ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ|
ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧||
ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ|
ಗೊನಿಯ ತಿರುವಂದ ಮಲಕೀಲಿ| ಸೋ… ||೨||
ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ|
ಕೊಡವೀಗಿ ತಮಗ ವರನೆಂದ| ಸೋ… ||೩||
ದ್ವಾರ್‍ಯಾಗೋಳಿಡಿಸ್ಯಾರ ಮಾರೀಯ ನೊಡ್ಯಾರ|
ನಾರೀಗಿ ತಮಗ ವರನಂದ| ಸೋ… ||೪||
ಹಸಿಯ ಜಗಲಿಯ ಮ್ಯಾಲ ಒಯ್ದಿಟ್ಟರ ಭಾಸಿಂಗ|
ತಂಗೆವ್ವಾ ಹೋಗಿ ತಗತಾರ| ಸೋ… ||೫||
ತಂಗೀಯವ್ವಾ ಹೋಗಿ ತಗತಾರ ಭಾಸಿಂಗ|
ನಂದಿ ಸೋಪನದ ನಸಲೀಗಿ| ಸೋ… ||೬||
ದಂಡಿ ತಂದಣ್ಣಾಗ ಕುಂಡ್ರೂ ಗದ್ದೀಗ್ಹಾಕಿ|
ಗುಂಡ ಗದ್ದ್ಯಾಣದ ಹೊಲ ಕೊಟ್ಟ| ಸೋ… ||೭||
ಗುಂಡಽನೆ ಗದ್ದ್ಯಾಣದ ಹೊಲ ಕೊಟ್ಟ ತಮ್ಮಾಽಗ|
ದಂಡಿ ತಂದಣಗ ಉಣಕೊಟ್ಟ| ಸೋ… ||೮||
*****
ಈ ಹಾಡಿನಲ್ಲಿ ಸತಿಯ ವಿಷಯದಲ್ಲಿ ಪತಿಗಿರುವ ಅಕ್ಕರತೆ ವರ್ಣಿಸಲ್ಪಟ್ಟಿದೆ. ಹಣೆಗೆ ದಂಡೆಯನ್ನು ಕಟ್ಟಿ ನೋಡುತ್ತಾನೆ. ಕೈಗೆ ಕಡೆಗ, ದ್ವಾರೇ ಮುಂತಾದ ಆಭರಣಗಳನ್ನಿಡಿಸಿ ನೋಡುತ್ತಾನೆ. ಅಷ್ಟಕ್ಕೂ ಸಾಲದೆ ಬಾಸಿಗವನ್ನು ತನ್ನಿರೆನ್ನುತ್ತಾನೆ. ತಂದು ಕೊಟ್ಟವರಿಗೆ ಪಾರಿತೋಷಿಕವನ್ನು ಕೊಡುತ್ತಾನೆ.
ಛಂದಸ್ಸು:- ತ್ರಿಪದಿಯ ಪೂರ್ವಾರ್ಧದಂತಿದೆ.
ಶಬ್ದ ಪ್ರಯೋಗಗಳು:- ಭಾಂವಕ್ಕ=ಸ್ಥಾನಕ್ಕೆ. ಗೊನಿ=ಗೊಂಚಲು. ಕೊಡವಿ=ದಸುವುಗಳು. ತಗತಾರ=ತೆಗೆದುಕೊಂಡು ಬಾರೆ. ನಂದಿಸೋಪಾನ=ಪೂರ್ವಕಾಲದಲ್ಲಿ ಪ್ರಚಾರದಲ್ಲಿದ್ದ ಮೆಟ್ಟಿಲುಗಳ ಸಾಲು. ನಸಲೀಗಿ=ನೊಸಲಿಗೆ(ಹಣೆಗೆ). ಗುಂಡುಗದ್ಯಾಣದ ಹೊಲ=ದುಂಡಗಿನ ಆಕಾರದ ಹೊನ್ನಿನ ನಾಣ್ಯಗಳನ್ನು ಕೊಟ್ಟು ಕೊಂಡ ಹೊಲ.