೧೯೯೧ ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ನಾನು ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶವೊಂದು ಲಭಿಸಿತ್ತು. ಟಿ.ಪಿ. ವೆಂಕಟರಮಣ ಅವರು ನಮ್ಮ ಮೇಲೆ ಬಹುದೊಡ್ಡ ಸಾರಿಗೆ ಅಧಿಕಾರಿಯಾಗಿದ್ದರು. ಅವರೊಬ್ಬ ಪ್ರಾಮಾಣಿಕ, ದಕ್ಷ, ಸರಳ, ಸಜ್ಜನ ಬಹುದೊಡ್ಡ ಕೆಲಸಗಾರರಾಗಿದ್ದರು! ಅವರು ನನ್ನನ್ನು ಇಲ್ಲಿ ಕೆಲಸ ಮಾಡಲು ಒತ್ತಾಯಿಸಿದ್ದರು.
ಆಗ ನಾನು ಸುಬ್ರಮಣ್ಯ ನಗರದಲ್ಲಿ ಪುಟ್ಟದೊಂದು ಬಾಡಿಗೆ ಮನೆಯಲ್ಲಿ ಬಹಳ ತೊಂದರೆಯಲ್ಲಿ ಕೆಲಸದ ಒತ್ತಡದಲ್ಲಿ ವಿಲವಿಲ ಒದ್ದಾಡುತ್ತಿದ್ದೆ. ಆಗ ನನ್ನವಳು ಒಂದು ದಿನ “ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಬರೋಣ ನಮ್ಮ ಕಷ್ಟ ನಷ್ಟ ಅವಮಾನ ಎಲ್ಲ ತೊಲಗುವುದೆಂದು ನನ್ನ ಐದಾರು ಭಾರಿ ಹುರಿದುಂಬಿಸಿದ್ದಳು.
ನನಗೂ ಪ್ರವಾಸದ ಹುಚ್ಚು ಬೇರೆ “ಆಯ್ತು” ಎಂದೆ. ಶುಕ್ರವಾರ ರಾತ್ರಿ ಬೆಂಗಳೂರು ಬಿಟ್ಟು ಶನಿವಾರ ಬೆಳ್ಳಂಬೆಳಿಗ್ಗೆ ಮಕನಸುಕಿನಲ್ಲಿ ರೂಮು ಮಾಡಿ, ತಣ್ಣೀರಿನಲ್ಲಿ ಮುಳುಗೆದ್ದು ಸರತಿ ಸಾಲಿನಲ್ಲಿ ಹೋಗಿ ನಿಂತೆವು… ನೂಕುನುಗ್ಗಲು. “ತಿರುಪತಿ ತಿಮ್ಮಪ್ಪನಿಗೆ ದಾರಿ ಯಾವುದಯ್ಯಾ?” ಅನಿಸಿತು! ತಳ್ಳುನೂಕು… ಹುಟ್ಟಿದ್ದೆಲ್ಲ ನೆನೆಸಿಕೊಂಡೆ….
ಒಂದು ಹಗಲು ಒಂದು ರಾತ್ರಿ ನಿಂತು ನಿಂತೂ… ಕುಂತು ಕುಂತೂ ತಿರುಪತಿ ತಿರುಮಲ ದೇವಸ್ಥಾನದ ಮಂದಿ ನಮಗೆಲ್ಲ ನರಕ ತೋರಿಸಿ ಬಿಟ್ಟರು. ಗುದ್ದಾಟ ತಳ್ಳಾಟ. ಟೀವಿ ತೋರಿಸುವ ಜಾಹಿರಾತು ತೋರಿಸುವ ನೆಪದಲ್ಲಿ ಅವರಿಗೆ ತಂಪು ಪಾನಿಯಗಳು… ಬಿಸ್ಕತ್, ಬ್ರೆಡ್, ಹಣ್ಣುಹಂಪಲು, ಚಾಕಲೇಟ್ಸ್… ಚಿಪ್ಸ್…. ಹೀಗೆ ನಾನಾ ತರತರದ ತಿಂಡಿತೀರ್‍ಥಗಳು ಖರ್‍ಚಾಗಲೆಂದೇ ಜನರನ್ನು ಕುರಿ ಮಂದೆ ಮಲಗಿಸಿದಂತೆ ಇಪ್ಪತ್ತು ನಾಲ್ಕು ತಾಸು, ಮೂವತ್ತಾರು ತಾಸು, ನಲವತ್ತೆಂಟು ಗಂಟೆ ಒಳಗೆ ಕೂಡಿ ಹಾಕಿ ತಿಮ್ಮಪ್ಪನ ಒಂದು ನಿಮಿಷ ನೋಡಲೂ ಬಿಡಲಿಲ್ಲ. ತಳ್ಳಿದರೆ ಮೂರು ಉಳ್ಳಿಕೆ ಬೀಳಬೇಕು ಹಂಗೆ ಬಲವಾಗಿ ನೂಕಿದರು. ಉಸಿರು ಗಟ್ಟಿಸುವ ಸ್ಥಿತಿಗತಿ ನೂಕುನುಗ್ಗಲು! ಇದು ಬೇಕಾ?
