ಮಂದಗತಿ ಮಂದತರವಾಗಿಬಿಟ್ಟಿದೆ; ಹುಲ್ಲೆ-
ಗಂಗಳೊಳು ಚಂಚಲತೆ ಕುಡಿಯೊಡೆಯಲಿದೆ; ಉಡುಗಿ
ಮೈನಯದ ನೆಯ್ಗೆ ತೊಪ್ಪಲು; ಹರೆಯ ಚಿಗುರಡಗಿ
ನೆತ್ತರದ ನೆರೆಗೆಂಪು ಹಳಸುತಿದೆ ಭರದಲ್ಲೆ.
ಹಾರು ಹಕ್ಕಿಯ ಪುಚ್ಚವೆಣಿಸಲೆಳಸಿದ ಬೆಡಗಿ!
ವಿಜಯ ವಿಠ್ಠಲನ ಗುಡಿ ಭಣಗುಡುವ ತೆರದಲ್ಲೆ
ಹರುಹಲಿರುವೆದೆ ಬರಿದೊ ಬರಿದು; ಮಿದು ಸವಿಸೊಲ್ಲೆ
ಹುಟ್ಟದಿದೆ; ಕೈನೀಡಿ ಬೆಳೆದು ನಿಂತಿಯೆ ಹುಡುಗಿ !
ದಿನದ ದಣಿವನು ಕಳೆಯೆ ತಂಗಿ ಹಾರುವ ಹಕ್ಕಿ
ಎರಗದಿರಲಿಲ್ಲ. ಕಟ್ಟಾಡಿಸಲು ಬರದಿರಲಿ
ಹುಡುಗ ಗಾಳಿ, ಅನಾದಿವಂಶದಾ ವೈಭವೋ-
ದಯವ ಮೂಸಿಸಿ ಬಿಡುವ ತುಂಬಿ ಬರದಿರು, ನವೋ-
ನವ ಮನೋರಥಸಫಲ ಪೊಸ ಬಸಂತನೆ ಬರಲಿ.
ನಿನಗೆ ಕಾವಲವಿರಲಿ ನಿನ್ನ ಚಂದ್ರಮ ಚಿಕ್ಕಿ.
*****