೧
ನೋಡು ಗೆಳೆಯ ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ
ಬಿತ್ತಿರುವುದ ಬೆಳೆಯಲೆಂದು
ಗಾಳಿಮಳೆಯು ಜೀಕುತಿದೆ.
ಅದಕಂತೆಯೆ ಎದೆಯುದ್ದಕೆ
ಹೊಲದ ನಿಲುವು ತೂಗುತಿದೆ
ಕಾರ್‍ಗಾಲದ ಹೊಸ ಹೊಂಚಿದು;
ಕಾಲಪುರುಷನೊಳಸಂಚಿದು :
ಬಾನಂಗಳಕೇಳ್ವುದೆನಲು
ಮುಗಿಲೆ ನೆಲಕೆ ಬಾಗುತಿದೆ !
ನೋಡು, ಗೆಳೆಯ ! ಶ್ರಾವಣವಿದು
ಹೊಸ ಹೊಂಚನು ಹಾಕುತಿದೆ.
೨
ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.
ಬಂತೆ ಕ್ರಾಂತಿಯೆಂದು ಹಿಗ್ಗಿ
ಲೋಕವೆಲ್ಲ ಕೇಳುತಿದೆ.
ನಲಿದು ಸತ್ಯ ಪಥವ ತೋರಿ
ಋಷಿವೃಂದವು ಬಾಳುತಿದೆ
ಸ್ವಾತಂತ್ರ್ಯದ ಸವಿಯುಸಿರಿದು
ಸಮತೆ ಹೊತ್ತ ಹೊಂಬಸಿರಿದು.
ಜಗವು- ಬರುವುದನ್ನು ನೆನೆದು
ಬಂದಿಹುದನು ತಾಳುತಿದೆ !
ಜಗದಲೆದ್ದ ಹೊಂಬೆಳಕಿಗೆ
ಕಾರ್‍ಗತ್ತಲೆ ಕೀಳುತಿದೆ.
೩
ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !
ಅಳಿಗಾಲವೆ ಇದು ಕೊನೆಯೆ ?
ಮುಂದುವರಿಸು ಹಾಡನು !
ಇಂದಿಗಿಲ್ಲಿ ಕಟ್ಟಿ ಬಿಡುವ
ನಾಡ ಕಟ್ಟು ಪಾಡನು !
ಇಂದಿನ ನುಡಿ ಗುಡುಗು ಸಿಡಿಲು
ಅದಕದೋ ! ಅವಿದ್ಯೆ ಮಡಿಲು.
ನಾಡೆದೆ ಮಂಥಿಸುತ್ತ ತರುವ
ಚಂದ್ರನಂಥ ಕೋಡನು !
ಹೋಗಲಿ ಬಿಡು ನೆನೆವುದೇಕೆ
ಹಿಂದೆ ಬಂದ ಕೇಡನು !
೪
ನೋಡು ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
ನಾಡಿನೊಲವ ನಾಡ ಗೆಲುವ
ಕೊರಲತುಂಬ ಸಾರುತಿವೆ.
ಉಜ್ಜೀವನದುಡ್ಯಾಣದಿ
ತಮ್ಮನೆ ತಾವ್ ಮೀರುತಿವೆ :
ಇರಲಿದೆಮ್ಮ ಜೀವನ
ಆಗಲಿಂತು ವಾವನ
ನೋಡು! ದಿವ್ಯ ಭವ್ಯ ಶಕ್ತಿ
ಕಾಳನೊಡನೆ ಹೋರುತಿವೆ!
ಮತ್ತೆ ನನ್ನ ನಿನ್ನ ಜೀವ
ರೆಕ್ಕೆ ಬಲಿತು ಹಾರುತಿವೆ
*****