ಮೈಸೂರಲ್ಲಿ ನವರಾತ್ರಿ ಬಂತು. ಶಾಲೆಗಳನ್ನೆಲ್ಲಾ ಮುಚ್ಚಿದರು. ಮುಚ್ಚುವ ದಿನಸ ಉಪಾಧ್ಯಾಯರು-ಬಂದು “ನಾಡಿದ್ದು ಶ್ರಿಮನ್ಮಹಾರಾಜರು ಒಂಭತ್ತು ಘಂಟೆ ಸರಿಯಾಗಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುವರು. ಆ ವೇಳೆಯಲ್ಲಿ “ನಾವೆಲ್ಲರೂ ಹೋಗಿ ಆ ಮಹೋತ್ಸವವನ್ನು ನೋಡಲಿ’ ಎಂದು ಅರಮನೆಯ ಮುಂದೆ ಮರದ ಮೆಟ್ಟಲು ಹಾಕಿಸಿರುವರು. ನಾವು ಅಲ್ಲಿ ಹೋಗಿ ಕುಳಿತುಕೊಳ್ಳ ಬೇಕಾದರೆ ಎಂಟಕ್ಕೆ ಸರಿಯಾಗಿ ಹೋಗಬೇಕು. ನೀವೆಲ್ಲರೂ ಸರಿಯಾಗಿ ಇಲ್ಲಿಗೆ ಏಳೂವರೆ ಘಂಟೆಗೆ ಬಂದು ಬಿಡಿ. ಹೊತ್ತಾಗಿ ಬಂದವರಿಗೆ ನೋಟವು ತಪ್ಪಿ ಹೋಗುವುದು” ಎಂದು ಹೇಳಿದರು.
ನವರಾತ್ರಿಯ ಪಾಡ್ಯದ ದಿನ ಎಲ್ಲರೂ ಸರಿಯಾಗಿ ಏಳೂವರೆಗೆ ಬಂದರು. ಪುಟ್ಟೂಗೆ ನೋಟವನ್ನು ನೋಡಲು ಹೋಗುವೆನೆಂಬ ಸಂತೋಷ. ಕಂಡಕಂಡವರಿಗೆಲ್ಲ “ಮಹಾರಾಜರು ಸಿಂಹಾಸನದ ಮೇಲೆ ಕುಳಿತುಕೊಳ್ಳುವುದನ್ನು ನೋಡಲು ನಾವೆಲ್ಲ ಹೋಗುತ್ತೇವೆ” ಎಂದು ಹೇಳಿಕೊಂಡು ಹೊರಟನು. ಇವನು ಶಾಲೆಗೆ ಬರುವುದರೊಳಗೆ ಎಂಟುಘಂಟೆ ಆಗಿ ಹೋಯಿತು. ಎಲ್ಲಾ ಹುಡುಗರನ್ನೂ ಕರೆದುಕೊಂಡು ಉಪಾಧ್ಯಾಯರು ಹೊರಟು ಹೋಗಿದ್ದರು. ಪುಟ್ಟೂಗೆ ಬಹಳ ದುಃಖವಾಯಿತು. ಅರಮನೆಯ ಮುಂದಕ್ಕಾದರೂ ಹೋಗೋಣ ಎಂದುಕೊಂಡು ಆತುರದಿಂದ ಓಡಿಹೋದನು. ಅಲ್ಲಿಯೂ ಹೊತ್ತಾಗಿ ಹೋಗಿತ್ತು. ಉಪಾಧ್ಯಾಯರು ಎಲ್ಲರನ್ನೂ ಕರೆದುಕೊಂಡು ಹೋಗಿ ಮರದ ಮೆಟ್ಟಿಲಿನ ಮೇಲೆ ಕುಳಿತುಬಿಟ್ಟಿದ್ದರು. ಎಲ್ಲಿ ನೋಡಿದರೂ ಜನ. ಎತ್ತಲಾಗಿ ಹೋದರೂ ಪೋಲೀಸಿನವರು. ಇವನನ್ನು ಕೇಳುವವರೇ ಇಲ್ಲ. ಪುಟ್ಟೂ ಪೆಚ್ಚು ಮುಖ ಹಾಕಿಕೊಂಡು ಎಲ್ಲಿಯೋ ನಿಂತಿದ್ದು ಮನೆಗೆ ಹೋದನು.
ಆವತ್ತು ತಾನು ಪಟ್ಟ ದುಃಖವನ್ನು ಮರೆಯಲಿಲ್ಲ. ಅಂದಿನಿಂದ ಅವನು ಎಲ್ಲಿಗೆ ಹೋಗಬೇಕಾಗಿರಲಿ ಹೊತ್ತಿಗೆ ಸರಿಯಾಗಿ ಹೋಗುವನು. ಶಾಲೆಗಂತೂ ಅವನು ಯಾವತ್ತೂ ಹೊತ್ತು ಮೀರಿ ಹೋಗಲಿಲ್ಲ.
*****