ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು
ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ
ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು
ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ
ಹೇಳುತ್ತಿದ್ದೀರಿ : ಲುಕ್ ಹಿಯರ್
ಆ ಅದೇ ಬೆಂಚಿನ ಮೇಲೆ ನಾನು ಕೂತಿದ್ದೆ
ಹನ್ನೆರಡು ವರ್ಷಗಳ ಹಿಂದೆ
ಬೀಜಗಣಿತ, ಪೈಥಾಗೋರಸನ ನಿಯಮ
ಭೂಮಿತಿಯ ಆರು ಪ್ರಮೇಯಗಳು
ಎಲ್ಲಾ ಕಲಿಯುತ್ತ ಮುಂದೆ
ಕಾಲೇಜಿಗೆ ಬಂದೆ, ಅಲ್ಲಿಂದ ಯೂನಿವರ್ಸಿಟಿ
ತ್ರಿವೇಂದ್ರಂ-ಬೆಂಗಳೂರು
ಇಲ್ಲಿ ನಾನಿಲ್ಲದಾಗ ನೀವು ಬಂದು
ಬದುಕು ಅದರಾಚೆಗಿನ ಹೋರಾಟ ನಡೆಸಿದಿರಿ
ನಾನು ಬಂದಾಗ
ಒಂದು ಲೆಕ್ಕ ಬಿಡಿಸಿದ ನಿರಂಬಳದಲ್ಲಿ
ಮಲಗಿದ್ದಿರಿ ನನ್ನ ಪ್ರೀತಿಯ ಗಣಿತದ ಟೀಚರ್
ನಿಮ್ಮನ್ನು ಅಭಿನಂದಿಸಲೆ ? ತಪ್ಪಾದೀತು
ನನ್ನ ಪ್ರೀತಿಯ ಅಪ್ಪ
ನಾನು ಮಾಡಿದ ತಪ್ಪ
ಕ್ಷಮಿಸುತ್ತಲೇ ಬಂದಿರುವೆ, ನಿನಗೀಗ ಐವತ್ತೇಳು
ನಿನ್ನ ಸಾತ್ವಿಕ ಕೆಚ್ಚು, ಜೀವ ಮಾಧುರ್ಯ
ಲವಲವಿಕೆ, ಜೀವನ ದೃಷ್ಟಿ
ಎಲ್ಲವೂ ಲುಕ್ ಹಿಯರ್, ಲುಕ್ ಹಿಯರ್
ಎಂದು ಕರೆದಂತಾಗುತ್ತಿದೆ ನನಗೆ
ನೀವೋ
ಭೂತಾಕಾರದ ಹಳದಿ ಕಂಪಾಸ್ ಹಿಡಿದು
ವೃತ್ತ ರಚಿಸುತ್ತೀರಿ, ವ್ಯಾಸ ಎಳೆಯುತ್ತೀರಿ
ಮತ್ತೆ
ಇವನ್ನೆಲ್ಲ ಮೀರುತ್ತಲೇ ಬಂದಿದ್ದೀರಿ
ನನ್ನ ಕೃತಜ್ಞತೆಗಳು ನಿಮಗೆ.
*****