ಚಂದ್ರಚುಂಬಿತ ಯಾಮಿನೀ
ನವವಿರಹಿ ಚಿತ್ತೋನ್ಮಾದಿನೀ,
ಜಾರುತಿದೆ ಕಲನಾದಿನೀ,
ಅದೊ! ಹಾಡುತಿರುವಳು ಕಾಮಿನೀ.
ತರುಣಿ ವೀಣೆಯ ಮಿಡಿವಳು
ತಚ್ಛ್ರುತಿಗೆ ವಾಣಿಯನೆಳೆವಳು-
ಮಧುರಗೀತದ ನುಡಿಯೊಳು
ತನ್ನೆದೆಯ ಭಾವವ ಮೊಗೆವಳು:
ಒಲುಮೆ ಹೃದಯವ ಹೊಗಲು ಬಯಸಲು
ಆರು ತಡೆಯಲು ಬಲ್ಲರು?
ಎದೆಯ ಬಿಟ್ಟದು ಹಾರ ಬಯಸಲು
ಆರು ತಡೆಯಲು ಬಲ್ಲರು?
ಚೆಲುವೆ, ಯೌವನದೀಪ್ತಳು,
ಮೇಣೊಲುಮೆ ಕನಸೊಳಗಿರುವಳು.
ಒಲುಮೆನಚ್ಚನು ನಂಬಳು,
ಹೊಸ ಭಯಕೆ ತಲ್ಲಣಗೊಂಬಳು.
ಒಲುಮೆ ಹಕ್ಕಿಯು ಸುಳಿಯಲು
ಅದರಂದಕಚ್ಚರಿಗೊಂಡಳು.
‘ಒಲುಮೆ’ ಎಂದವಳರಿಯಳು
ತನ್ನೆದೆಯ ಗೂಡೊಳಗಿಟ್ಟಳು.
ಅಲ್ಲಿ ಹಕ್ಕಿಯು ಹಾಡಿತು;
ಮೇಣೆಂಥ ಚೈತ್ರವ ತಂದಿತು!
ಬಾಳನೆಂತದು ರಮಿಸಿತು!
ಹೊಸ ನಚ್ಚ ಮೋದವ ತೋರಿತು!
ಅದಕೆ ಅವಳಸು ಮೀಸಲು-
ಅದು ಹಾರಿಹೋಗದ ತೆರದೊಳು
ನೇಹಮೋಹದ ಸರಳೊಳು
ತನ್ನೆದೆಗೆ ಪಂಜರ ಬಿಗಿದಳು.
ಹುಚ್ಚಿ, ಒಲುಮೆಗೆ ಬಂಧವೆ?
ಅದ ಸೆರೆಯ ಕೊಳುವುದು ಸುಲಭವೆ?
ಬಯಸಿದೆಡೆಗದು ಪರಿವುದು,
ನರನೆದೆಯ ಪಾಳಂಗೈವುದು.
ಬಾಳ ಸಾರವ ಶೋಷಿಸಿ
ಹೊಸ ಬಯಕೆ ಬವಣೆಯ ತೋರಿಸಿ
ನುಸುಳಿದೊಲುಮೆಗೆ ಶಂಕಿಸಿ
ತಾ ಮಿಡುಕುತಿಹಳಾ ಮಾನಿಸಿ.
ಇಂದುರಂಜಿತ ಯಾಮಿನೀ
ಸುಖಿಜನರ ಚಿತ್ತಾಹ್ಲಾದಿನೀ;
ಗಾನಗೈವಳು ಕಾಮಿನೀ;
ಆ ವಾಣಿ ಹೃದ್ವಿದ್ರಾವಿಣೀ:
ಒಲುಮೆ ದಾಳಿಯನಿಡಲು ಜಗ್ಗದ
ಹೃದಯವುಂಟೇ ಮನುಜಗೆ?
ಒಲವ ಸೆರೆಯನು ಕೊಳುವ ಬಲ್ಮೆಯ
ಹೃದಯವುಂಟೇ ಮನುಜಗೆ?
*****