Home / ಲೇಖನ / ಅಣಕ / ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ

ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ

ಹೊಡಿಮಗ ಹೊಡಿಮಗ ಹೊಡಿಮಗ
ಬಿಡಬೇಡ ಸಿದ್ದರಾಮನ್ನಾ
ಚಾಮುಂಡೇಶ್ವರಿ ಸುತ್ತಮುತ್ತ
ಪ್ರಚಾರಕ್ಕೆ ಕಾಲಿಡ್ದಂಗೆ
ಎತ್ತಲೆ ಮಗ್ನೆ ಕಾಂಗ್ರೆಸ್ನೋನಾ

ಚುನಾವಣೆಗೆ ಬಂದ ಮೇಲೆ
ಗೆಲ್ಲು ಬೇಕು ಕಣೋ
ಸೋತು ಹೋದ್ರೆ ಕೋಜಾ ಸರ್ಕಾರ
ಕ್ಲೋಸೇ ಕಣೋ || ಹೊಡಿಮಗ||

ಮಗ್ನೆ ನಿದ್ದೆ ಹೊಡಿಬ್ಯಾಡ
ಮನೆಯಾಗೆ ಮುದ್ದೆ ಜಡಿಬ್ಯಾಡ
ಹಳ್ಳಿ ಹಳ್ಳ ಸುತ್ತ ಬೇಕ್ ಕಣಲೇ…..
ಶಿವಬಸಪ್ಪನ್ನ ಮುಂದಿಟ್ಕೊಂಡು
ಸ್ಕೆಚ್ ಹಾಕಬೇಕೋ
ಬಿಜೆಪಿಯೋನ ಹಿಂದಿಟ್ಕೊಂಡು
ಮೂರ್ತ ಇಡಬೇಕೋ
ಗೆದ್ದರೆ ಮಂತ್ರಿ ಕಣೋ ಸೋತ್ರೆ ಕಂತ್ರಿ ಕಣೋ
ಇದುವೆ ರಾಜಕೀಯದೋರ ಹಣೆಬರಹಾ
ಹೊಡಿಮಗ ಹೊಡಿಮಗ ಬಿಡಬೇಡ ಸಿದ್ದರಾಮನ್ನ||

ಹಿಂಗಂತ ಚಾಮುಂಡೇಶ್ವರಿ ಕ್ಷೇತ್ರದಾಗೆ ದ್ಯಾವೇಗೋಡ್ರು ಹಾಡು ಹೇಳ್ತಾ ಲಾಂಗ್ ಹಿಡ್ಕೊಂಡು ಪ್ರಚಾರ ಶುರುಹಚ್ಕಂಡವರೆ ಕಣ್ರಿ. ಕಾಂಗ್ರೆಸ್‌ನಾಗೇನು ಕವಿಗಳಿಲ್ವೆ? ಸಿಂಗರ್‌ಸಿಲ್ವೇ?  ಗೋಡ ‘ಜೋಗಿ’ ಫೀಲಂ ಸಾಂಗ್ ಸೆಲಕ್ಟ್ ಮಾಡ್ಕಂಡ್ರೆ ಕಾಂಗ್ರೆಸ್ನೋರು ‘ಈರ ಬಬ್ರುವಾಹನ’ ಫೀಲಂ ಸಾಂಗ್ ಮಾಡ್ಕಂಡವರೆ.

ಯಾರು ತಿಳಿಯರು ಗೋಡ ನಿನ್ನ ಭುಜಬಲದ ಪರಾಕ್ರಮ
ಚುನಾವಣೆಯೊಳ್ ಸಾಧಿಸಿದ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣವು ಕುಟುಂಬ ರಾಜಕೀಯ || ಯಾರು||

