ಮನಸಿನಾಳದಿಂದ
ಎದ್ದ ಬುದ್ಧ ಈಗ
ಮತ್ತೆ ಬಂದಿದ್ದಾನೆ.
ಮೊದಲಿನಂತೆಯೇ
ರಾತ್ರಿಯಿಡೀ ದಿಟ್ಟಿಸಿನೋಡುತ್ತಾ
ನೂರು ಗೊಂದಲಗಳ
ಮೂಡಿಸಿ ಕಾಡುತ್ತಾನೆ.
ಕೇಳುತ್ತಾನೆ ಒಂದೇ ಪ್ರಶ್ನೆ
“ಈಗ… ಈಗ ಬರುವೆಯಾ ನನ್ನೊಡನೆ?”
ನನ್ನದು ಮತ್ತದೇ
ಹಳಸಲು ಕಾರಣಗಳು
ಅವನಿಂದ ತಪ್ಪಿಸಿಕೊಳ್ಳಲು
ಬದುಕಿನಾಮಿಷದ ನೆವಗಳು!
ನಗುತ್ತಾ ಒಳಹೋಗಿ ಬಿಡುತ್ತಾನೆ
ಆ ನಗೆಗೆಷ್ಟು ಅರ್ಥಗಳು!
ನಿತ್ಯವೂ ಕಾದೆಣ್ಣೆಯಲಿ
ಸಿಡಿದು ಸತ್ತರೂ
ಸಾವಿರ ಸಾಸಿವೆಗಳು
ವೈರಾಗ್ಯೋದಯವಾಗುವುದಿಲ್ಲ
ಹೊತ್ತಿಗೆಯ ಕೊನೆಯ
ಪುಟದವರೆಗೂ ತಿರುವದೇ
ಕೊಡ ತುಂಬಬೇಕಲ್ಲಾ!
ಆದರೂ ಅಂದಿನಂತೆಯೇ
ಮತ್ತೆ ಮತ್ತೆ
ಮನಸಿನಾಳದಿಂದೆದ್ದು
ಬುದ್ಧ ಬರುತ್ತಾನೆ
‘ಈಗ… ಬರುವೆಯಾ?’ ಕೇಳುತ್ತಾನೆ.
ನಾನೀಗ ಅನುಮಾನಿಸುತ್ತಾ
ಮತ್ತದೇ ಸತ್ತ ಉತ್ತರ
ಗಳಹುತ್ತೇನೆ
ಆದರೆ ಏಕೋ
ಇತ್ತೀಚೆಗವನು ನಗುವುದಿಲ್ಲ!
ಮಹಾಮೌನಿಯಾಗಿದ್ದಾನೆ
ನಾನು ಹೆದರುತ್ತೇನೆ
ಬಹುಶಃ ಅವನು ಬೆಳೆದಿದ್ದಾನೆಂದು
ಅವನೊಂದಿಗೆ
ಆಳಕ್ಕಿಯುವುದು ಸುಲಭದ ಮಾತೇ?
*****