೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು.
ಪ್ರತಿ ಮಳೆಗಾಲದ ದಿನಮಾನಗಳಲ್ಲಿ ಮಡಿಕೇರಿ ಸವಿಸವಿ ನೆನಪು ತರುವುದು. ಇದು ಅಲ್ಲದೆ ೧೯೯೮-೧೯೯೯ರಲ್ಲಿ ಮಡಿಕೇರಿಯಲ್ಲಿ ಇರುವ ಬಂದು ಹೋಗುವ ೨೦೧೧-೨೦೧೨ರಲ್ಲಿ ಮತ್ತೆ ಮಡಿಕೇರಿಗೆ ಹೋಗಿ ಬರುವ ಸುವರ್‍ಣಾವಕಾಶ ನನಗೆ ಲಭಿಸಿದ್ದು ಸಂತಸ ನವ ಉಲ್ಲಾಸ ಹರ್‍ಷ ತಂದಿತ್ತು.
ಮಡಿಕೇರಿ ಸ್ವರ್‍ಗ ಸೀಮೆ, ಕನ್ನಡ ನಾಡಿನ ಕಾಶ್ಮೀರ, ಭೂ ಕೈಲಾಸ, ಮೇಲಿಂದ ಮೇಲೆ ನೆನಪಾಗುವುದು.
ಅಲ್ಲಿನ ಊಟ, ತಿಂಡಿ, ಅದರಲ್ಲೂ “ಕಕ್ಕಡ ಪದಿನೆಟ್ ಪಾಯಸ” ಸುರುಕುಂಬಾವನ್ನು ಮೀರಿಸುವುದು.
ಕಕ್ಕಡ=ಆಟಿ ತಿಂಗಳು-ಕರ್‍ಕಾಟಕ ತಿಂಗಳು- ಆಟಿ ಸೊಪ್ಪು ಎಂದು ಅರ್‍ಥ. ಈ ಮೂರಡಿ ಹಚ್ಚನೆ ಸೊಪ್ಪಿನ ಗಿಡ ಅಲ್ಲಿನ ಕಾಫಿ ತೋಟಗಳಲ್ಲಿ, ಕಾಡುಮೇಡುಗಳಲ್ಲಿ ಹುಲುಸಾಗಿ ಬೆಳೆಯುವುದು. ಇದು ಔಷಧಿ ಪರಿಮಳಯುಕ್ತ ಸಸ್ಯ. ಇದರಲ್ಲಿ ಸರಿಯಾಗಿ ಮೂರು ವಾರ ಜುಲೈನಲ್ಲಿ ದಿನಕ್ಕೊಂದು ಔಷಧಿ ಗುಣ ಈ ಗಿಡದಲ್ಲಿ ಪ್ರಕೃತಿ ದತ್ತವಾಗಿ ಸೇರುವುದೆಂದೂ…. ಆಗಸ್ಟ್ ಮೊದಲ ವಾರದ ಮೊದಲ ದಿನ ಹಬ್ಬದ ದಿನ ಈ ಸೊಪ್ಪು ಘಮ ಘಮಾ ಪರಿವಾಳ ಬೀರುವುದು. ಇದನ್ನು ಕಿತ್ತು, ಸೋಸಿ ತೊಳೆದು, ಇದರಿಂದ ರಸ ತೆಗೆದು, ಪಾಯಸದಲ್ಲಿ ಸೇರಿಸಿ, ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ, ಸಕ್ಕರೆ ಕಲ್ಲು ಸಕ್ಕರೆ, ಸಿಹಿ ಅಕ್ಕಿ, ಏಲಕ್ಕಿ, ಗಸೆಗಸೆ, ದ್ರಾಕ್ಷಿ, ಗೋಡಂಬಿ, ಪಿಸ್ತ, ಬಾದಾಮಿ ಇತ್ಯಾದಿ ಹಾಕಿ ತಯಾರಿಸಿದ ಪಾಯಸ ಕುಡಿಯಲು ತಿನ್ನಲು ಸೊಗಸಾಗಿರುವುದು.
ಅಂದು- ಮಡಿಕೇರಿಯ ತುಂಬಾ ಹುಗ್ಗಿಯ ಹೊಳೆ ಹರಿಯುವುದು. ಮನೆಮನೆ ಓಣಿಓಣಿ, ಗಲ್ಲಿಗಲ್ಲಿ, ಬೀದಿಬೀದಿಯೆಲ್ಲ, ಘಮಾಘಮಾ ಹುಗ್ಗಿಯ ಪರಿಮಳ ಬೀರುವುದು. ಮೊದಲೇ ಮಡಿಕೇರಿಯು ಸುವಾಸನೆಯುಕ್ತವಾಗಿರುತ್ತದೆ. ಅಂದು ಇನ್ನೂ ಘಮಿಘಮಿಸುವುದು. ಬರೀ ವಾಸನೆಗೆ ಹೊಟ್ಟೆ ತುಂಬಿ ಮುಖವೆಲ್ಲ ಸಿಹಿಗೆ ಉಜ್ಜಿದಂತಾಗುವುದು!
ಬರೀ ಓದಿದರೆ ಸಾಲದು, ಅದರ ಸವಿಯ ಸವಿದು ತೃಪ್ತಿ ಪಟ್ಟುಕೊಂಡು ಧನ್ಯರಾಗಬೇಕು. ಅದುವೇ ಜೀವನ. ಮಡಿಕೇರಿಯ ವಿಶೇಷವದು.
*****