ನಿನ್ನ ನಾನರಿಯೆನೈ ಅರಿಯೆ ಅರಿಯೆ,
ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ.
ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು,
ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ.
ನನ್ನಿ ರವ ಜಗದಿರವನೆಲ್ಲವನು ಮೀರಿರುವ
ನಿನ್ನಿರವ ಮರ್‍ಮವನು ಎಂತರಿವೆ ಹರಿಯೇ?
ನಿನ್ನ ನಾನರಿಯೆನೈ ಅರಿಯೆ ಅರಿಯೆ,
ಸಣ್ಣ ಹನಿ ಸಾಗರವನರಿಯದೊಲು ಹರಿಯೇ.
ವಿಶ್ವಗಳ ವೈಶಾಲ್ಯ, ವೈಚಿತ್ರ್ಯ, ಶಾಶ್ವತತೆ-
ನಶ್ವರತೆ ಈ ಬಾಳ- ಎಲ್ಲಿಗೆಲ್ಲಿ?
ವಿಶ್ವ ಸತ್ತ್ವವೆ, ನಿನ್ನ ಸಾರವೇ ನಾನೆಂದು
ವಿಶ್ವಾಸವಿಡಬಹುದೆ? ನನ್ನಿಯೇ ದೊರೆಯೆ?
ನಿನ್ನ ನಾನರಿಯೆನೈ ಅರಿಯೆ ಅರಿಯೆ,
ಹೆಮ್ಮರವ ಚಣಬಾಳ ಮಲರಂತೆ ಹರಿಯೇ.
ಚಲನ ವಲನದ ಹಕ್ಕು ಕಸಿಯದಲೆ, ತೋರದಲೆ,
ಇಳೆಯ ಕರ್‍ಷಣಶಕ್ತಿ ಜನವ, ಜಗವ
ಸೆಳೆವಂತೆ, ನಿನ್ನಿಚ್ಛೆ ನನ್ನರಿವ ಬಳಸಿಹುದ
ತಿಳಿಯದಲೆ, ಸ್ವಾತಂತ್ರ್ಯಕಂಜುವೆನು ಹರಿಯೇ.
ನಿನ್ನ ನಾನರಿಯೆನೈ ಅರಿಯೆ ಅರಿಯೆ,
ನಿನಗೆ ನಾ ಹೊರಗೆಂಬ ಹುಸಿ ಭಯದಿ, ದೊರೆಯೇ,
ನಿನ್ನ ನಾನರಿಯೆನೈ ಅರಿಯೆ ಅರಿಯೆ.
*****