ರಾಗ ಬೇಹಾಗ- ತಾಳ ತ್ರಿವಟ
ಶ್ರೀ ಹರಿಯೇ ಬಳಲಿದೆ ಎಂತು
ನಮಗಾಗಿ ನರಲೀಲೆಯನಾಂತು! || ಪಲ್ಲ ||
ಶುಭಜನನಕೆ ಸೆರೆಗತ್ತಲೆಯೊ ಹಿತ
ವಾದುದು ೧ಮಂದೆಯ ಗೋದಲೆಯೊ?
೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ?
ಯಮುನೆಯೀಸೆ ತಂದೆಯ ತಲೆಯೊ? || ೧ ||
ಕೊಳಲ ಸೂಸಿ ಹಸು ಮೇಸಿದೆ, ಕೊಡತಿಯ
ಬಡಿದು ೩ಬಡಗಿಯಾ ಪಡಿದುಡಿದೆ;
೪ನಾಡನುಳಿದು ನಡುಗಡಲೊಳಗಡಗಿದೆ,
೫ಮುಡಿಯಿಡಲೆಡೆವಡೆಯದೆ ನಡೆದೆ. || ೨ ||
ರಾಧೆ ಬಿಗಿದ ಭುಜಬಂಧದ ಬಂದಿಯೊ?
೬ಮರಿಯಳ ಮುತ್ತುಗಳಂದುಗವೊ?
ಕುರುರಾಯನ ಹೆಡಮುರಿ ಕೇಯೂರವೊ?
೭ಮುಳ್ಳುಮುಕುಟ ಮುಡಿಸಿದ ಮೊಗವೊ? || ೩ ||
ಬಿಲ್ಲಿನ ಹಬ್ಬದ ಗೆಲ್ಲಿನ ಪಯಣಕೆ
೮ಮರಿಗತ್ತೆಯೆ ಮೆರತದ ರಥವೆ?
೯ಯೂದನ ಮುತ್ತಿನ ಸ್ವಾಗತವೆ? ಚೈ
ದ್ಯನ ಸೇಸೆಯ ಬಯ್ಯವಭೃಥವೆ ? ||೪||
ದುರುಪದಿಯರುವೆಯ ಕಾದಗೆ ಮಾರ್‍ಥಳ೧೦
ಮನೆಗೆಲಸದಿ ಬಲು ಬೇಸರವೆ?
ಭೀಷ್ಮನ ಶರದಿಂ ಸೋರ್‍ವೆದೆಯೊರಸದೆ
೧೧ಶಿಷ್ಯರ ಕಾಲ್ತೊಳೆವನಸರವೆ? ||೫||
೧೨ನಲವತ್ತು ದಿನದುಪೋಷ್ಯಕೆ ೧೩ಹಿಡಿ
ಯವಲಕ್ಕಿಯ ಪಾರಣೆ ಸಾಕೆ?
ವಿದುರನ ಕುಡುತೆಯ ಕುಡಿದ ತೇಗಿಗೆ ೧೪ಸ
ಮಾರ್‍ಯಳು ಮೊಗೆದಾ ಜಲವೇಕೆ? ||೬||
೧೫ಹರ್ಮೋನಲಿ ರೂಪಾಂತರವಾಂತಗೆ
೧೬ಮೂವತ್ತು ಬೆಳ್ಳಿಗಳ ಬೆಲೆಯೆ?
ಪಾರ್ಥನೀಕ್ಷಿಸಿದ ವಿಶ್ವಶರೀರಿಗೆ
೧೭ಜೋಡೆಲೆ ತುಳಸಿಯನಿತೆ ತೊಲೆಯೆ ? ||೭||
೧೮ಪಾಪದ ಸಾಲಕ ನೀರೆರೆದುದ ನಿಜ
ನೆತ್ತರಿಂದ ನಿರವಿಪ ತೆರವೆ?
ನಂಬಿದರೂಳಿಗಿ ಎಂದು ಸಾರೆ, ೧೯ಬಿಳಿ
ಕುದುರೆಯ ಕಿಳಿರಿನ ಡಂಗುರವೆ? ||೮||
೨೦ಕಳ್ಳನೆಂಬ ಹಳಿ ಮೆರಸಲೇಂ ನೀ
೨೧ಕಳ್ಳರ ನಡು ತೂಗಾಡಿದೆಯಾ?
