ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ
ದೇವರಿಲ್ಲದ ದೇಗುಲಕ್ಕೆ ಮಂತ್ರ ಅಭಿಷೇಕವುಂಟೆ
ಅರಿವು ನಷ್ಟವಾಗಿ
ಕುರುವಿನ ಹಾವಚೆಯ ನಾನರಿಯೆನೆಂದನಂಬಿಗ ಚವುಡಯ್ಯ
ಮಾತನಾಡುವುದು ಗಿಣಿ ಮಾತ್ರ, ಪಂಜರವಲ್ಲ. ಅಭಿಷೇಕ ದೇವರಿಗೇ ಹೊರತು ದೇಗುಲಕ್ಕಲ್ಲ. ಪಂಜರ, ದೇಗುಲ ಇವು ಕೇವಲ ಕುರುಹುಗಳು. ಅರಿವಿಲ್ಲದ ಕುರುಹು ಕೇವಲ ಹಾವಸೆ, ಅಥವಾ ಪಾಚಿ, ಅದರ ಹಂಗು ಬೇಡ ಅನ್ನುತ್ತಾನೆ ಅಂಬಿಗ ಚವುಡಯ್ಯ.
ಇದೇ ಮಾತನ್ನು ಮುಂದುವರೆಸಿದರೆ ಕವಿತೆ ಮುಖ್ಯವಾಗಬೇಕಲ್ಲದೆ ಕವಿಯಲ್ಲ, ಕಾರ್ಯ ಮುಖ್ಯವಾಗಬೇಕಲ್ಲದೆ ಕರ್ತೃವಲ್ಲ, ಅಡುಗೆ ಮುಖ್ಯವಾಗಬೇಕಲ್ಲದೆ ಅಡುಗೆಯವರಲ್ಲ, ತಜ್ಞತೆ ಮುಖ್ಯವಾಗಬೇಕಲ್ಲದೆ ತಜ್ಞರು ಅಲ್ಲ ಎಂದು ಎಷ್ಟು ಬೇಕಾದರೂ ಹೇಳಬಹುದು.
ಹಾಗೆ ಎರಡನ್ನೂ ಬಿಡಿಸಿ ಬಿಡಿಸಿ ನೋಡಲು ಆಗುವುದೇ? ಕವಿತೆಯನ್ನು ನಿಂದಿಸಿದರೆ ಕವಿ ನೋಯುವುದಿಲ್ಲವೇ? ಮಾಡಿದ ಕೆಲಸ ಅಸಮರ್ಪಕ ಎಂದರೆ ಮಾಡಿದವರಿಗೆ ಬೇಸರವಾಗದೇ? ತಜ್ಞತೆಯನ್ನು ಪ್ರಶ್ನಿಸಿದರೆ ತಜ್ಞರು ಕೆರಳರೇ? ಬಿಡಿಸಿ ನೋಡುವ, ಒಟ್ಟಾಗಿ ಅರಿವ ಹದ ತಿಳಿಯಬೇಕೆನ್ನುವುದೇ ವಚನಗಳ ಮುಖ್ಯ ಉದ್ದೇಶಗಳಲ್ಲಿ ಒಂದು. ಕಷ್ಟ, ಆದರೆ ಅಸಾಧ್ಯವೇ? ವ್ಯಕ್ತಿಯನ್ನು ಟೀಕಿಸದೆ ವ್ಯಕ್ತಿಯ ಕಾರ್ಯವನ್ನು ಮಾತ್ರ ಟೀಕಿಸುವ ಪ್ರೀತಿ ಸಾಧ್ಯವಾದರೆ ಎಷ್ಟು ಚೆನ್ನ!
*****