ಸರಸಿಯ ದಡದೊಳು ಹೊಂಗೆಯ ನೆಳಲೊಳು
ಗರುಕೆ ಮೆತ್ತೆಯ ಮೇಲೆ ಉರುಳಿ,
ಹರುಷದ ಮುದ್ದೆಯೆ ತಾನೆಂಬ ತೆರದೊಳ-
ಗಿರುವನು ರಾಮಿಯ ಗಂಡು.
ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ-
ಇಲ್ಲ ಬಾಂಧವ್ಯದ ಅಂಟು.
ಎಲ್ಲವು ಆ ಕಂದನೊಬ್ಬನೆ ಬಾಳಿನೊ-
ಳುಲ್ಲಸ ಹೂಡುವ ನಂಟು.
ಹಸುರೊಳಗಾಡುವ ಕಂದನ ನೋಡುತ
ಬಸಿರನ್ನು ನೆನೆವಳು ರಾಮಿ-
ಕಸಕಿಂತ ಹೀನನು ತನು ಮನ ಮಾನವ
ಕಸಿದುಕೊಂಡಾ ಹಳೆ ಕತೆಯ.
ನೋಟಕ್ಕೆ ರೂಪಿಲ್ಲ, ಕೂಟಕ್ಕೆ ಸಮನಲ್ಲ,
ಬೇಟಕ್ಕು ನಯವಿಲ್ಲ ಕನಕ.
ಮಾಟಗಾರಿಕೆಯೇನೊ? ಬಲ್ಲಳೆ? ಆವುದೊ
ಹೂಟದಿ ಗೆದ್ದನು ತನ್ನ.
“ರಾಮಿ, ನನ್ನೊಲುಮೆಯೆ, ನನ್ನೆದೆ ಹಣತೆಯೆ,
ಕಾಮಿಸಿ ಬಂದಿಹೆ ನಿನ್ನ,
ಪ್ರೇಮದ ಚಿಲುಮೆಯ ಚಿಮ್ಮಿಸುತೀ ಮರು-
ಭೂಮಿಯ ದಾಹವ ತಣಿಸು.
“ಮನೆ ಇದೆ- ಆದೊಡೆ – ದೀಪ ಹಚ್ಚುವರಿಲ್ಲ,
ದನ ಕರು ಹೊಲ ಗದ್ದೆ ವ್ಯರ್‍ಥ.
ಮನೆಸಿರಿಯಾಗು ಬಾ, ಬದುಕಿಗೆ ಬೆಳಕಾಗು,
ಮನದನ್ನೆ, ಬಾಳಿನ ಕಣ್ಣೆ.”
ಕನಕ ಸಾಮಾನ್ಯನೆ? ಒಲಿಸಲಿದೇ ಮೊದಲೆ?
ಪ್ರಣಯಿಗಳೊಳು ಕಡುಜಾಣ.
ಇನಿದಾಯ್ತು, ರಾಮಿಯ ಕಿವಿಗತವ ಹೊಯ್ದಿ.
ತನುನಯದಾ ಸವಿಸೊಲ್ಲು.
ಬಿಟ್ಟಳು ತೌರೂರ, ನೆಚ್ಚಿದ ತಂದೆಯ,
ದಿಟ್ಟ ಕನಕಣ್ಣನ ಮೆಚ್ಚಿ,
ಕಟ್ಟುಂಟೆ ಪ್ರಾಯದೊಳುಕ್ಕುವ ಮೋಹಕೆ?
ದುಷ್ಟನ ಹುಚ್ಚಿ ನೆಚ್ಚಿದಳು.
ದಿನ ದಿನ ಊರೂರನಲೆಯುತ ಕಳೆದರು.
ಕನಕನ ಮನೆಮಠವೆಲ್ಲಾ
ಕನಸಿನ ಗಂಟಾಯ್ತು, ರಾಮಿಯ ಕನಸೊಡೆ-
ದನುತಾಪದುರಿ ತಾಗಿತೆದೆಗೆ.
ಕಾಮಿ ಬಿಟ್ಟೋಡಿದನಬಲೆಯ ಸತ್ರದಿ
ಕಾಮದ ಬಿಸಿಯಾರಿಹೋಗೆ,
ಭೀಮಭವಾರ್‍ಣವದೊಳಗೀಜಲಿಬ್ಬರೆ:
ರಾಮಿ- ಮತ್ತಾಕೆಯ ಪಾಪ!
ಹತ್ತಿರ ಕರೆದಳು ಮೋಹದ ಮುದ್ದನ,
ಮುತ್ತಲು ಕಂಬನಿ ಕಣ್ಣ.
ಕತ್ತನಾಲಿಂಗಿಸಿ ಮುಡಿಯ ನೇವರಿಸುತ್ತ-
ಲೊತ್ತಿದಳಧರವ ತಲೆಗೆ.
“ಒಲುಮೆಯ ಕುರುಡಿಗೆ ಬಲಿಯಾದೆವಿಬ್ಬರು,
ಬಳುವಳಿಗೀ ಬಾಳೆ ನಿನಗೆ?
ಕುಲವಿತ್ತೆ, ರೂಪಿತ್ತೆ, ಶೀಲವೆ ಕನಕಗೆ?
ಹುಲುಮನುಜಗೆ ನಾನೆಂತೊಲಿದೆ?
“ಪ್ರಣಯ ಪ್ರಪಾತಕ್ಕೆ ಧುಮುಕೆಂದು ನಚ್ಚೊಂದು
ಕೆಣಕಿತೊ ಮನವ? ನಾನರಿಯೆ.
ಕನಕನ ನೆಮ್ಮುವ ನರಕವೆ ಬಾಗಿಲೊ,
ಗಿಣಿ, ನಿನ್ನ ನಪ್ಪುವ ದಿವಕೆ?
“ಒಲುಮೆಯ ಹುಚ್ಚೊಳು ನೀ ಬಹ ನೆಚ್ಹಿತ್ತೊ?
ಒಲಿದೆನೊ ನಿನಗಾಗಿ, ಚಿನ್ನ?”
ಬಲು ಮೋಹದಿಂದಣುಗನ ಮುತ್ತಿಟ್ಟಳು ರಾಮಿ-
ಇಳೆಯೊಳು ತನ್ನೊಂದೆ ನಚ್ಚ.
*****