ರಾಘವೇಂದ್ರ ಭಾರತಿ ಅಂಬೋ ಆಸಾಮಿಗೆ ಬಡಿದ ಗೋ-ಗ್ರಹಣ

ರಾಘವೇಶ್ವರ ಭಾರತೀ ಸ್ವಾಮಿ ಎಂಬ ಆಸಾಮಿಗೆ ದಿಢೀರನೆ ಗೋವುಗಳ ಮ್ಯಾಗೆ ಸೆಂಟ್ ಪರ್ಸೆಂಟ್ ಲವ್ ಹೆಚ್ಚಾಗಿ ಅವುಗಳ ಸಂರಕ್ಷಣೆಗಂತ ಭಾರತದಾದ್ಯಂತ ದಂಡಯಾತ್ರೆ ಹೊಂಟಿರೋದು, ಗೋವಿನ ಬಗ್ಗೆ ವಿಶ್ವ ಕೋಶನೇ ತರ್ತೀನಿ ಅಂತ ಶಂಕರಾಚಾರ್ಯರ ಮ್ಯಾಗೆ ಆಣೆ ಮಾಡಿರೋದು ಕಂಡು ಅಸಲಿಯಾದವರು, ರೈತರು ಹೌಹಾರಿ ಹೋಗ್ಯಾರೆ. ಗೋಮೂತ್ರ ಮಾತ್ರ ಕುಡಿದು ಗೊತ್ತಿರೋ ಸ್ವಾಮಿ, ಗೋವನ್ನ ಗುಡ್ಡಕ್ಕೆ ಹೊಡ್ಕೊಂಡು ಹೋಗಿ ಮೇಯಿಸಿ ತಂದು ದನದ ಕೊಟ್ಟಿಗೆನಾಗೆ ಕಟ್ಟಿ ಮುಸುರೆ ಇಕ್ಕಿ ಹಾಲು ಕರೆದು ಮಾರೋ ಮಂದಿಗಿಂತ ಡಬ್ಬಲ್ ಆಬ್ಬರ ಮಾಡ್ತಾ ಇರೋದ್ನ ನೋಡಿ ಹವ್ಯಕರೂ ಕಕ್ಕಾಬಿಕ್ಕಿಯಾಗ್ಯಾರೆ! ಕನಿಷ್ಠ ತನ್ನ ಜಾತಿ ಜನರ ಸಂರಕ್ಷಣೆ ಮರೆತು ದನಗಳ ರಕ್ಷಣೆಗೆ ಹೊಂಟಿರೋ ಬುದ್ಧಿಗೇಡಿತನಕ್ಕೆ ಶೂದ್ರ ಶಿಖಾಮಣಿಗಳಾದ ನಾವಾರ ಏನಂಬೋಣ? ಗೋವು ಯಾನೆ ಆಕಳು ಅರ್ಥಾತ್ ಹಸುನಾಗೆ ಮೂವತ್ತು ಮೂರು ಚಿಲ್ಲರೆ ಕೋಟಿ ದೇವತೆಗಳು ಕೊಂಬಿನಿಂದ ಬಾಲದವರೆಗೂ ಸೀಟ್ ರಿಸರ್ವ್ ಮಾಡಿಸಿಕೊಂಡು ಕುಂತಾರೆ ಅಂಬೋದ್ನ ಹಳೆಕಾಲದ ಫೋಟೋ ನೋಡಿದೋರ್ಗೆ ಡಿಸ್ಕರೈಬ್ ಮಾಡೋ ಆಗತ್ಯ ಇಲ್ ಬಿಡ್ರಿ. ಹಸು ಮೂತ್ರ ಸೆಗಣಿ ಹಾಲ್ನೂ ಕೊಡ್ತೇತೆ. ಅರ್ಧ ಬಹು ಉಪಯೋಗಿ ಅಂಬೋದಷ್ಟು ಸತ್ಯ. ಕೇಳಿದ್ದನ್ನೆಲ್ಲಾ ಕೊಡೋ ಕಾಮಧೇನು ಅಂಬೋದು ಮಿಥ್ಯ. ಹಸು ಏಟು ಉಪಕಾರಿನೋ ಎತ್ತು ಕೂಡ ಅಷ್ಟೇ ಉಪಕಾರಿ ಅಲ್ಲೇನ್ರಿ ಸ್ವಾಮಿ? ಲಿಂಗಾಯಿತರು ಅದನ್ನ ಬಸವ ಅಂತಾರೆ. ಪರಮೇಶ್ವರ ಸವಾರಿ ಮಾಡೋ ನಂದಿ ವೆಹಿಕಲ್ ಅಂತಾರಪ್ಪ. ಅದು ಭೂಮಿನ ಹೊಳ್ತೇತೆ, ಹದ ಮಾಡ್ತೇತೆ, ದವಸ ಧಾನ್ಯ ಹೊತ್ತು ಗಾಡಿ ಎಳೆಯುತ್ತ ರೈತನ ಆತ್ಮ ಸಂಗಾತಿ. ಅವನಿಗೆ ತುತ್ತು ಅನ್ನ ಕೊಡೋದೇ ಎತ್ತು. ದನ ದುಡಿದಂಗೆ ದುಡಿತಿಯಲ್ಲೋ ಅನ್ನೋ ಮಾತಿಗೆ ಎಕ್ಸಾಂಪಲ್ ಈ ಪ್ರಾಣಿ. ಅದರ ಉಚ್ಚೆ ಸೆಗಣಿನೂ ಗೊಬ್ಬರ ಆಗ್ತೇತೆ. ಆದರೆ ಈ ಆಸಾಮಿಗೆ ಗೋವಿನ ಮ್ಯಾಗೆ ಮಾತ್ರ ಯಾಕಷ್ಟೊಂದು ಆಕ್ಕರೆ?

ಹಿಂದೆ ಯಜ್ಞಯಾಗ ಮಾಡೋವಾಗ ಹಸು ಎಳೆ ಗರುಗಳನು ಆಹುತಿಕೊಟು ಟೇಸ್ಟ್ ನೋಡಿದ ಈ ಮಂದಿ ಬೌದ್ಧಮತ ಪ್ರಬಲವಾಗಿ ಬೆಳೆಯದೆ ಹೋಗಿದ್ದಿದ್ದರೆ ಈ ಜಮಾನದ ಹೊತ್ಗೆ ಪಕ್ಕಾ ನಾನ್‌ವೆಜ್ ಪಾರ್ಟಿಗಳಾಗಿ ಹೋಗಾರು ಅಂಬೋದ್ರಾಗೆ ಡೌಟೇನಿಲ್ಲ ಬಿಡ್ರಿ. ಗೋಹಾಲು ಡ್ರಿಂಕ್ಸ್ ಮಾಡೋ ರಾಘವೇಶ್ವರಂಗೆ ಅದು ರಕ್ತದಿಂದಲೇ ಆದ ಉತ್ಪತ್ತಿ ಅಂಬೋದು ಯಾಕೆ ಮರಿತೋ! “ತಾಯಿಗಾಗಿ ಮಕ್ಕಳ ಹಾಲು ಕರುಗಳಿಗಾಗಿ ಗೋವಿನ ಹಾಲು” ಅಂತ ಸ್ಲೋಗನ್ ಕೂಗ್ತಾ ಈ ದಯಾಮಯಿ ಯಾಕೆ ಆಮರಣಾಂತ ಉಪವಾಸ ಕುಂಡ್ರಬಾರ್ದು. ಅಗ ಹಾಲಿನ ಡೈರಿ ನೌಕರರು ಈವಯ್ಯನ ಏನು ಮಾಡ್ಯಾರೆಂಬೋದ್ನ ನಿಮ್ಮ ಊಹೆಗೇ ಬಿಡ್ತೇನ್ರಿ. ಅದಿರ್ಲಿ, ಈವಯ್ಯ ಸಂರಕ್ಷಿಸಾಕೆ ಹೊಂಟಿರೋದು ಮುದಿ ಹಸುಗಳ್ನ ಅಂತ್ಲೆ ಇಟ್ಟುಕೊಂಬೋಣ. ಮಾಂಸಕ್ಕಾಗಿ ಗೋಹತ್ಯೆ ನಿಷೇಧ ಅನ್ನೋದಾದರೆ ಇದೇ ಜಾತಿಗೆ ಸೇರೋ ಎತ್ತುಗಳ ಹತ್ಯೆ ಮಾಡ್ಬೋದೆ ಸ್ವಾಮಿ? ಪ್ರಾಣಿಗಳಲ್ಲೆ ಎಂತ ತಾರತಮ್ಯನೋಯಪ್ಪಾ? ಸಾಗರದ ಹತ್ತಿರ ತಾಳಗುಪ್ಪದಾಗೋ ಎಲ್ಲೋ ಹಿಂದೆ ಯಜ್ಞಮಾಡಿ ‘ಕುರಿಯ ವಪೆ’ ನೇವೇದ್ಯ ಮಾಡಿ ಗದ್ದಲ
ಮಾಡಿಕ್ಯಂಡ ಮ್ಯಾಗೇ ಅಲ್ಲೆ ತಂದೆ ನೀನೋಬ್ಬ ಆದಿಯಾ ಅಂತ ಜಗತ್ತಿಗೇ ತಿಳಿದದ್ದು. ಆಮೇಲೆ ಕ್ಷೌರಿಕರ ಬಗ್ಗೆ ಹಗುರವಾಗಿ ಮಾತಾಡಿ ವೇಟ್ ಕಳ್ಕೊಂಡೆ. ಈಗ ಪಬ್ಲಿಸಿಟಿಗಾಗಿ ಗೋವಿನ ಬಾಲ ಹಿಡ್ಕೊಂಡು ಯಾತ್ರೆ ಮಾಡ್ಲಿಕ್ ಹೊಂಟಿದ್ದಿ. ಹುಚ್ಚಿದ್ದಿ ನೀ! ಗೋ ಶಾಲೆ ಮಾಡ್ತೀನಿ ಅಂತಿ ಮಾಡು. ಹಂಗೆ ನಿನ್ನ ಜನಾಂಗದ ಹೈಕ್ಳು ಓದೋಕಾರ ವಿದ್ಯಾಶಾಲೆ ಕಟ್ಟಪ್ಪಾ. ಹವ್ಯಕರಿಗೆ ಹೆಣ್ಣು ಸಿಗಲ್ಲ ಅಂತ ಆಟಿಕೆ ಗಾತ್ರದ ಜುಟ್ಟು ಬಿಟ್ಕಂಡ ಜನ ಅಳ್ಳಿಕತ್ತಾರೆ ಅವರ ಕಣ್ಣೋರ್ಸು. ನಿನ್ನ ಗೋಮಾತೆ ಹಿಂದಾರ ಏಟು ಜನ ಅದಾರೇಳು? ಅದೇ ಬಿಜೆಪಿ ಐಕ್ಳು, ಆಟುಬಿಟ್ರೆ ನಿಮ್ಮೋರೇ ನಿನ್ನ ಬಗ್ಗೆ ಹಿಂದಾಗಡೆ ಮುಸಿ ಮುಸಿ ನಗ್ಲಿಕತ್ತಾರೆ. ದನ ತಿನ್ನೋರ್ಗೆ ಹಸು ಏನು ಕುರಿ ಏನು ಹಂದೇನು ಬಂತು. ಎಲ್ಲಾ ಒಂದೇ ಕಂಣ್ಸಾಮಿ. ಇಲ್ಕೇಳು ಹಸುನಾರ ಮುದಿ ಆಗೋ ಗಂಟ ಬಿಡ್ತಾರೆ. ಆದ್ರೆ ಕುರಿ ಮೇಕೆಗಳಿಗೆ ಆ ಪುಣ್ಯಾನೂ ಇಲ್ಲ. ಅವೂ ಹಾಲು ಕೊಡ್ತಾವೆ. ಮೇಕೆ ಹಾಲು ಕುಡಿತಿತ್ತು ಗಾಂಧಿ ಮಾತ್ಮ… ಓದ್ಕಂಡಿಯೇನು ಆವಜ್ಜನ ಬಗ್ಗೆ? ಎಮ್ಮೆ ಸಖತ್ ಹಾಲು ಕೊಡ್ತೇತೆ. ಕುರಿ ಮೇಕೆ ಎಮ್ಮೆ ಹಂದೀದು ಜಬರದಸ್ತ್ ಗೊಬ್ಬರಾನೇ. ಕುರಿ ಕೂದಲ್ದಾಗ ಕಂಬಳಿನೇಯ್ತಾರೆ. ಉಣ್ಣೆ ತೆಗ್ದು ರಗ್ ಮಾಡ್ತಾರೆ. ವುಲನ್ ರಗ್ಗು ಚಳಿಯಾದಾಗ ತಾವೂ ಹೊದ್ಕೊಂಡಿರ್ಬೋದು. ಗೋವು ಒಂದೇ ಅಲ್ಲಪ್ಪಾ, ಎಲ್ಲಾ ಪ್ರಾಣಿಗಳ ಬಗ್ಗೆನೂ ವಸಿ ದಯೆತೋರ್ಸು ನನ್ ತಂದೆ ದಯೆ ತೋರು ಸಕಲ ಪ್ರಾಣಿಗೆಳೆಲ್ಲರೊಳು ಅಂದೋರು ಯಾರು ಗೊತ್ತಾ? ನಿಮ್ಮ ಕುಲದಾಗೇ ಹುಟ್ಟಿ ಕುಲಕ್ಕೆ ಕುಲ ಮೂಲವೆಂಬಂತಾದ ಬಸವಣ್ದ ಕಣಪ್ಪಾ. ಗೋಹತ್ಯೆ ಬಗ್ಗೆ ಮಾತ್ರ ಯಾಕಪ್ಪಾ ಯಾತ್ರೆ ಹೊಂಟಿ? ಎತ್ತು ಎಮ್ಮೆ ಕುರಿ ಮೇಕೆ ಮ್ಯಾಗೂವಸಿ ದಯೆ ಮಡ್ಗಿ. ಇವುಗಳ ಹತ್ಯೇನೂ ನಿಷೇಧ ಮಾಡ್ಬೆಬೇಕಂತ ಹಠ ಯೋಗ ಮಾಡು ಆಗ ನಿನ್ನ ಯೋಗ ಯೋಗ್ಯತೆ ಎಲ್ಡೂ ಹೆಚ್ಚುತ್ತದೆ. ಗೋವು ಅಂದ್ರೆ ಬ್ರಾಮಣ ಉಳಿದ ಪ್ರಾಣಿಗಳೆಲ್ಲಾ ಶೂದ್ರ ಮುಂಡೇವ್ನಂಗೆ ಅಂಬೋ ಇಚಾರ ಏನಾರ ಮನದಾಗೆ ಮಡಿಕ್ಕಂಡಿಯೋ ಹೆಂಗೆ?

ಹೆಂಗೂ ಟೂರ್ ಹೊಂಟಿದಿಯಾ ಗೋವು ಎತ್ತು ಎಮ್ಮೆ ಕುರಿ ಮೇಕೆಗಳ ಹತ್ಯೆ ನಿಷೇಧಕ್ಕೂ, ‘ಟ್ರೈ’ ಮಾಡಿದ್ಯೋ ಏಕ್ದಂ ವರಲ್ಡ್ ಫೇಮಸ್ ಆಗೋಗ್ತಿ ನನ್ ತಂದಿ. ಈಗೀಗ ನೀವೆಲ್ಲಾ ಜಿನಾಸನದ ಮ್ಯಾಗ ಕುಂದ್ರಾದು ಬಿಟ್ಟರಾ. ಅದೇ ಕಣ್ರಿ ಜಿಂಕೆ ಚರ್ಮದ ಚಾಪೆ. ಆದ್ರೂವೆ ರೇಷ್ಮ ಶಾಲು ಮುಗಟ ಬಿಟ್ಟಿಲ್ಲವಲ್ಲ ಯಾಕೆ? ರೇಷ್ಮೆ ಹುಳಗಳ್ನ ಬೇಯ್ಸಿ ಸಾಯಿಸಿ ನೂಲು ತೆಗೆಯೋದು ತಮಗೆ ಹಿಂಸೆ ಆನ್ನಿಸಂಗಿಲ್ಲೇನ್ರಿ! ಹೇಳ್ತಾ ಹೊಂಟರೆ ಭಾಳ ಐತೆ. ನಿಮ್ಮ ಉತ್ಸವದ ಮುಂದಗಡೆ ಡೋಲು ಹೊಡಿತಾರಲ್ಲ ಡೋಲು, ಅದರ ಚರ್ಮ ಯಾವ ಪ್ರಾಣಿದು ಗೊತ್ತದೇನ್ರಿ? ಡೋಲು ಶಬ್ದದ ಹಿಂದೆ ಅಂಬಾ ಅಂದಂಗೆ ಕೇಳದಿಲ್ಲೇನಪಾ. ‘ನನ್ನ ಬದುಕು ಗೋವಿನ ಸಂತತಿಗಾಗಿ ಅರ್ಪಿತ’ ಅಂತ ಘೋಷಣೆ ಕೂಗಿಯಲ್ಲಾ ಉಳಿದ ಪ್ರಾಣಿ ಪಕ್ಷಿಗಳ ಪ್ರಪಂಚದ ಮ್ಯಾಗೂ ವಸಿ ಥಿಂಕ್ ಮಾಡೋಯಪಾ. ದನದ ಬಗ್ಗೆ ನಿನ್ನ ಬದುಕ್ನೇ ಅರ್ಪಿಸೋಕೆ ಹೊಂಟಿರೋ ಮಾನುಭಾವ ಅದ್ರಾಗೆ ಒಂದೀಟು ಉಳಿಸಿ ಅಟ್‌ಲೀಸ್ಟ್ ನಿನ್ನ ಜನಾಂಗದೋರ ಬದುಕು ಬವಣೆಗಳ ಬಗ್ಗೆನೂ ಅಮೂಲ್ಯವಾದ ನಿನ್ನ ಬದುಕನ್ನು ಮುಡಿಪಾಗಿಸೋ ನನ್ತಂದಿ. ದನದ ಬಗ್ಗೆ ಇದ್ದಂಗೆ ಜನದ ಸಂರಕ್ಷಣೆ ಬಗ್ಗೆನೂ ವಸಿ ಗ್ಯಾನ ಮಡ್ಗು ಬೇಜಾನ್ ಪಬ್ಲಿಸಿಟಿ ಸಿಗ್ತದೆ ಕಣ್ಸಾಮಿ ಬದುಕಿಲ್ಲದ ಬಡಗಿ ಮಗಂದ ಅದೇನೋ ಕೆತ್ತಿದ್ನಂತೆ ಹಂಗಾಗಾದು ಬ್ಯಾಡ. ನಿನ್ನ Go-ಯಾತ್ರೆ. ಗೋದಾನ ಭೂದಾನ ಭೂರಿ ಭೋಜನ ದಕ್ಷಿಣೆ ಕಾಸ್ನಾಗೇ ಮೈ ಬೆಳಸ್ಕಂಡ ಮಹಾ ಜನರಾದ ನೀವು ಜನರ ಮಧ್ಯೆ ತಾರತಮ್ಯ ಮಾಡಿದ್ದು ಸಾಲ್ದೆ ಮೂಕ ಪ್ರಾಣಿಗಳ ಬೆನ್ನ ಹತ್ತಿರಲ್ಲೋಯಪ್ಪಾ! ದಯಯೇ ಬೇಕು ಸಕಲ ಪ್ರಾಣಿಗಳೆಲ್ಲರೊಳು ಅಂದ ಅಣ್ಣ ಬಸವಣ್ಣನ ಮಾತು ಕೇಳಿದ್ರೆ ಉದ್ದಾರವಾಗ್ತಿ ತಮಾ. ಇದರಮ್ಯಾಗೆ ಯುವರ್ ವಿಲ್ ಆಂಡ್ ವಿಷ್.
*****
(ದಿ. ೨೩-೦೧-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂದೆಯವರಿಗೆ
Next post ಶಿವಪಾರ್ವತಿಯರ ಸೋಲು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…