(ಭಾರತ ಸ್ವಾತಂತ್ರ್ಯೋದಯದ ರೂಪಕ)
ಇದೊ, ಶ್ರಾವಣಬಂದಿದೆ ಭೂವನಕೆ,
ಜನಜೀವನ ಪಾವನ ಗೈಯಲಿಕೆ-
ಇದೊ, ಶ್ರಾವಣ ಬಂದಿದೆ ಭಾರತಕೆ !
೧
ತೆರಳಿತು ವೈಶಾಖದ ಬಿರುಬಿಸಿಲು,
ಸರಿಯಿತು ಮೃಗಜಲದಾ ಹುಸಿಹೊನಲು ;
ಮರೆಯಾಯಿತು ಸುಟ್ಟುರೆಗಳ ಹೊಯಿಲು,
ಬರಿ ಬಾನೊಳು ತುಂಬಿದೆ ನೀರ್ ಮುಗಿಲು !
ಬರಗಾಲದ ಬಾಧೆಯ ಹಣಿಯಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ !
೨
ಮುಂಗಾರಿನ ಕಾರ್‍ಮೋಡದ ಕೂಟ….
ಮುನ್ನೀರಲೆಗಳ ತಾಂಡವದಾಟ….
ಕಂಗೆಡಿಸುವ ಕೋಲ್ಮಿಂಚಿನ ಕಾಟ….
ಹಿಂಗಿದುವೋ ಸಿಡಿಲಿನ ಗುಡುಗಾಟ-
ಸಮಯೋಗದ ಸರಿಯನು ಸುರಿಸಲಿಕೆ
ಇದೊ, ಶ್ರಾವಣ ಬಂದಿದೆ ಭೂತಲಕೆ !
೩
ಕಾಡುವ ತಗರಿನ ಕೊಂಬನು ಕಳೆದು….
ಹೋರುವ ಹೋರಿಯ ಹಮ್ಮನು ಹಿಳಿದು….
ಹೆಣ್-ಗಂಡನು ಹುರುಪಿಸಿ ಮನಸೆಳೆದು….
ರಣಹೇಡಿ ಏಡಿಯಾ ತಲೆ ತುಳಿದು….
ಮೃಗರಾಜನ ಮೈ ಗುಣ ಮೆರೆಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!
೪
ಬಾನೊಳು ತುಂಬಿದೆ ಜೀವನ ಜಲವು….
ಬುವಿಯೊಳು ತಂಗಿದೆ ಬೆಳಕಿನ ಬಲವು….
‘ಏಳಲಿ, ಏಳಲಿ, ಕೃಷಿಕರ ಕುಲವು’ …
ಗಾಳಿ ಕೂಗುತಿದೆ ಕೇಳದೆ ಉಲಿವು ?
ನಮ್ಮೆಲ್ಲರ ಹಸಿವನ್ನು ತಣಿಸಲಿಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ !
೫
ಬರತ ತೊರೆಗಳದೊ, ಸೂಸಿ ಹರಿದಿವೆ….
ಅರತ ಕೆರೆಗಳಗೊ, ತುಂಬಿ ಮೆರೆದಿವೆ….
ಬರಡು ಬಳ್ಳಿ-ಗಿಡ ಚಿಗಿತು ನಗುತಿವೆ…
ಬರಿಹೊಲ-ನೆಲ ಸಸಿ-ಹಸಿರನುಗುತಿವೆ….
ಚೆಲುವಿಂಗೆ ಗೆಲವ ತಾನೀಯಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!
೬
‘ಬಂದಿದೆ ಗೆಳೆಯರೆ ನಲ್ಮಳೆಗಾಲ….
‘ತಂದಿದೆ ಬಲ್‌ಬೆಳಸಿಗೆ ಹದಗಾಲ….
‘ಉಳುಮೆ-ಬಿಗೆಗೆ ಇದುವೆ ಸಕಾಲ….
‘ಕಳೆದುಕೊಳ್ಳದಿರಿ, ನಿಮ್ಮಯ ಪಾಲ’ –
ಇಂತೊರೆದು ಜಗವ ಜಾಗರಿಸಲಿಕೆ-
ಇದೊ, ಶ್ರಾವಣ ಬಂದಿದೆ ಈ ನೆಲಕೆ!
೭
ಶ್ರಾವಣದೀ ಶುಭಯೋಗವೆಂಧದೋ
ದೇವಭಾವ ತಲೆಯೆತ್ತಿ ನಿಂತುದೋ!
ಹಾವು-ಹುಳುವನೂ ದೇವರು ಎನುವ …
ಭಾವನೆಯಲಿ ಜನ ಪೂಜಿಸುತಿಹುದೊ ?
ಆ ದೇವನ ಮಹಿಮೆಯ ಗಾಯನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!
೮
ಕನಸಿರದಾ ನಿದ್ದೆ ಯನೋಡಿಸುತ….
ಮನದಾಶೆಗೆ ಕುಸುರನು ಮೂಡಿಸುತ…
ಮನುಕುಲವನೆ ಉಯ್ಯಲೆಯಾಡಿಸುತ…
ಕಣಸಿನ ಕತೆಗಳ ಕೊಂಡಾಡಿಸುತ-
ಸವಿಯೊಲವನು ಹಂಚುತ ಮನಮನಕೆ-
ಇದೊ, ಶ್ರಾವಣ ಬಂದಿದೆ ಭೂವನಕೆ!
೯
ಬರಲಿದೆ ಮಾನವಮಿಯ ಬಲರಾಗ
ಕರೆದಿದೆ ಗೆಲವಿನ ದಸರೆಯ ಭೋಗ….
ತರಲಿದೆ ಇದೆ ದೀವಳಿಗೆಯ ಯೋಗ….
ಬೆಳಕಿನ ರಾಜ್ಯವೆ ಇಳೆಯೊಳಗಾಗ..
ಆ ಬೆಳಕಿನ ದಾರಿಯ ತಿಳುಹಲಿಕೆ-
ಇದೊ, ಶ್ರಾವಣ ಬಂದಿದೆ ಭೂತಲಕೆ!
* * *
ಜನಜೀವನ ಪಾವನ ಗೈಯಲಿಕೆ
ಇದೊ, ಬಂದಿದೆ ಶ್ರಾವಣ ಭಾರತಕೆ!
*****