ನಮ್ಮ ದೇಶದಲ್ಲಿ ಪೆಟ್ರೋಲ್, ಡಿಸೆಲ್ ಆಮದಿನ ಮೇಲೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ವ್ಯಚ್ಚವಾಗುತ್ತದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ. ಇದಕ್ಕಿಂತಲೂ ಮಿಗಿಲಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯವನ್ನು ನಾವೇ ತಂದು ಕೊಂಡಂತಾಗುತ್ತದೆ. ಇದೆಲ್ಲ ಸಮಸ್ಯೆಗಳಿಗೆ ಮಾರ್‍ಗೋಪಾಯ ಕಂಡು ಹಿಡಿಯಲಾಗಿದೆ. ಪೆಟ್ರೋಲಿಯಂ ಇಂಧನಗಳ ಬದಲಿಗೆ ಸಸ್ಯಗಳಿಂದ ಉತ್ಪತ್ತಿಯಾಗುವ ಜೈವಿಕ ಇಂಧನವನ್ನು ಬಳಸುವುದು. ಹೀಗೆ ಹಲವಾರು ಸಸ್ಯಗಳ ಎಣ್ಣೆಗಳನ್ನು ಬದಲಿ ಇಂಧನವಾಗಿ ಬಳಸಬಹುದುದಾಗಿದೆ. ಇವುಗಳಲ್ಲಿ ಹೊಂಗೆ ಎಣ್ಣೆ ಪ್ರಮುಖವಾಗುತ್ತದೆ. ಬಹು ಉಪಯೋಗಿ ಹೊಂಗೆಮರ ರೈತರಿಗೆ ಉಪಕಾರಿಯಾಗಿದೆ. ಈ ಮರವು ದೇಶದೆಲ್ಲೆಡೆ ಬೆಳೆಯುತ್ತದೆ. ಹೆಚ್ಚಾಗಿ ಮಳೆ ಕಡಿಮೆ ಬೀಳುವ ಎಲ್ಲ ತರಹದ ಭೂಮಿಗಳಲ್ಲಿ ಹೇರಳವಾಗಿ ಹುಲುಸಾಗಿ, ಬೆಳೆಯುತ್ತದೆ. ಈ ಹೊಂಗೆಮರದ ಶಾಸ್ತ್ರೀಯ ಹೆಸರು “ಪೊಂಗೆಮಿಯಾ ಪಿನ್ನೇಟಿ” ಎಂದು ಕರೆಯುತ್ತಿದ್ದು, ಇದರ ಬೀಜದಿಂದ ಬರುವ ಎಣ್ಣೆಯನ್ನು ಸಾಂಪ್ರದಾಯಿಕ ದೀಪ ಬೆಳೆಗಿಸಲು ಔಷಧಿ ರೂಪದಲ್ಲಿ ಉಪಯೋಗಿಸುತ್ತಾರೆ. ಇದರ ಎಣ್ಣೆಯನ್ನು ಡಿಸೆಲ್‌ಗೆ ಬದಲಾಗಿ ಬಳಸುವ ಸಂಶೋಧನೆ ಯಶಸ್ವಿಯಾಗಿದೆ. ಜತೆಗೆ ದೇಶಿ ತಯಾರಿಕೆಯುಳ್ಳ ಬಹು ಉಪಯೋಗಿ ವಸ್ತು ಕೂಡ ಆಗಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಕಾರು, ಟ್ರಾಕ್ಟರ್, ಗಿರಣಿಗಳಿಗೆ ಈ ಎಣ್ಣೆಯನ್ನು ಹಾಕಿ ಓಡಿಸಬಹುದು. ಇದಕ್ಕೆ “ಜೈವಿಕ ಡಿಸೆಲ್” ಎಂದೇ ಕರೆಯುತ್ತಾರೆ.
ಈ ಹೊಂಗೆಮರಗಳನ್ನು ನಮ್ಮ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಬೆಳೆಸಬಹುದು. ದಾರಿಯುದ್ದಕ್ಕೂ ಹಾಕಬಹುದು. ಒಳ್ಳೆಯ ನೆರಳಿನ ಮರಕೂಡ. ಇದರ ಎಣ್ಣೆಯಿಂದ ಕೃಷಿ ಆಧಾರಿತ ಸಣ್ಣಸಣ್ಣ ಕೈಗಾರಿಕೆಗಳಿಗೆ ಉಪಯೋಗಿಸಲು ಇತ್ತೀಚೆಗೆ ಹೆಚ್ಚಿನ ಮಹತ್ವ ಬರುತ್ತಿದೆ.
ಡಿಸೆಲ್‌ಗೆ ಬದಲಾಗಿ ಈ ಎಣ್ಣೆಯನ್ನು ಬಳೆಸಿದರೆ ದುಬಾರಿ ಹಣ ನೀಡಿ, ಪೆಟ್ರೋಲ್ ಡಿಸೆಲ್ ತರಬೇಕಿಲ್ಲ. ಗ್ರಾಮೀಣ ಕೈಗಾರಿಕೆಗಳಲ್ಲಿಯೇ ಈ ಎಣ್ಣೆಯನ್ನು ತಯಾರಿಸಬಹುದು. ಕೃಷಿ ಕಾರ್‍ಯಗಳು ಸುಲಭವಾಗಿ, ಸಮಯ ಉಳಿಯುತ್ತದೆ. ಹೊಂಗೆ ಎಣ್ಣೆ ತೆಗೆದ ನಂತರ ಉಳಿಯುವ ಹೂಂಗೆಹಿಂಡಿ ಜಮೀನುಗಳಿಗೆ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಇಳುವರಿ ಕೂಡ ಹೆಚ್ಚಾಗುತ್ತದೆ. ಹೊಂಗೆ ಹಿಂಡಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ತೇವಾಂಶ ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ ಮತ್ತು ಮಣ್ಣಿನ ಸಂಪೂರ್‍ಣ ಆರೋಗ್ಯ ಕಾಪಾಡುತ್ತದೆ. ರಸಗೂಬ್ಬರಕ್ಕಾಗಿ ಮಾಡುತ್ತಿದ್ದ ವೆಚ್ಚ ಕಡಿಮೆಯಾಗುತ್ತದೆ.
ಹೊಂಗೆ ಎಣ್ಣೆಯಿಂದ ಉಗಳುವ ಹೊಗೆಯಲ್ಲಿ ವಿಷಾಧಾರಿತ ಆಮ್ಲಗಳು ಕಡಿಮೆ ಇರುತ್ತವೆ ಎಂದು ಕಂಡು ಹಿಡಿಯಲಾಗಿದೆ. ವಾಯುಮಾಲಿನ್ಯ ಕಡಿಮೆಯಾಗಿ ಆರೋಗ್ಯಕರ ಪರಿಸರ ನಿರ್‍ಮಾಣವಾಗುತ್ತದೆ. ಈ ಸತ್ಯವನ್ನು ನಮ್ಮ ವಿದ್ಯಾವಂತ ರೈತರು, ಪ್ರಗತಿಪರ ಕೃಷಿಕರು ಚಿಂತನೆ ಮಾಡಿ ಹೊಂಗೆ ಎಣ್ಣೆಯಿಂದಾಗುವ ಮಹತ್ವವನ್ನು ಅರಿಯಬೇಕಿದೆ. *****