ಕನಕಪುರದಲಿ ನಿಂತು ತೇಜಮ್ಮ ವಿರುದ್ದ ಪಲ್ಟಿ
ಹೊಡೆದಾಗ ಎಲ್ಲಿ ಅಡಗಿತ್ತೋ ನಿನ್ನ ಶೌರ್ಯ
ಅಹಿಂದವನ್ನು ಕಟ್ಟಿ ಮೆರೆವ ಸಿದ್ದು ಸೈರಿಸದೆ
ಮಗನನ್ನೇ ಸಿ‌ಎಂ ಮಾಡಿದ ಭ್ರಷ್ಟಾ ನೀನು
ಕಾಂಗ್ರೆಸ್ನೋನ ಗೆಲ್ಲುವ ಗುಂಡಿಗೆಯು ನಿನಗೆಲ್ಲೋ
ಹೋಗು ಹೋಗಲೋ ಶಿಖಂಡಿ||

ಯಾವ ಲಾರಿ ಬಸ್ಸು ಟ್ರಾಕ್ಟರು ಆಟೋ ಎತ್ತಿನ ಬಂಡಿ ಮ್ಯಾಗೆಲ್ಲಾ ಮೈಕ್ ಹಾಕ್ಕಂಡು ಎಲ್ಡು ಪಕ್ಷದೋರೂ ಹೊಯ್ಕಳ್ಳಿಕತ್ತಾರ್ರಿ. ಈ ಮದ್ಯೆ ಜೆಡಿಯು ಗುರುಸಾಮಿ ಯಾವ ಫಿಲಂ ಸಾಂಗ್ ಹಾಡ್ಲಿಕತ್ತಾನೆ ಗೊತ್ತದೇನ್ರಿ? ಕೇಳ್ರಲಾ ……

ಇದೇನು ಸಭ್ಯತೆ ಇದೇನು ಸಂಸ್ಕೃತಿ
ಇದೇನು ಗೋಡ್ರ ದರ್ಬಾರು ಅವನ ಮಗನ
ಕಾರುಬಾರು – ನೋಡಲಾರೆ ಎನ್ನುತಿಹಳು
ನಮ್ಮ ತಾಯಿ ಚಾಮುಂಡಿ ||ಇದೇನು||
ದಾಸನಕೊಪ್ಪ ಬೋಗಾದೀಲಿ ಪ್ರಚಾರ ಮಾಡಿದ್ಹಾಗೆ/ಜೆಡಿ‌ಎಸ್ಸು ಬಿಜೆಪಿನೋರು
ನಡಿಸಿಹರು ಪೈಪೋಟಿ
ಇದರ ನಡುವೆ ಸಿಕ್ಕು ನಾನು ಆಗಿಹೆ ಪಡಪೋಸಿ
ಅಕ್ರಮ ಚುನಾವಣೆಯ ತಡೆಯಲೊಂದೆದಾರಿ
ಚುನಾವಣೆಯ ನಿಲ್ಲಿಸಿಬಿಟ್ರೆ ನಾನು ನಿಮ್ಗಭಾರಿ ||ಇದೇನು||

ಈ ಸಾಂಗ್ಗೆ ಸಿ‌ಎಂ ಕೊಮಾಸಾಮಿ ನೂ ಸಾಂಗ್ನಾಗೆ ಉತ್ತರ ಕೊಡ್ತಾರ್ರಿ. ಮೊದ್ಲೆ ಆವಯ್ಯ ಫೀಲಂ ಮೇಕರ್ರು. ಡೈರಕ್ಟರ್ ಎಸ್. ನಾರಾಯಣನೇ ಇನ್ ಡೈರಕ್ಟಾಗಿ ಸಾಂಗ್ ಬರ್ಕೊಟ್ಟವನಂತೆ ಅದು ಹಿಂಗಂದೇರಿ. ನಂಬಿದ್ರೆ ನಂಬ್ರಿ ಬಿಟ್ಟರೆ ಬಿಡ್ರಲಾ

