ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ
ಎಲ್ಲಾರ ನೆಗ್ತಾರೆ ಸುಂಸುಂಕೇನೆ.
ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ
ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧
ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ-
ಗ್ರಾಸ್ತ್ನಂತೆ ಅಗಲೆಲ್ಲ ತಿರಗಾಡ್ತಾನೆ;
ಸಂಜೆ ಆಯ್ತ್ ಅಂದರ್ ಸಾಕ್- ಪಚ್ಚಿ ಮದೂರಾಚೇಲಿ
ಮಡಗೀರೊ ಪಡಕಾನೇಗ್ ಓಡೋಯ್ತಾನೆ! ೨
ಪಟ್ಟಾಗಿ ಒಡದ್ಬುಟ್ಟು ತೂರಾಡ್ತ ತೂಗ್ತಾನೆ!
ಕಣ್ಗಳ್ನ ಕೆಂಪಿಗ್ ಮಾಡ್ ತೇಲಿಸ್ತಾನೆ!
ನನ್ ಅಣಕ್ಸೊ ನರಮನ್ಸ ಸೂರ್‍ಯನ್ಗೆ ಬಾಯ್ಬುಟ್ಟಿ
ಅದಕಂತೆ ಇದಕಂತೆ ವೋಲೀಸ್ತಾನೆ! ೩
ತೂರಾಡ್ತ ಮೋರೀಗೆ ಮೋಚ್ತಾನೆ ಸೂರ್‍ಯಪ್ಪ-
ಕೆಸರೆಲ್ಲ ಛಿಲ್ಲಂತ ಮೇಲ್ ಆರ್‍ತದೆ!
ಅದಕಂಡು ‘ಕತ್ಲಾತು ಕತ್ಲಾತು’ ಅನ್ಕೊಂಡಿ
ಬೆಪ್ತಕಡಿ ಲೋಕೆಲ್ಲ ಕೂಗ್ ಆಕ್ತದೆ! ೪
ಚಿಕ್ಕೋರ್ ಸಿಕ್ಕೌರಣ್ಣ ಎಲ್ಲಾರ್ ನೆಗಾಕೆ!
ದೊಡ್ಕೋರ್ ಎಂಗಾಡಿದ್ರ ಎಲ್ಲಾನ ಸೈ!
ಲೋಕಾನೆ ಇಂಗೈತೆ-ನಾನ್ ಯಾಕ್ ದುಕ್ಪಡಲಿ-
ಮುನಿಯನ್ಗು ಯೆಂಡಕ್ಕು ಬೋಲೋರೇ ಜೈ! ೫
*****