾದೆ ಮ್ಲೇಚ್ಛದಳವಂ ಮಾರ್ಕೊಂಡವರ್ಕೊಂಡುದಂ!-
ಬ್ರಹ್ಮಕ್ಷತ್ರ ಕುರಾರರಾಮನವತಾರಂ ನಿನ್ನೊಳೇಂ ಬೆತ್ತನೆ? ||೯||

ಜ್ಞಾನಮೆ ಮಾನವೀ ತನುಮನಾಂತುದೆ? ಭಕ್ತಿಯೆ ಭಿಕ್ಷವಾದುದೆ?
ವಾಣಿಯ ಜಾಣೆ ಆಣೆರಕಗೊಂಡುದೆ? ಗೆಲ್ಲಿನ ಬಲ್ಲೆ ಮೂಡಿತೆ ?
ಕನ್ನಡ ನಾಡೆ ತನ್ನ ಮನಮೊಟ್ಟಿಸಿ ಸೃಷ್ಟಿಸೆ ಸೃಷ್ಟಗಿತ್ತುದೆ?
ಧರ್ಮಮೆ ಕರ್ಮಮಾಗಿ ನೆರವೇರಿತೆ ನಿನ್ನಲಿ? ಪೇಳ ಮಾಧವಾ ||೧೦||

ಸತ್ಯದ ಭೂಮಿ, ಧರ್ಮದಮೃತಾಂಬುಧಿ ಶುಷ್ಕ ತುರುಷ್ಕ ಕಾನನಾ
ಭೀಲ ದವಾನಲಂ, ನಿಖಿಲ ಕನ್ನಡ ನಾಡಿನ ಸೂತಿಕಾನಿಲಂ,
ಶುದ್ಧ ಚಿದಂಬರಂ, ಬೆರೆಯೆ ಪಂಚತೆಗಂದಿಗತೀತ ಪಂಚಭೂ
ತಂ ನಿನತಾತ್ಮಮೊಂದಿ ಪರಮಾತ್ಮನನಾದುದಭಿನ್ನಮದ್ವಯಂ ||೧೧||

ಕಂತಿದೆ ನೀ ದಿನಾಂತದಿನನಂತೆನೆ, ನಿನ್ನಯ ಪಿಂತೆ ಕಾಂತಿಯಂ
ಕಾಣದ ಭಾರತಂ ಬರಬರುತ್ತ ನಿಶೀಥಕೆ ಮಾಸಿ ಬಂದುದೈ;
ರಾಮನ ಸಂಕದಿಂ ಕುಳಿರ ಶೃಂಗವರಂ ನಮಗಿಂದಿಗಿಲ್ಲಿ ನಿ
ನ್ನನ್ನವನೊರ್ವನುಳ್ಳಡೆಮಗಪ್ಪುದೆ ಈ ಬಡಪಾಡು ಮಾಧವಾ? ||೧೨||

ಪರಮಾಚಾರ್ಯನೆ, ನಿನ್ನ ಪುಣ್ಯತಿಧಿಯೊಳ್ನಾನೊಂದಿದಂ ಬೇಡುವೆಂ-
ಭವದಾವಾಸದ ಬ್ರಹ್ಮಧಾಮದಲಿ ಮುನ್ನೀಂ ಪುಟ್ಟಿದೀ ಭಾರತಂ
ಮರೆಯಲ್ಬೇಡೆಮಗಾಗಿ ಬೇಡೊಡೆಯನನ್ನಮ್ಲಾನ ಭಾಗ್ಯೋದಯಂ
ಬರಿಸಲ್ನೀನೆರೆವಂದು ನೀಡದವನಿನ್ನಾರ್ಗಂ ಗಡಾ ನೀಡುವಂ? ||೧೩||

ಶ್ರೀ ಕರ್ಣಾಟಕಮೇವರಂ, ನೆನವು ನಿನ್ನಾಚಾರ್ಯ ಮುನ್ನಾವರಂ,
ಹಿಂದೂದ್ಧರ್ಮಮಿದೇವರಂ, ಯಶಸು ನಿನ್ಮಾಚಾರ್ಯ ಮುನ್ನಾವರಂ,
ನಮ್ಮೀ ಭಾರತಮೇವರಂ, ಹೆಸರು ನಿನ್ನಾಚಾರ್ಯ ಮುನ್ನಾವರಂ-
ಸೂರ್ಯಾಚಂದ್ರಮರೇವರಂ, ನಿಲುವುವಿನ್ನಾಚಾರ್ಯ ಮುನ್ನಾವರಂ! ||೧೪||

ವಿಪುಲ ಜ್ಞಾನಮನಾಂತು ಸಲ್ಲಿಸಿದ ಮೇಧಾಶಕ್ತಿಗಂ, ಮ್ಲೇಚ್ಛರಂ
ಸದೆವೊಯ್ದದ್ಭುತ ಶೌರ್ಯಶಕ್ತಿಗೆ, ತಥಾ ಕರ್ಣಾಟ ವಾಸ್ತೂತ್ಸವಂ
ಗೆಯಿದಾತ್ಮೋಪಮ ಕರ್ತೃಶಕ್ತಿಗೆ, ಧುರಂ ತಾಳ್ದಾ ಬೃಹನ್ನೀತಿ ಶ
ಕ್ತಿಗೆ, ನಿನ್ನಕ್ಕೆಮ ಸರ್ವಶಕ್ತಿಗೆ ಸದಾ ಭದ್ರಂ ಶುಭಂ ಮಂಗಳಂ ||೧೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ವಿರೋಧಿ ಸಮರಕ್ಕೆ
Next post ಮಡಿಕೇರಿಯ ನೆನಪು

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…