ಹಿಂಬಳಿ ಮುಂಬಳಿ ಗಂಧದ ಗೀರಾ
ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ
ಜಾತ ಮಲ್ಲಿಗಿ ಜಾಳಿಗಿ ದಂಡಿ
ವಾನ್ಯಾಡು ತುರುಬ ಒನಪಿಲಿ ಕಟ್ಟಿ
ಖನ್ನಿ ಕೋಮಽಲಿ ಹಸೀಗೇಳಽ ಸೋ ||೧||
ನೀರೆಯ ಬಾವುಲಿ ಲಿಗಿಲಿಗಿನಾಡುತ
ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ
ಹೊನ್ನಾ-ಭರಣಾ ಹರಡಿಗಿ ಮಲಕಽ
ಹೊನ್ನ ಪುತ್ತಳಿ ರುಳಿ ಸರಿಗಿಟಗೊಂಡು
ಕೋಗಿಲ ಮದ್ದಾಽನೇ ಹೆಸಿಗೇಳಽ ಸೋ ||೨||
ಇದುರಿನ ಮನಿಯೆ ಬಿದರೊಂಕೆವರ
ಮನ್ನುಸಿದಾರ ಮನಿ ಹೊಕ್ಕವರ
ಹತ್ತು ಮಂದಿಲಿ ಪಂತಿಲಿ ಕುಂಡ್ರೋ
ಚಿತ್ತಬಲ್ಲಬೋ ಶಿವಶಂಕರಗ
ಚಿತ್ರಾಂಗದರಸಾ ಹಸೀಗೇಳೋ ಸೋ ||೩||
ನಿಲಗುದರೆಂಬೋ ತೇಜಿಯನೇರಿ
ಮದನಾರಿ ಬಂದು ಬಾಗಿಲ್ಗಿ ನಿಂತಽ
ವಾರಿಗಿ ಗೆಳೆದ್ಯಾರು ಒಡಗೊಂಡು ಕರದರ
ಬಾ ಎನ್ನ ಮಡಽದೀ ಹಸಿಗೇಳಽ ಸೋ ||೪||
ಇಂಜನ ಮಳಿಯ ಗಂಧದ ಗೀರ
ಇಂದ್ನಮ ತಂಗೆಮನ ಗಂಡನ ಸದರಽ
ಇಂದ್ರನ ಖಳಿಯುಳ ಚಂದ್ರನ ಮಗಳ
ಇಂದ ಮನ್ನ ಸರೇ ಶುಬಽದಿಂದ ಸೋ ||೫||
*****
ಈ ಹಾಡಿನಲ್ಲಿ ಮೊದಲಿನ ಎರಡು ನುಡಿಗಳಲ್ಲಿ ಕನ್ನೆಯ ಅಲಂಕಾರ ವರ್ಣನೆಯಿದೆ. ಮೂರನೆಯ ನುಡಿಯಲ್ಲಿ ವರನ ಘನವಂತಿಕೆಯನ್ನು ಹೇಳಿದೆ. ನಾಲ್ಕನೆಯ ಮತ್ತು ಐದನೆಯ ನುಡಿಗಳಲ್ಲಿ ಕನ್ನೆಯನ್ನು ಗೆಳತಿಯರು ಮನ್ನಿಸುತ್ತಾರೆ.
ಛಂದಸ್ಸು:- ಮಂದಾನಿಲ ರಗಳೆ.
ಶಬ್ದಪ್ರಯೋಗಗಳು:- ಗಿರಾಕಿ=ಹರದಿ (ಸುಂದರಿ). ವಾನ್ಯಾಡು ತುರಬ=ಅಲೆದಾಡುವ ಮುಡಿ. ವನಪಿಲೆ=ಒಯ್ಯಾರದಿಂದ. ಖನ್ನಿ=ಕನ್ನೆ. ಚಿತ್ತ ಒಲ್ಲಬೊ=ಚಿತ್ತವಲ್ಲಭ (ಪ್ರೀಯ). ನಿಲಗುದರಿ=ನಿಲುವಿಕೆಯುಳ್ಳೆ ಕುದುರೆ. ಮದನಾರಿ=ಯೌವನೆ. ಸದರ=ಸರಿಗದ್ದುಗೆ. ಇಂಜನ ಮಳಿಯ ಗಂಧದ ಗೀರ=ಭೋರಮಳೆಯ ಹಸಿಯ ಧಾರೆಗಳಂತೆ ಒಪ್ಪುವ ಗಂಧದ ಗೀರುಗಳು (ಕೈಗೆ).