ರಾಮಾ ನನ್ನ ಬಾಳಿಗೆ ನೀನಾಸರೆ
ನಿನ್ನ ಸಾನಿಧ್ಯವೇ ಪರಮ ಸುಖ
ಆಸೆಗಳು ಏಕೆ ಮತ್ತು ನಿರಾಸೆಗಳೇಕೆ
ನೀನಿರುವಾಗ ನನ್ನ ಹಗಲಿರುಳ ಸಖ
ಭವದ ಮೋಹ ಎನಗೆ ಕಾಡಿದೆ
ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ
ನನ್ನೊಳಗಿನ ಆತ್ಮನ ಮರೆತು
ವಿಷಯ ಸುಖಗಳತ್ತ ಮನ ಓಡಿದೆ
ಕ್ಷಣವೂ ಏಕಾಗ್ರವಾಗದ ಈ ಮನ
ಯಾವುದೇನೋ ಬೇಡಲು ನಿತ್ಯಕಾತರ
ರಾಮಾ ಮನದ ಮರ್‍ಕಟ ತನಕೆ ಬಂಧಿಸು
ಮರೆಸಿ ಬಿಡು ಹೀನಾಲೋಚನೆಯ ಪೂರ್‍ವೋತ್ತರ
ಮನದ ಯಾವ ಮೂಲೆಗೆ ಮೈಲಿಗೆ ಬೇಡ
ಮನದ ಹೊರ ನೋಟಕ್ಕೆ ಕಡಿವಾಣ ಹಾಕು
ಅಂತರದತ್ತ ಮನಕ್ಕೆ ತಿರುಗಿಸಲುಬೇಕು
ಸತ್‌ಚಿತ ಆನಂದ ಅನುಭವಿಸಬೇಕು
ಮನದಾಸೆ ಮಾಯೆಗೆ ನಿತ್ಯ ಬಲಿಬಿದ್ದು
ಅನೇಕ ಹುಟ್ಟು ಸಾವುಗಳಿಗೆ ಕಾರಣನಾದೆ
ಅಂತಲೆ ನಾನೀಗ ಮನ ಓಲೈಸಲಾರೆ
ಮಾಣಿಕ್ಯ ವಿಠಲನ ನೆನೆದ
*****