“ಥ! ಇಲ್ಲಿಗೆ ಇನ್ನೊಮ್ಮೆ ಬರಬಾರದೆಂದು” ಜೀವ ಬಲು ನೊಂದು ಬೆಂದು ಬಸವಳಿದು ಸೊರಗಿ ಸೋತು ಅಂದು ಆಡಿ ಕೂಗಾಡಿ ಬಿಟ್ಟೆ!
ಸೋಮವಾರ ದಿನ ಕಚೇರಿಯಲ್ಲಿ ಕರ್‍ತವ್ಯದ ಮೇಲಿದ್ದೆ ೧೯೯೨ ರಲ್ಲಿ ನನ್ನಮ್ಮನ ಆಸೆ ಆಣತಿಯಂತೆ ಮತ್ತೆ ತಿರುಪತಿ ತಿಮ್ಮಪ್ಪನ ದರ್‍ಶನಕ್ಕೆ ಅದೇ ಹಿಂಸೆ ಚಿತ್ರಹಿಂಸೆ ನೂಕುನುಗ್ಗಲು ತಳ್ಳಾಟ… “ಥ! ಇನ್ನೊಮ್ಮೆ ಇಲ್ಲಿಗೆ ಬರುವುದು ಬೇಡ!” ಎಂದು ಬೈದಾಡಿ ಕೂಗಾಡಿ ಬಂದಿದ್ದುಂಟು!!
– ಹೀಗೆ ಹತ್ತಾರು ಸಲ ಈಗಾಗಲೇ ಹೋಗಿ ಬಂದಿದ್ದೇನೆ. “ಏನೈತಿ? ಅಂಥಾದೇನೈತಿ?? ಇದೇಕೆ? ಇಲ್ಲಿನ ಗತ್ತುಗಮ್ಮತ್ತು ಏನು..? ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಏನೈತಿ?” ಎಂದು ಪ್ರತಿ ಸಾರಿ ಕೇಳಿಕೊಳ್ಳುತ್ತಿದ್ದೇನೆ.
ಈಗಾಗಲೇ ಮುಡಿ ಬಿಟ್ಟು ತಿರುಪತಿ ತಿಮ್ಮಪ್ಪನ ಬಳಿಗೆ ಹೋಗಲು, ೨೦೧೫ ರ ಡಿಸೆಂಬರ್ ತಿಂಗಳೊಳಗಾಗಿ ಹೋಗಲು, ಮನಸು ಮಾಡಿದ್ದೇನೆ. ಈ ನಿಟ್ಟಿನಲ್ಲಿ ಶತಪ್ರಯತ್ನ ವಿಶ್ವಪ್ರಯತ್ನದಲ್ಲಿದ್ದೇನೆ.
ನಾ ಅಂದುಕೊಂಡಂತೆ ಆಗುವುದು! ನಾ ಹೋಗಿ ಬಂದ ಮೇಲೆ ಅದರ ಸವಿಸವಿ ನೆನಪು ಅನುಭವ ಬರೆಯುವೆ, ಆಗಬಹುದೇ?
*****