ಕಲ್ಲಾದರೆ ನಾನು ಬಡವರ ಮನೆ
ತಳಪಾಯದಲಿ ಇರುವೆ
ಮರವಾದರೆ ನಾನು ರೈತರ ಮನೆ
ಒಲೆಯಲಿ ಧಗಧಗ ಉರಿವೆ
ಬೊಂಬಾದರೆ ನಾನು ನಿರ್ಗತಿಕರ
ಚಟ್ಟದಲಿ ಮಲಗಿರುವೆ|
ಗಳವಾದರೆ ನಾನು ದರಿದ್ರರ ಮನೆ
ಜಂತಿಯಲಿರುವೆ
ಏನಾದರೂ ಸೈ
ಶಿವಬಸಪ್ಪನ ಗೆಲುವಿಗೆ
ದುಡಿವೆ||  ಗೋಡ್ರ ಕಂದ| ಮಾತು ತಪ್ಪನೆಂದ|
ಶಿವಬಸಪ್ಪ ಕ್ಯಾಂಡಿಡೇಟ್| ಹೆಸರಿಗಷ್ಟೆ ಅಂದ|
ನಿಜಕ್ಕೂ ನಿಂತೋರು| ಅಪ್ಪ ನಾನೆ ಎಂದ || ಕಲ್ಲಾದರೆ||

ದಾಸನಕೊಪ್ಪಲು ಬೋಗಾದಿನಾಗೆ ಬೇರೋಯನ ಪ್ರಚಾರ ಮಾಡ್ಲಿಕ್ಕೆ ಬಿಡಂಗಿಲ್ಲರಿ ಅಂತ ಕೇಳಿದ್ರೆ. ಅದು ಜನತಾ ಜನಾರ್ಧನನ ನಿರ್ಧಾರ. ನಾನೇನು ಮಾಡ್ಲಿ ಅಂತಾನೆ ಕೊಮಾರ! ಸಂವಿಧಾನ ಏನ್ ಹೇಳ್ತದೆ ಗೊತ್ತದೇನ್ರಿ ಅಂದ್ರೆ. ಅದನ್ನ ಬರೋದನೆ ಕೇಳ್ರಿ, ಅಂತೋನೆ. ಇದರಿಂದ ಬೇಸತ್ತ ಅರ್ಧಸತ್ತೇ ಹೋದ ಸಮಾಜವಾದಿ ಪಕ್ಷದ ಕರುಣಾಕರನದು ಉಡಾಫೆ ಸಾಂಗು

ಯಾರೇ ಕೂಗಾಡಲಿ ಊರೇ ಹೋರಾಡಲಿ
ನನ್ನ ನೆಮದಿಗೆ ಭಂಗವಿಲ್ಲ ನಾನಂತೂ ಗೆಲ್ಲೋದಿಲ್ಲ
ಕಾಂಗ್ರೆಸ್ ಜೆಡಿ‌ಎಸ್ ಜೆಡಿಯು ಇಂಡಿಪೆಂಡೆಂಟು
ಯಾರು ನಿಂತರು ಗೆಲ್ಲೋನು ಒಬ್ಬನೆ ಎಂದರಿತು
ಸಾಗುವೆ ಅರೆ ಹೊಯ್ ಅರೆ ಹೊಯ್ ಟುರ್ರಾಽಽಽ

ನಮ್ಮ ಅಂಬರೀಸು ಇದನ್ನೆಲ್ಲಾ ನೋಡಿ ರಾಂಗ್ ಆಗಿ ಸಿನಿಮಾದಾಗೆ ಪಿಸ್ತೂಲು ತಕ್ಕಂಡು ವಿಲನ್‌ಗುಳ್ಗೆ ‘ಢಂ’ ಅನ್ನಿಸ್ದಂಗೆ ಸಿದ್ರಾಮು ಇರುದ್ದ ನಿಂತಿರೋ ಹೈವಾನನೆಲ್ಲಾ ಎತ್ತು ಬಿಡ್ತೀನ್ನಿ ಅನ್ಲಿಕತ್ತಾನೆ. ಈ ಡೈಲಾಗ್ ಕೇಳಿ ಗಾಣ್ ಗಾಬರಿಯಾದ ದಬರಿಧರ್ಮು ಖರ್ಗೆ, ಸಿದ್ದು, ಹಂಗ್ ಮಾಡ್ಬೇಡಲೆ ತಮಾ. ರೀಲ್ ಲೈಫ್ನಾಗೆ ಸತ್ತೋರು ಬದುಕಿ ಬರ್ತಾರೆ. ಆದ್ರೆ ರಿಯಲ್ ಲೈಫ್ನಾಗೆ ಹಂಗಾಗಕಿಲ್ಲ. ಮೈ ಸೆಂಟ್ರಲ್ ಬಾಯ್ ಅಂತ ಸಮಾಧಾನ ಮಾಡ್ಲಿಕತ್ತಾರಂತ್ರಿ. ನೆವರ್. ನಾನು ಬೋಗಾದಿ ದಾಸನಕೊಪ್ಪಲಿಗೆ ಕ್ಯಾನ್‌ವಾಸ್ಗೆ ಹೋಗೋನೆಯಾ. ಅದ್ಯಾರು ಈ ಮಂಡ್ಯ ಗಂಡನ್ನ ತಡಿತಾರೋ ಒಂದು ಕೈ ನೋಡೇಬಿಟ್ಟೇನು ಅಂತ ಗುರುಗುಟ್ಲಿಕತ್ತಾನೆ. ಸೆಂಟ್ರಲ್ ಲೀಡರ್ಸುಗುಳೆಲ್ಲಾ ಗೋಡನ್ನ ಪಕ್ಷದಿಂದ್ಲೇ ಉಚಾಟಿಸ್ತಿವಿ ಅಂತ ಧಂಕಿ ಕೊಟ್ಟರೂ ಗೋಡಂದು ಭಂಡನಗೆ. ಇದರ ಮಧ್ಯನಾಗೆ ಬಿಜೆಪಿ ವಾನರರು ಶೋಭಾಯಾತ್ರೆ ದತ್ತ ಜಯಂತಿ ಮಾಡಿ ಹೋಮ ಮಾಡೇ ಮಾಡ್ತೀವಿ ಅಂತ ಸರ್ಕಾರಾನಾ ಬ್ಲಾಕ್‌ಮೇಲ್ ಮಾಡ್ಲಿಕತ್ತಾರೆ. ನಾವು ಹೋಮ ಮಾಡಿ ಪೂರ್ಣಾಹುತಿ ಕೊಟ್ಟರೇ ಯಲಕ್ಷನ್ ಗೆಲ್ಲೋದು ಅಂತ ಸಿಟಿ ರವಿ ಅಂಬೋ ಬಚ್ಚೆ ಬೊಂಬ್ಡಿ ಹೊಡಿಲಿಕತ್ತಾನೆ. ಸೆಂಟ್ರಲ್‌ನಿಂದ ಅರೆ ಸೇನೆ ಪಡೆ ಬೇರೆ ಬಂದು ಅಟಕ್ಯಾಯಸಿಕೊಂಡದೆ. ಪೋಲಿಸ್ ಆಪೀಸಗಳ ಟ್ರಾನ್ಸ್‌ಫರ್‌ಗಳು ಬ್ಯಾರೆ ನೆಡಿಲಿಕತ್ತಾವೆ! ಸಿದ್ದು ಗೆದ್ನಪ್ಪಾ ಅಂದ್ರೆ ನೆಕ್ಸ್ಟ್ ಕೋಜಾ ಸರ್ಕಾರದ್ದೆ ಟ್ರಾನ್ಸ್‌ಫರ್. ಮಾಡೋರು ಯಾರು ಅಂತಿರಾ? ಇನ್ನು ಯಾರು ನೀವೇ. ಕರ್ನಾಟಕದ ಮತದಾರ ಪ್ರಭುಗಳು…ಅಲ್ಲವರಾ.
*****

(೧೪-೧೨-೨೦೦೬)

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...