ಬೆರಳಲಿ ಬೇಡನ ಬಾಣ ಬೇಯುತಿರೆ,
೨೨ಸಿಲುವೆ ಮೊಳೆಗೆ ಕೆಯ್ನೀಡಿದೆಯಾ? ||೯||
೨೩ನಮ್ಮೊಳಗಣ ಸ್ವಾರಾಜ್ಯ ಸೇರಲೆಮ
ಗೂಡಿದೆ ೨೪ಪ್ರೇಮದ ೨೫ಮೆಲುನೊಗವಂ!
೨೬ ತನ್ನನೆ ಮರೆವೊಂದೆನ್ನುವ ಬದುಕಿನ
೨೭ಸೆಲೆಹಾಡಿಗೆ ನುಡಿಸಿದೆ ಜಗವಂ! ||೧೦||
ಯದುನಾಥನೆ ೨೮ಯೂದನಾಥನಲ್ಲವೆ?
ಕಾಲಗಳಿವು, ನಿನಗಳಿವಿಹುದೆ?
ದಿನವೆರಡರ ಭಾಸ್ಕರನೆರಡಹನೆ?
ನಿನ್ನಲಿ ಭೇದ ಬಗೆಯಬಹುದೆ? ||೧೧||
೨೯ಎಂದೆಂದಿಗೆ ಧರ್‍ಮ ಕುಂದಿ ಬಂದಪು
ದಧರ್‍ಮ ಮುಂದರಿನಂದಂದು
ಬಂದಪೆನೊಡಲಾಂತೆಂದಿಹೆ-ಮೆಯ್ಯೆನಿ
ತಾಂತು ಬಂದಪೆಯೊ ಇನುಮುಂದು! || ೧೨ ||
*****
೧ ಲೂಕ ೨ ೭
೨ ಮತ್ತಾಯ ೨ ೧೪
೩ ಮಾರ್‍ಕ ೪ ೩
೪ ಜರಾಸಂಧನ ಬಾಧೆಗಾಗಿ ಮಥುರೆಯನ್ನು ಬಿಟ್ಟು ದ್ವಾರಕೆಯಲ್ಲಿ ವಾಸ
೫ ಲೂಕ ೯ ೫೮
೬ ಲೂಕ ೭ ೩೮
೭ ಮತ್ತಾಯ ೨೭ ೨೯
೮ ಯೋಹಾನ ೧೨ ೪
೯ ಮತ್ತಯ್ ೨೬ ೪೯
೧೦ ಲೂಕ ೧೦ ೪೧
೧೧ ಯೋಹಾನ ೧೩ ೫
೧೨ ಮತ್ತಾಯ ೪ ೨
೧೩ ಕುಚೇಲನು ತಂದಿತ್ತ ಅವಲಕ್ಕಿ
೧೪ ಯೋಹಾನ ೪ ೭
೧೫ ಮತ್ತಾಯ ೧೭ ೨
೧೬ ಮತ್ತಾಯ ೨೬ ೧೫
೧೭ ಸತ್ಯಭಾಮೆ ಆಚರಿಸಿದ ದಾನವ್ರತದಲ್ಲಿ
೧೮ ಮತ್ತಾಯ ೩೬ ೨೮
೧೯ ಅರ್‍ಜುನನ ರಥದ ಬಿಳಿಕುದುರೆಗಳು
೨೦ ನವನೀತಚೋರ, ಸ್ಯಮಂತಕಹರ್‍ತಾ ಇತ್ಯಾದಿ
೨೧ ಮಾರ್ಕ ೧೫ ೨೭
೨೨ ಮಾರ್ಕ ೧೫ ೨೫
೨೩ ಲೂಕ ೧೭ ೨೧
೨೪ ಯೋಹಾನ ೧೩ ೩೪, ಮಾರ್ಕ ೧೨ ೩೦-೩೧
೨೫ ಮತ್ತಾಯ ೧೧ ೨೮-೨೯
೨೬ ಗೀತೆ ೧೮ ೬೬
೨೭ ಭಗವದ್ಗೀತೆ
೨೮ ಲೂಕ ೨೩ ೩೮
೨೯ ಗೀತೆ ೪