ಹಸಿರಂಚಿನ ಹಳದಿಪತ್ತಲು ಸುತ್ತಿ
ಬೆಳ್ಳಿಯುಂಗರ ಕಾಲುಗೆಜ್ಜೆ ಬುಗುಡಿ
ನಗುಮೊಗ ತುಂಬಿಕೊಂಡು ಕಣ್ಣರಳಿಸಿ
ಜೀವನದಿಯ ಸುಖದ ಹರಿವು ಬೆಳ್ಳಿ.
ಏನೆಲ್ಲ ನನ್ನ ನಿನ್ನ ನಡುವೆ ಎಂದು
ತಾನಾಗಿಯೇ ತುಂಬಿಕೊಂಡ ಬಂದ
ಮುಂಜಾವಿನ ಎಳೆಬಿಸಿಲಿನ ಉಸಿರಿನೊಳಗೆ
ನೀರವ ರಾತ್ರಿಗೆ ಹರೆಯ ತಬ್ಬಿತು.
ಬೆಳ್ಳಿಮಾತ್ರವಲ್ಲ ಬಂಗಾರ ಹರಿವು ಬಳ್ಳಿ
ಮಕ್ಕಳಿರಲವ್ವ ಮನಿತುಂಬ
ಹರಿಸಿತಂತೆ ದೈವ
ನಾಲ್ಕು ಚಿಲಿಪಿಲಿ ಹುಟ್ಟದಾಗಳಿಗೆ
ಗುಟುಗುಟುಕಿಗೆ ಕೈಒತ್ತಿ ಕಣ್ತುಂಬಿ
ಇಟ್ಟಿಗೆ ಹೊರುವಾ ಮುಸುರೆ ತೊಳೆಯುವಾ
ಅರೆಬರೆ ಹೊಟ್ಟೆಯಾ ಬದುಕಿಗೆ
ಹಸಿರುಪತ್ತಲ ಕಪ್ಪಿಟ್ಟು ಅಲ್ಲಲ್ಲಿ ಚಿಂದಿ
ಹಣೆ ಕೊರಳುಗಳ ತುಂಬೆಲ್ಲಾ ಸುಕ್ಕು
ಒಳಬದುಕಿನ ಬಡಿದಾಟಕ್ಕೆ
ಕಳಚಿದ್ದಾಯ್ತು ಚಿನ್ನ ಬೆಳ್ಳಿ
ಮಾತು ಮೌನ ಏನೆಲ್ಲ
ಬೆಳ್ಳಿಯ ರೆಟ್ಟೆಗೆ ನಾಲ್ಕು ಬಾಯಿ
ಎಂಟೆದೆಯ ಬಂಟ ಕೊಚ್ಚಿಕೊಳ್ಳುವಾತ
ಒಂದಿರುಳು ಕತ್ತಲಲಿ ಹೊರಬಿದ್ದ.
ಗೂಡು ಬಣಬಣಿಸಿದ್ದು
ಉಳಿದದ್ದು ಜೀವ
ತಲೆತುಂಬ ಬೆಳ್ಳಿಕೂದಲು
ಇಪ್ಪತೈದಕ್ಕೇ ಬೆಳ್ಳಿಯಮ್ಮ
*****
ಪುಸ್ತಕ: ಇರುವಿಕೆ